ನವದೆಹಲಿ, ಡಿಸೆಂಬರ್ 22: ವಿಶ್ವದ ಹೆಚ್ಚಿನ ದೇಶಗಳೊಂದಿಗೆ ಸೌಹಾರ್ದಯುತ ಮತ್ತು ವಿಶ್ವಾಸಯುತ ಸಂಬಂಧ ಇರುವ ದೇಶಗಳ ಸಂಖ್ಯೆ ಹೆಚ್ಚಿಲ್ಲ. ಅಂತಹ ವಿರಳ ದೇಶಗಳಲ್ಲಿ ಭಾರತವೂ ಒಂದು ಎಂದು ಮಾಜಿ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ (Walter J. Lindner) ಹೇಳಿದ್ದಾರೆ. ಹಲವು ರಾಷ್ಟ್ರಗಳು ಭಾರತದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ. ಅಮೆರಿಕದಂತಹ ಪ್ರಬಲ ರಾಷ್ಟ್ರವು ಭಾರತವನ್ನು ಹೊಗಳುತ್ತದೆ. ಭಾರತಕ್ಕೆ ಸಹಾಯ ಮಾಡಲು ರಷ್ಯಾ ಯಾವಾಗಲೂ ಸಿದ್ಧವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತವಿಲ್ಲದ ಅಂತಾರಾಷ್ಟ್ರೀಯ ಸಂಬಂಧಗಳು ಅಪೂರ್ಣವೆಂದು ಅನೇಕ ದೇಶಗಳು ಭಾವಿಸುವುದನ್ನು ಅಲ್ಲಗಳೆಯುವಂತಿಲ್ಲ ಎಂದು 2019ರಿಂದ 2022ರವರೆಗೂ ಭಾರತಕ್ಕೆ ಜರ್ಮನ್ ರಾಯಭಾರಿಯಾಗಿದ್ದ ವಾಲ್ಟರ್ ಲಿಂಡ್ನರ್ ಹೇಳಿದ್ದಾರೆ.
‘ವಾಟ್ ದ ವೆಸ್ಟ್ ಶುಡ್ ಲರ್ನ್ ಫ್ರಂ ಇಂಡಿಯಾ’ (ಪಶ್ಚಿಮ ದೇಶಗಳು ಭಾರತದಿಂದ ಕಲಿಯುವುದೇನು?’ ಎನ್ನುವ ಪುಸ್ತಕದಲ್ಲಿ ವಾಲ್ಟರ್ ಲಿಂಡ್ನರ್ ಅವರು ಹೊಸ ವಿಶ್ವ ವ್ಯವಸ್ಥೆಯಲ್ಲಿ ಭಾರತದ ಪಾತ್ರವೇನಿರಬಹುದು ಎನ್ನುವ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕದ ಬಗ್ಗೆ ಹಾಗೂ ಭಾರತದ ಬಗ್ಗೆ ಅವರು ಎಕನಾಮಿಕ್ ಟೈಮ್ಸ್ನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಂದು ದೇಶದ ಬಗ್ಗೆ ಪುಸ್ತಕಗಳು ಬರೆಯಲಾಗುತ್ತಿದೆ ಎಂದರೆ ಆ ದೇಶದ ಆರ್ಥಿಕತೆ ಬೆಳೆಯುತ್ತಿದೆ ಎಂದು ಭಾವಿಸಬಹುದು. ಚೀನಾದ ಆರ್ಥಿಕತೆ ಬೆಳೆಯುತ್ತಿದ್ದಾಗ ಹೀಗೆ ಪುಸ್ತಕಗಳು ಪ್ರಕಟವಾಗಿದ್ದವು. ಈಗ ಭಾರತದ ಬಗ್ಗೆ ಪುಸ್ತಕಗಳು ಪ್ರಕಟವಾಗುತ್ತಿವೆ. ಇದು ಭಾರತದ ಆರ್ಥಿಕ ಬೆಳವಣಿಗೆ ಸಾಧಿಸಲಾಗುತ್ತಿರುವುದರ ದ್ಯೋತಕವಾಗಿದೆ ಎಂಬುದು ವಾಲ್ಟರ್ ಜೆ ಲಿಂಡ್ನರ್ ಅವರ ಅನಿಸಿಕೆ.
ಇದನ್ನೂ ಓದಿ: ಜಿಎಸ್ಟಿ ದರಗಳಲ್ಲಿ ಬದಲಾವಣೆ; ಯಾವುವು ಅಗ್ಗ, ಯಾವುವು ದುಬಾರಿ, ಇಲ್ಲಿದೆ ಪಟ್ಟಿ
ಸಾಫ್ಟ್ ಪವರ್ ಎಂಬುದು ಭಾರತದ ಡಿಎನ್‌ಎನಲ್ಲೇ ಇದೆ. ಹೀಗಾಗಿ, ಈ ಮೃದುಶಕ್ತಿಯು ಭಾರತಕ್ಕೆ ಯಾವಾಗಲೂ ಇದ್ದೇ ಇರುತ್ತದೆ. ಅದರ ಇತಿಹಾಸ, ಆದ್ಯಾತ್ಮಿಕತೆ, ಸಂಸ್ಕೃತಿ, ಧರ್ಮ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ವಿಶ್ವಾದ್ಯಂತ ಭಾರತದ ಛಾಪು ಇದೆ. ಈಗ ಭಾರತದಲ್ಲಿ ವಿಶ್ವದಲ್ಲೇ ಅತಿದೊಡ್ಡ ಜನಸಂಖ್ಯೆ ಇದೆ. ಈಗ ಭಾರತ ಸಾಫ್ಟ್ ಪವರ್ಗಿಂತಲೂ ದೊಡ್ಡ ಪ್ರಭಾವ ಹೊಂದಿದೆ. ಭಾರತದ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆ ಇಲ್ಲದೇ ಜಗತ್ತು ಮುಂದಡಿ ಇಡಲು ಆಗುವುದಿಲ್ಲ ಎನ್ನುವ ಸ್ಥಿತಿ ಇದೆ ಎಂದು ಸಂಗೀತಜ್ಞರೂ ಆದ ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ಲಾಸ್ಟಿಕ್ ವಿರುದ್ಧ ಹೋರಾಡಲೋ, ಅಥವಾ ಮೆಗಾ ಸಿಟಿಗಳನ್ನು ರೂಪಿಸಲೋ ಯಾರಾದರೂ ಏನಾದರೂ ಮಾಡಬೇಕೆಂದರೆ ಮೊದಲು ಭಾರತದಲ್ಲಿ ಅದಕ್ಕೆ ಪರಿಹಾರ ಹುಡುಕಬೇಕು ಎಂದು ವಾಲ್ಟರ್ ಜೆ ಲಿಂಡ್ನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಷ್ಟು ಥರದ ಇಟಿಎಫ್ಗಳಿವೆ? ನಿಮಗೆ ಸೂಕ್ತವೆನಿಸಿವ ಫಂಡ್ಗಳನ್ನು ಆಯ್ದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಕಳೆದ ಎರಡು-ಮೂರು ವರ್ಷಗಳಿಂದ ಆಗುತ್ತಿರುವ ಜಾಗತಿಕ ರಾಜಕೀಯ ವಿಚಲನಗಳು, ಯುದ್ಧ, ಬಿಕ್ಕಟ್ಟು ಇತ್ಯಾದಿ ಪರಿಸ್ಥಿತಿಯಲ್ಲೂ ಭಾರತವು ಸೂಪರ್ಪವರ್ ಗುಂಪುಗಳ ನಡುವೆ ಸಮತೋಲನ ಸಾಧಿಸಲು ಯಶಸ್ವಿಯಾಗಿದೆ. ಪೂರ್ವ ಮತ್ತು ಪಶ್ಚಿಮ, ಹಾಗೂ ಉತ್ತರ ಮತ್ತು ದಕ್ಷಿಣ ನಡುವೆ ಸೇತುವಾಗಿದೆ ಎಂದು ವಾಲ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ