ರಫ್ತು ಕ್ಷೇತ್ರದಲ್ಲಿ ಭಾರತವನ್ನು ಹಿಂದಿಕ್ಕುತ್ತಿವೆ ವಿಯೆಟ್ನಾಂ, ಬಾಂಗ್ಲಾದಂಥ ಸಣ್ಣ ಪುಟ್ಟ ದೇಶಗಳು: ವಿಶ್ವಬ್ಯಾಂಕ್ ವರದಿ

|

Updated on: Sep 04, 2024 | 4:00 PM

Manufacturing sectors India vs Bangla vs Vietnam: ಜವಳಿ, ಲೆದರ್ ಮತ್ತು ಉಡುಪು ಉತ್ಪನ್ನಗಳ ರಫ್ತಿನಲ್ಲಿ ವಿಯೆಟ್ನಾಂ, ಬಾಂಗ್ಲಾದಂಥ ಸಣ್ಣ ದೇಶಗಳು ಭಾರತವನ್ನು ಹಿಂದಿಕ್ಕುತ್ತಿವೆ. ಚೀನಾ ಪ್ಲಸ್ ನೀತಿಯ ಲಾಭ ಪಡೆಯಲು ಭಾರತ ವಿಫಲವಾಗಿದ ಎನ್ನುವ ಸಂಗತಿಯನ್ನು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ. ಈ ಮೇಲಿನ ಉತ್ಪನ್ನಗಳ ರಫ್ತಿನಲ್ಲಿ ಭಾರತದ ಜಾಗತಿಕ ಪಾಲು ಹತ್ತು ವರ್ಷಗಳಿಂದ ಕಡಿಮೆ ಆಗುತ್ತಾ ಬಂದಿದೆ.

ರಫ್ತು ಕ್ಷೇತ್ರದಲ್ಲಿ ಭಾರತವನ್ನು ಹಿಂದಿಕ್ಕುತ್ತಿವೆ ವಿಯೆಟ್ನಾಂ, ಬಾಂಗ್ಲಾದಂಥ ಸಣ್ಣ ಪುಟ್ಟ ದೇಶಗಳು: ವಿಶ್ವಬ್ಯಾಂಕ್ ವರದಿ
ರಫ್ತು
Follow us on

ನವದೆಹಲಿ, ಸೆಪ್ಟೆಂಬರ್ 4: ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆಯಾದರೂ ಅದರ ಜಾಗತಿಕ ವ್ಯಾಪಾರ ಪಾಲು ಮಾತ್ರ ಹೆಚ್ಚುತ್ತಿಲ್ಲ. ಬಾಂಗ್ಲಾದೇಶ, ವಿಯೆಟ್ನಾಂ ಮೊದಲಾದ ದೇಶಗಳು ಮ್ಯಾನುಫ್ಯಾಕ್ಚರಿಂಗ್ ಉತ್ಪನ್ನಗಳ ರಫ್ತಿನಲ್ಲಿ ಭಾರತವನ್ನು ಹಿಂದಿಕ್ಕುತ್ತಿವೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ಹೇಳಿದೆ. ಜಿಡಿಪಿಗೆ ಪ್ರತಿಶತವಾಗಿ ಸರಕು ಮತ್ತು ಸೇವೆಗಳ ಪ್ರಮಾಣ ಕಳೆದ ಒಂದು ದಶಕದಲ್ಲಿ ಕಡಿಮೆ ಆಗುತ್ತಾ ಬಂದಿದೆ ಎನ್ನುವ ಸಂಗತಿ ವಿಶ್ವ ಬ್ಯಾಂಕ್ ವರದಿಯಲ್ಲಿ ವ್ಯಕ್ತವಾಗಿದೆ.

ಲೆದರ್, ಜವಳಿ, ಉಡುಪು, ಪಾದರಕ್ಷೆಗಳ ರಫ್ತಿನಲ್ಲಿ ಭಾರತದ ಜಾಗತಿಕ ಪಾಲು 2002ರಲ್ಲಿ ಶೇ. 0.9ರಷ್ಟಿತ್ತು. 2013ರಲ್ಲಿ ಅದು ಶೇ. 4.5ಕ್ಕೆ ಏರಿತ್ತು. ಅಲ್ಲಿಂದಾಚೆ ಕಡಿಮೆ ಆಗುತ್ತಾ ಬಂದಿದೆ. 2022ರಲ್ಲಿ ಈ ಪ್ರಮಾಣ ಶೇ. 3.50ಕ್ಕೆ ಇಳಿದಿದೆ.

ಅದೇ ವೇಳೆ, ಈ ಉತ್ಪನ್ನಗಳ ರಫ್ತಿನಲ್ಲಿ ಬಾಂಗ್ಲಾದೇಶದ ಪಾಲು ಶೇ. 5.1ರಷ್ಟಿದ್ದರೆ ವಿಯೆಟ್ನಾಂನದ್ದು ಶೇ. 5.9ರಷ್ಟಿದೆ. ರಫ್ತು ಸ್ಪರ್ಧೆಯಲ್ಲಿ ಸಣ್ಣ ಪುಟ್ಟ ದೇಶಗಳು ಭಾರತವನ್ನು ಹಿಂದಿಕ್ಕುತ್ತಿರುವುದು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ದತ್ತಾಂಶದಿಂದ ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಹೂಡಿಕೆ ಎರಡು ಪಟ್ಟು ಹೆಚ್ಚಿಸುತ್ತೇವೆ: ಸಿಂಗಾಪುರದ ಕ್ಯಾಪಿಟಲ್ಯಾಂಡ್ ಸಂಸ್ಥೆ ಘೋಷಣೆ

ಭಾರತಕ್ಕೆ ಈ ರಫ್ತು ಯಾಕೆ ಮುಖ್ಯ?

ಮೇಲೆ ಹೇಳಿದ ಗಾರ್ಮೆಂಟ್ಸ್ ಮತ್ತು ಜವಳಿ ಉದ್ಯಮಗಳು ಸಾಕಷ್ಟು ಉದ್ಯೋಗ ಸೃಷ್ಟಿಸಬಲ್ಲಂಥವು. ಕಾರ್ಮಿಕರ ಶ್ರಮ ಬೇಡುವ ಕ್ಷೇತ್ರ. ಇದು ಪ್ರಬಲಗೊಂಡರೆ ಹೆಚ್ಚು ಉದ್ಯೋಗ ಸೃಷ್ಟಿಸಬಹುದು.

ಆದರೆ, ಭಾರತ ಮಾಡುತ್ತಿರುವ ರಫ್ತಿನಲ್ಲಿ ಹೆಚ್ಚಿನ ಭಾಗವು ಬಂಡವಾಳ ಬೇಡುವ ಕ್ಷೇತ್ರದ್ದಾಗಿದೆ. ಇಲ್ಲಿ ಉದ್ಯೋಗಸೃಷ್ಟಿ ಕಡಿಮೆ ಎನ್ನಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ವಿವಿಧ ಪಿಎಲ್​ಐ ಸ್ಕೀಮ್ ಮೂಲಕ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ವಲಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆಯಾದರೂ ಕಾರ್ಮಿಕ ಶ್ರಮ ಬೇಡುವ ಕ್ಷೇತ್ರದ ಕಡೆಗಣನೆ ಆದಂತಿದೆ.

ಇದನ್ನೂ ಓದಿ: ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದೆ, ಭಾರತದ ಆರ್ಥಿಕತೆಗೇನೂ ಉಪಯೋಗ ಆಗುತ್ತಿಲ್ಲ: ವಿರಲ್ ಆಚಾರ್ಯ

ಜವಳಿ ಇತ್ಯಾದಿ ಕಾರ್ಮಿಕ ಶ್ರಮ ಅವಶ್ಯಕತೆಯ ಉತ್ಪಾದನಾ ವಲಯವು ಪ್ರಗತಿ ಹೊಂದಬೇಕಾದರೆ ವ್ಯಾಪಾರ ವೆಚ್ಚವನ್ನು ಸರ್ಕಾರ ಕಡಿಮೆಗೊಳಿಸಬೇಕು. ತೆರಿಗೆ ಮತ್ತು ತೆರಿಗೆಯೇತರ ಅಂತರವನ್ನು ತಗ್ಗಿಸಬೇಕು. ವ್ಯಾಪಾರ ಒಪ್ಪಂದಗಳನ್ನು ಪರಿಷ್ಕರಿಸಬೇಕು ಎಂದು ವರ್ಲ್ಡ್ ಬ್ಯಾಂಕ್ ಸಲಹೆ ನೀಡಿದೆ.

ಒಟ್ಟಾರೆ ರಫ್ತು ಬಂದರೆ ಭಾರತ ಮುಂದಿದೆ. ಒಂದು ವರ್ಷದಲ್ಲಿ ಸುಮಾರು 800 ಬಿಲಿಯನ್ ಡಾಲರ್​ನಷ್ಟು ರಫ್ತಾಗುತ್ತದೆ. ಇದಕ್ಕೆ ಹೋಲಿಸಿದರೆ ಬಾಂಗ್ಲಾದ ರಫ್ತು 60 ಬಿಲಿಯನ್ ಡಾಲರ್ ಆಸುಪಾಸಿನಲ್ಲಿದೆ. ಆದರೆ, ಜವಳಿ, ಉಡುಪು ಮತ್ತು ಲೆದರ್ ಉತ್ಪನ್ನಗಳ ರಫ್ತಿನಲ್ಲಿ ಬಾಂಗ್ಲಾ, ವಿಯೆಟ್ನಾಂ ದೇಶಗಳು ಭಾರತವನ್ನು ಹಿಂದಿಕ್ಕಿವೆ. ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಚೀನಾ ದೇಶ ಈಗಲೂ ನಂಬರ್ ಒನ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ