ನವದೆಹಲಿ: ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ 3ನೇ ತ್ರೈಮಾಸಿಕ ಅವಧಿಯ ಜಿಡಿಪಿ ಡಾಟಾ (GDP Data) ಬಿಡುಗಡೆ ಆಗಿದೆ. ಇದರ ಪ್ರಕಾರ ಹಿಂದಿನ ವರ್ಷ ಶೇ. 11.2ರಷ್ಟು ಬೆಳವಣಿಗೆ ಸಾಧಿಸಿದ್ದ ಭಾರತದ ಆರ್ಥಿಕತೆ 3ನೇ ತ್ರೈಮಾಸಿಕ ಅವಧಿಯಲ್ಲಿ ಕೇವಲ ಶೇ. 4.4ರಷ್ಟು ಮಾತ್ರ ಪ್ರಗತಿ ಹೊಂದಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO- National Statistical Office) ಇಂದು ಮಂಗಳವಾರ 3ನೇ ತ್ರೈಮಾಸಿಕ ಅವಧಿಯ ಜಿಡಿಪಿ ವಿವರಗಳಿರುವ ವರದಿಯನ್ನು ಪ್ರಸ್ತುಪಡಿಸಿದೆ.
ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ 2022 ಜುಲೈನಿಂದ ಸೆಪ್ಟಂಬರ್ವರೆಗಿನ ತ್ರೈಮಾಸಿಕದಲ್ಲಿ ಶೇ. 6.3 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿತ್ತು. ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ಮಂದಗೊಂಡಿದ್ದರೂ 2022-23ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7ರಷ್ಟು ಬೆಳೆಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಆದರೆ, ಆರ್ಬಿಐ ಲೆಕ್ಕಾಚಾರ ತುಸು ಭಿನ್ನವಾಗಿತ್ತು. 2022-23ರ ಹಣಕಾಸು ವರ್ಷದಲ್ಲಿ ಶೇ. 7ರಷ್ಟು ಜಿಡಿಪಿ ಬೆಳೆಯಬಹುದು ಎಂದು ಹಿಂದೆ ಅಂದಾಜು ಮಾಡಿದ್ದ ಆರ್ಬಿಐ ಡಿಸೆಂಬರ್ ತಿಂಗಳಲ್ಲಿ ತನ್ನ ಅಂದಾಜನ್ನು ಶೇ. 6.8ಕ್ಕೆ ಇಳಿಸಿತ್ತು. ಐಎಂಫ್, ಎಡಿಬಿ ಸಂಸ್ಥೆಗಳೂ ಕೂಡ ಭಾರತದ ಆರ್ಥಿಕತೆ ಶೇ. 6.8ರ ದರದಲ್ಲಿ ಬೆಳೆಯಬಹುದು ಎಂದು ಅಂದಾಜು ಮಾಡಿದ್ದವು.
ಇದನ್ನೂ ಓದಿ: Apple Jobs: ಆ್ಯಪಲ್ ಕರಾಮತ್ತು; ಕರ್ನಾಟಕ ಸೇರಿ ವಿವಿಧೆಡೆ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ
ಗಮನಾರ್ಹ ಸಂಗತಿ ಎಂದರೆ ಸರ್ಕಾರದ ವಿತ್ತೀಯ ಕೊರತೆ ಅಗಾಧ ಇದೆ. ಉದ್ದೇಶಿತ ಗುರಿಗೆ ಹೋಲಿಸಿದರೆ ವಿತ್ತೀಯ ಕೊರತೆ ಶೇ. 67.8ರಷ್ಟಿದೆ. ಕಡಿಮೆ ಆದಾಯ, ಹೆಚ್ಚು ವೆಚ್ಚ ಇದಕ್ಕೆ ಕಾರಣ. 2022ರ ಏಪ್ರಿಲ್ನಿಂದ 2023 ಜನವರಿ ಅವಧಿಯಲ್ಲಿ ವೆಚ್ಚ ಮತ್ತು ಆದಾಯದ ನಡುವಿನ ಅಂತರವಾದ ವಿತ್ತೀಯ ಕೊರತೆ ಬರೋಬ್ಬರಿ 11.9 ಲಕ್ಷ ಕೋಟಿ ರೂ ಎಂದು ಸಿಜಿಎ ಬಿಡುಗಡೆ ಮಾಡಿದ ದತ್ತಾಂಶಗಳಿಂದ ತಿಳಿದುಬರುತ್ತದೆ.
ಇನ್ನು ಮೂರನೇ ತ್ರೈಮಾಸಿಕದಲ್ಲಿನ ಜಿಡಿಪಿ ಬೆಳವಣಿಗೆ ವಿಷಯಕ್ಕೆ ಬಂದರೆ ವಿವಿಧ ಹಣಕಾಸು ಸಂಸ್ಥೆಗಳು, ರೇಟಿಂಗ್ ಏಜೆನ್ಸಿಗಳು ಬಹುತೇಕ ಸಮಾನ ರೀತಿಯಲ್ಲಿ ಅಂದಾಜು ಮಾಡಿದ್ದವು. ಆರ್ಬಿಐ ಶೇ. 4.4ರಷ್ಟು ಜಿಡಿಪಿ ಬೆಳೆಯಬಹುದು ಎಂದು ನಿಖರವಾಗಿ ಅಂದಾಜು ಮಾಡಿತ್ತು. ಇಕ್ರಾ ರೇಟಿಂಗ್ ಏಜೆನ್ಸಿ ಶೇ. 5.1, ಎಸ್ಬಿಐ ಶೇ. 4.6, ಬಾರ್ಕ್ಲೇಸ್ ಇಂಡಿಯಾ ಶೇ. 5 ರಷ್ಟು ಭಾರತದ ಜಿಡಿಪಿ ಬೆಳೆಯಬಹುದು ಎಂದು ಅಂದಾಜಿಸಿದ್ದವು.
Published On - 5:54 pm, Tue, 28 February 23