Inflation: ಕೊನೆಗೂ ಹಳಿಗೆ ಬಂದ ಹಣದುಬ್ಬರ; ಶೇ. 5.6ಕ್ಕೆ ಇಳಿದ ರೀಟೇಲ್ ಇನ್​ಫ್ಲೇಶನ್

|

Updated on: Apr 12, 2023 | 7:02 PM

India Inflation Comes Down: ಭಾರತಕ್ಕೆ ತಲೆನೋವಾಗಿದ್ದ ಹಣದುಬ್ಬರ ಇದೀಗ ತಾಳಿಕೆಯ ಮಿತಿಯೊಳಗೆ ಬಂದಿದೆ. ಶೇ. 6.4ರಷ್ಟು ಇದ್ದ ರೀಟೇಲ್ ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಶೇ. 5.6ಕ್ಕೆ ಬಂದಿರುವುದು ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ತಿಳಿದುಬಂದಿದೆ.

Inflation: ಕೊನೆಗೂ ಹಳಿಗೆ ಬಂದ ಹಣದುಬ್ಬರ; ಶೇ. 5.6ಕ್ಕೆ ಇಳಿದ ರೀಟೇಲ್ ಇನ್​ಫ್ಲೇಶನ್
ಹಣದುಬ್ಬರ
Follow us on

ನವದೆಹಲಿ: ಭಾರತಕ್ಕೆ ತಲೆನೋವಾಗಿದ್ದ ಹಣದುಬ್ಬರ (India Inflation Rate) ಇದೀಗ ತಾಳಿಕೆಯ ಮಿತಿಯೊಳಗೆ ಬಂದಿದೆ. ಶೇ. 6.4ರಷ್ಟು ಇದ್ದ ರೀಟೇಲ್ ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಶೇ. 5.6ಕ್ಕೆ ಬಂದಿರುವುದು ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ತಿಳಿದುಬಂದಿದೆ. ಗ್ರಾಹಕ ಬೆಲೆ ಸೂಚಿ (CPI- Consumer Prices Index) ಆಧಾರಿತ ಹಣದುಬ್ಬರ ಅಥವಾ ಚಿಲ್ಲರೆ ಹಣದುಬ್ಬರವು ಜನಸಾಮಾನ್ಯರು ತಮ್ಮ ದೈನಂದಿನ ಜೀವನಕ್ಕೆ ಬಳಸುವ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಆಗಿರುವ ವ್ಯತ್ಯಯವನ್ನು ಪರಿಗಣಿಸುತ್ತದೆ. ಈ ಹಣದುಬ್ಬರ ಶೇ. 2-6ರೊಳಗೆ ಇರಬೇಕೆಂದು ಆರ್​ಬಿಐ ಮಿತಿ ಹಾಕಿದೆ. ವರ್ಷದಿಂದ ಹಣದುಬ್ಬರ ಶೇ. 6ಕ್ಕಿಂತ ಹೆಚ್ಚಿನ ಮಟ್ಟದಲ್ಲೇ ಇತ್ತು. ಫೆಬ್ರುವರಿಯಲ್ಲಿ ಹಣದುಬ್ಬರ ತುಸು ತಗ್ಗಿದ್ದರೂ ಶೇ. 6ಕ್ಕಿಂತ ಮೇಲ್ಮಟ್ಟದಲ್ಲಿತ್ತು. ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಕೆಳಗಿಳಿಯಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು. ಹಣದುಬ್ಬರ ಈ ಹಣಕಾಸು ವರ್ಷದಲ್ಲಿ ಶೇ. 5.2ಕ್ಕೆ ಇಳಿಯಬಹುದು ಎಂದೂ ಸ್ವತಃ ಆರ್​ಬಿಐ ಅಂದಾಜು ಮಾಡಿತ್ತು. ಈ ಕಾರಣಕ್ಕೆ ಆರ್​ಬಿಐ ಇತ್ತೀಚಿನ ಎಂಪಿಸಿ ಸಭೆಯಲ್ಲಿ ರೆಪೋ ದರದಲ್ಲಿ ವ್ಯತ್ಯಯ ಮಾಡದೇ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿತ್ತು. ಅಂತೆಯೇ ರೆಪೋ ದರ ಶೇ. 6.50ರಲ್ಲಿ ಮುಂದುವರಿದಿದೆ.

ಹಣದುಬ್ಬರ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಮೇಲೆ ಮುಂದಿನ ರೆಪೋ ದರಗಳು ನಿಂತಿರುತ್ತವೆ ಎಂದು ಆರ್​ಬಿಐ ಹೇಳಿದೆ. ಅಂದರೆ ಹಣದುಬ್ಬರ ತಾಳಿಕೆಯ ಮಟ್ಟಕ್ಕಿಂತ ಕೆಳಗೆ ಇಳಿಯದಿದ್ದರೆ ಬಡ್ಡಿ ದರ ಹೆಚ್ಚಳ ಮತ್ತೆ ಶುರು ಮಾಡಬೇಕಾಗಬಹುದು ಎಂಬುದು ಆರ್​ಬಿಐ ನೀಡಿದ ಸಂದೇಶವಾಗಿತ್ತು. ಆದರೆ, ಇದೀಗ ತಾಳಿಕೆಯ ಮಿತಿಗಿಂತ ಹಣದುಬ್ಬರ ಕಡಿಮೆ ಆಗಿದೆ. ಈ ತಿಂಗಳು, ಅಂದರೆ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಇನ್ನೂ ಕೆಳಗಿಳಿದರೆ ಆರ್​ಬಿಐ ತನ್ನ ಬಡ್ಡಿ ದರದಲ್ಲಿ ಹೆಚ್ಚಳ ಮಾಡುವ ಗೋಜಿಗೆ ಹೋಗದಿರುವ ಸಾಧ್ಯತೆಯೇ ಹೆಚ್ಚು.

ಇದನ್ನೂ ಓದಿLIC Investments: ಅದಾನಿ ಗ್ರೂಪ್​ನಿಂದ ಮ್ಯೂಚುವಲ್ ಫಂಡ್​ಗಳು ಹೊರಬಿದ್ದರೂ ಹೂಡಿಕೆ ಹೆಚ್ಚಿಸಿದ ಎಲ್​ಐಸಿ

ಕಚ್ಛಾ ತೈಲ ಬೆಲೆ ಹೆಚ್ಚಾದರೂ ಭಾರತದಲ್ಲಿ ಹಣದುಬ್ಬರ ಸ್ವಲ್ಪಮಟ್ಟಿಗೆ ಅಂಕೆಯಲ್ಲಿದೆ ಎಂಬುದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಅನಿಸಿಕೆ. 2022-23ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಹಣದುಬ್ಬರ ಎಷ್ಟು ಇದೆ ಎಂಬ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕಿದೆ.

ವರ್ಲ್ಡ್ ಡಾಟಾ ಇನ್ಫೋ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿರುವ ಕುತೂಹಕಾರಿ ಮಾಹಿತಿ ಪ್ರಕಾರ ಭಾರತದಲ್ಲಿ 1960ರಿಂದ ಇಲ್ಲಿಯವರೆಗೆ ಸರಾಸರಿ ಹಣದುಬ್ಬರ ವರ್ಷಕ್ಕೆ ಶೇ. 7.50ರಷ್ಟಿದೆ. ಅಂದರೆ ಜನರ ದೈನಂದಿನ ಬಳಕೆಯ ವಸ್ತುಗಳ ಬೆಲೆ ಪ್ರತೀ ವರ್ಷವೂ ಶೇ. 7.50ರಷ್ಟು ಹೆಚ್ಚುತ್ತಾ ಬಂದಿದೆ.

ಅಮೆರಿಕದಲ್ಲೂ ಹಣದುಬ್ಬರ ಇಳಿಕೆ

ಭಾರತ ಮಾತ್ರವಲ್ಲ ಜಾಗತಿಕವಾಗಿಯೂ ಹಣದುಬ್ಬರ ತಹಬದಿಗೆ ಬರುತ್ತಿರುವಂತಿದೆ. ಇಡೀ ವಿಶ್ವಕ್ಕೆ ತಲೆನೋವಾಗಿದ್ದ ಅಮೆರಿಕದ ಹಣದುಬ್ಬರವೂ ಕಡಿಮೆ ಆಗುತ್ತಿದೆ. ಆರ್ಥಿಕ ತಜ್ಞರು ಅಂದಾಜು ಮಾಡಿದ್ದಕ್ಕಿಂತ ಹಣದುಬ್ಬರ ಅಮೆರಿಕದಲ್ಲಿ ಕಡಿಮೆ ಆಗಿದೆ. ನಿರೀಕ್ಷಿಸಿದ ರೀತಿಯಲ್ಲಿ ಗ್ರಾಹಕ ಬೆಲೆಗಳು ಏರಿಕೆ ಆಗಿಲ್ಲ.

ಇದನ್ನೂ ಓದಿSSY: ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ 40 ಮೂಲಾಂಕಗಳಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ; ಹೆಣ್ಮಕ್ಕಳ ಈ ಸ್ಕೀಮ್​ನಿಂದ ಎಷ್ಟು ಲಾಭ?

ಇದರಿಂದ ಅಮೆರಿಕದ ಫೆಡರಲ್ ಬ್ಯಾಂಕು ತನ್ನ ಬಡ್ಡಿ ದರ ಏರಿಕೆಯ ಟ್ರೆಂಡ್ ಅನ್ನು ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಈ ಹಣದುಬ್ಬರ ತಗ್ಗುತ್ತಿರುವ ಮಾಹಿತಿ ಹೊರಬರುತ್ತಿರುವಂತೆಯೇ ಅಮೆರಿಕದ ಷೇರುಪೇಟೆಗಳು ಮಿರ ಮಿರ ಮಿಂಚತೊಡಗಿವೆ. ಎಸ್ ಎಂಡ್ ಪಿ 500, ಡೌವ್ ಜೋನ್ಸ್, ನಾಸ್ಡಾಕ್-100 ಫ್ಯೂಚರ್ಸ್ ಇತ್ಯಾದಿ ಸ್ಟಾಕ್ ಮಾರ್ಕೆಟ್​ಗಳು ಶೇ. 1ರವರೆಗೂ ಏರಿಕೆ ಕಂಡಿವೆ. ಹೂಡಿಕೆದಾರರು ಮತ್ತು ಷೇರುಪೇಟೆಯತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Wed, 12 April 23