LIC Investments: ಅದಾನಿ ಗ್ರೂಪ್ನಿಂದ ಮ್ಯೂಚುವಲ್ ಫಂಡ್ಗಳು ಹೊರಬಿದ್ದರೂ ಹೂಡಿಕೆ ಹೆಚ್ಚಿಸಿದ ಎಲ್ಐಸಿ
Adani Group and LIC: ಅದಾನಿ ಗ್ರೂಪ್ಗೆ ಸೇರಿದ ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್ಪ್ರೈಸಸರ್ ಮತ್ತು ಅದಾನಿ ಟ್ರಾನ್ಸ್ಮಿಶನ್ ಕಂಪನಿಗಳಲ್ಲಿನ ತನ್ನ ಪಾಲನ್ನು ಎಲ್ಐಸಿ ಹೆಚ್ಚಿಸಿಕೊಂಡಿದೆ. ಅದೇ ವೇಳೆ, ಅದಾನಿ ಗ್ರೂಪ್ನ ಇನ್ನೆರಡು ಕಂಪನಿಗಳಾದ ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ನಲ್ಲಿನ ತನ್ನ ಪಾಲಿನ ಕೆಲ ಷೇರುಗಳನ್ನು ಎಲ್ಐಸಿ ಮಾರಾಟ ಮಾಡಿದೆ.
ನವದೆಹಲಿ: ಹಿಂಡನ್ಬರ್ಗ್ ರೀಸರ್ಚ್ ವರದಿ ಪ್ರಕಟವಾದ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ಅದಾನಿ ಗ್ರೂಪ್ಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (LIC- Life Insurance Corporation) ಬೆಂಬಲ ಮುಂದುವರಿಯುತ್ತಿರುವಂತಿದೆ. ಅದಾನಿ ಗ್ರೂಪ್ಗೆ ಸೇರಿದ ನಾಲ್ಕು ಕಂಪನಿಗಳ ಇನ್ನಷ್ಟು ಷೇರುಗಳನ್ನು ಎಲ್ಐಸಿ ಖರೀದಿಸಿರುವುದು ತಿಳಿದುಬಂದಿದೆ. ಹಿಂಡನ್ಬರ್ಗ್ ವರದಿ ಬಳಿಕ ಹೂಡಿಕೆದಾರರು ಅದಾನಿ ಕಂಪನಿಗಳ ಷೇರುಗಳ ಮಾರಾಟ ಭರಾಟೆಯಲ್ಲಿ ತೊಡಗಿಸಿಕೊಂಡ ಹೊತ್ತಿನಲ್ಲಿ ಎಲ್ಐಸಿ ಖರೀದಿಯಲ್ಲಿ ಮಗ್ನವಾಗಿತ್ತು. ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕದಲ್ಲಿ ಅದಾನಿ ಗ್ರೂಪ್ನ ಕಂಪನಿಗಳ ಪೈಕಿ ನಾಲ್ಕರಲ್ಲಿ ಎಲ್ಐಸಿ ತನ್ನ ಹೂಡಿಕೆ ಮೊತ್ತವನ್ನು ಹೆಚ್ಚಿಸಿ ಗಮನ ಸೆಳೆದಿದೆ. ಇತ್ತ ಎಲ್ಐಸಿಗೆ ಕಡಿಮೆ ಬೆಲೆಗೆ ಷೇರುಗಳು ಸಿಕ್ಕಂತಾಗಿದೆ. ಅತ್ತ ಅದಾನಿ ಗ್ರೂಪ್ಗೆ ಒಂದಷ್ಟು ಸ್ಥೈರ್ಯ ತುಂಬಲು ಎಲ್ಐಸಿ ನಡೆ ಕಾರಣವಾಗಿದೆ.
ವರದಿಗಳ ಪ್ರಕಾರ, ಅದಾನಿ ಗ್ರೂಪ್ಗೆ (Adani Group) ಸೇರಿದ ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್ಪ್ರೈಸಸ್ ಮತ್ತು ಅದಾನಿ ಟ್ರಾನ್ಸ್ಮಿಶನ್ ಕಂಪನಿಗಳಲ್ಲಿನ ತನ್ನ ಪಾಲನ್ನು ಎಲ್ಐಸಿ ಹೆಚ್ಚಿಸಿಕೊಂಡಿದೆ. ಅದೇ ವೇಳೆ, ಅದಾನಿ ಗ್ರೂಪ್ನ ಇನ್ನೆರಡು ಕಂಪನಿಗಳಾದ ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ನಲ್ಲಿನ ತನ್ನ ಪಾಲಿನ ಕೆಲ ಷೇರುಗಳನ್ನು ಎಲ್ಐಸಿ ಮಾರಾಟ ಮಾಡಿದೆ. ಉದ್ಯಮಿ ಗೌತಮ್ ಅದಾನಿ (Gautam Adani) ಮಾಲಿಕತ್ವದ ಮತ್ತೊಂದು ಸಿಮೆಂಟ್ ಕಂಪನಿ ಎಸಿಸಿಯಲ್ಲಿನ ತನ್ನ ಪಾಲಿನ ಷೇರುಗಳನ್ನು ಎಲ್ಐಸಿ ಯಥಾಸ್ಥಿತಿಯಲ್ಲಿ ಇರಿಸಿದೆ. ಎಸಿಸಿ ಕಂಪನಿಯಲ್ಲಿ ಎಲ್ಐಸಿ ಹೊಂದಿರುವ ಷೇರುಗಳ ಸಂಖ್ಯೆ 1.20 ಕೋಟಿ. ಆ ಕಂಪನಿಯ ಶೇ. 6.41ರಷ್ಟು ಪಾಲು ಎಲ್ಐಸಿಗೆ ಇದೆ.
ಇದನ್ನೂ ಓದಿ: Twitter: ಟ್ವಿಟ್ಟರ್ ಕಳೆದುಹೋಗಿದೆ, ಎಕ್ಸ್ ನುಂಗಿಹಾಕಿದೆ; ಕೋರ್ಟ್ನಲ್ಲಿ ಮೊಕದ್ದಮೆ; ಎಲಾನ್ ಮಸ್ಕ್ ಕೂಡ ನಿಗೂಢ ಟ್ವೀಟ್
ಅದಾನಿ ಗ್ರೂಪ್ನಲ್ಲಿ ಎಲ್ಐಸಿ ಪಾಲು ಎಷ್ಟು ಹೆಚ್ಚಳವಾಗಿದೆ?
ಅದಾನಿ ಎಂಟರ್ಪ್ರೈಸಸ್ ಕಂಪನಿಯಲ್ಲಿ ಎಲ್ಐಸಿ ಹೊಂದಿರುವ ಷೇರು ಶೇ. 4.26 ಇದೆ. ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ. 4.23 ಮಾತ್ರ ಇತ್ತು.
ಇನ್ನು, ಅದಾನಿ ಗ್ರೀನ್ ಎನರ್ಜಿಯಲ್ಲಿ ಎಲ್ಐಸಿ ಹೊಂದಿದ್ದ ಷೇರುಪಾಲು ಶೇ. 1.28ರಿಂದ 1.36ಕ್ಕೆ ಹೆಚ್ಚಾಗಿದೆ. ಈ ಕಂಪನಿಯ 2.14 ಕೋಟಿ ಷೇರುಗಳನ್ನು ಖರೀದಿಸಿ ಎಲ್ಐಸಿ ಹೂಡಿಕೆ ಮಾಡಿದೆ.
ಅದಾನಿ ಟೋಟಲ್ ಗ್ಯಾಸ್ ಕಂಪನಿಯಲ್ಲಿ ಎಲ್ಐಸಿ ಪಾಲು ಶೇ. 5.96ರಿಂದ ಶೇ. 6.02ಕ್ಕೆ ಹೆಚ್ಚಾಗಿದೆ. ಹಾಗೆಯೇ, ಅದಾನಿ ಟ್ರಾನ್ಸ್ಮಿಶನ್ ಕಂಪನಿಯಲ್ಲಿ ಎಲ್ಐಸಿ ಪಾಲು ಶೇ. 3.65ರಿಂದ ಶೇ. 3.68ಕ್ಕೆ ಏರಿದೆ.
ಎರಡು ಅದಾನಿ ಕಂಪನಿಗಳಲ್ಲಿ ಎಲ್ಐಸಿ ಹೂಡಿಕೆ ಎಷ್ಟು ಕಡಿಮೆ ಆಗಿದೆ?
ಅದಾನಿ ಗ್ರೂಪ್ಗೆ ಸೇರಿದ ಅಂಬುಜಾ ಸಿಮೆಂಟ್ಸ್ ಕಂಪನಿಯಲ್ಲಿ ಎಲ್ಐಸಿ ಹೊಂದಿರುವ ಷೇರುಗಳ ಪ್ರಮಾಣ ಶೇ. 6.33ರಿಂದ ಶೇ. 6.30ಗೆ ಇಳಿದಿದೆ. ಅದಾನಿ ಪೋರ್ಟ್ಸ್ ಅಂಡ್ ಎಸ್ಇಝಡ್ ಕಂಪನಿಯಲ್ಲಿ 2 ಮೂಲಾಂಕಗಳಷ್ಟು ಪ್ರಮಾಣದಲ್ಲಿ ಷೇರುಗಳನ್ನು ಎಲ್ಐಸಿ ಮಾರಿದೆ. ಆದರೂ ಈ ಕಂಪನಿಯಲ್ಲಿ ಎಲ್ಐಸಿ ಪಾಲು ಈಗಲೂ ಶೇ. 9.12ರಷ್ಟು ಇದೆ.
ಇದನ್ನೂ ಓದಿ: IMF: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆಯಾದರೂ ವಿಶ್ವದಲ್ಲೇ ಬೆಸ್ಟ್; ಚೀನಾಗಿಂತಲೂ ಬೆಟರ್; ಐಎಂಎಫ್ ಅಂದಾಜು
ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿರುವ ಎಲ್ಐಸಿ ಬಳಿ ಇರುವುದು ಬಹುತೇಕ ಇನ್ಷೂರೆನ್ಸ್ ಪಾಲಿಸಿದಾರರ ಹಣವಾಗಿದೆ. ಈ ಹಣವನ್ನು ಎಲ್ಐಸಿ ದೇಶದ ಷೇರು ಮಾರುಕಟ್ಟೆಗಳಲ್ಲಿ ವಿವಿಧ ಕಂಪನಿಗಳ ಷೇರುಗಳು, ಮ್ಯೂಚುವಲ್ ಫಂಡ್ಗಳ ಮೇಲೆ ಹೂಡಿಕೆ ಮಾಡುತ್ತದೆ. ಅದರಿಂದ ಬರುವ ಲಾಭ ಎಲ್ಐಸಿಯ ಆದಾಯಕ್ಕೆ ಒಂದು ಮೂಲವೂ ಆಗಿದೆ.
ಎಲ್ಐಸಿಯ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಷೇರುಮಾರುಕಟ್ಟೆ ಲಿಂಕ್ ಆಗಿರುವ ಸ್ಕೀಮ್ ಬಹಳ ಕಡಿಮೆ. ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿ ಮಾತ್ರವೇ ಎಲ್ಐಸಿಯ ಮಾರುಕಟ್ಟೆ ಜೋಡಿತ ಯೋಜನೆಯಾಗಿದೆ. ಹೀಗಾಗಿ, ಪಾಲಿಸಿದಾರರು ಎಲ್ಐಸಿಯ ಹೂಡಿಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತಿಲ್ಲ ಎನ್ನುತ್ತಾರೆ ತಜ್ಞರು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Wed, 12 April 23