F-35 ಕೊಡ್ತೀವಿ ಅಂತ ಟ್ರಂಪ್ ಬಾಯಲ್ಲಿ ಹೇಳಿದ್ದಷ್ಟೇ; ಜಂಟಿ ಹೇಳಿಕೆಯಲ್ಲಿ ಅದರ ಹೆಸರಿಲ್ಲ; ಏನಿದೆ ಅದರಲ್ಲಿ?
F-35 fighter jets to India: ಭಾರತಕ್ಕೆ ಎಫ್-35 ಫೈಟರ್ ಜೆಟ್ಗಳನ್ನು ಒದಗಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಭೇಟಿ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ಎಫ್-35 ಹೆಸರು ಪ್ರಸ್ತಾಪವಾಗಿಲ್ಲ. ಆದರೆ, ಐದನೇ ತಲೆಮಾರಿನ ಫೈಟರ್ಗಳ ಸರಬರಾಜಿಗೆ ನೀತಿ ಪರಿಶೀಲಿಸುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಫ್-35 ಜೆಟ್ ಐದನೇ ತಲೆಮಾರಿನ ಫೈಟರ್ ಸಾಲಿಗೆ ಸೇರುತ್ತದೆ.

ವಾಷಿಂಗ್ಟನ್, ಫೆಬ್ರುವರಿ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರಿಂದಲೂ ಜಂಟಿ ಹೇಳಿಕೆ ಪ್ರಕಟವಾಗಿದೆ. ಭೇಟಿ ಬಳಿಕ ಟ್ರಂಪ್ ಮತ್ತು ಮೋದಿ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅಮೆರಿಕದ ಎಫ್-35 ಫೈಟರ್ ಜೆಟ್ಗಳನ್ನು ಭಾರತಕ್ಕೆ ಕೊಡುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ‘ಈ ವರ್ಷದಿಂದ ನಾವು ಭಾರತಕ್ಕೆ ಮಿಲಿಟರಿ ಮಾರಾಟ ಹೆಚ್ಚಿಸುತ್ತಿದ್ದೇವೆ. ಭಾರತಕ್ಕೆ ಎಫ್-35 ಸ್ಟೀಲ್ತ್ ಫೈಟರ್ಸ್ಗಳನ್ನು ಒದಗಿಸಲು ದಾರಿ ಮಾಡಿಕೊಡುತ್ತಿದ್ದೇವೆ’ ಎಂದು ಟ್ರಂಪ್ ಈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ, ಎಫ್-35 ಅನ್ನು ಭಾರತ ಪಡೆಯಲು ಯಶಸ್ವಿಯಾದಲ್ಲಿ ಕೆಲವೇ ದೇಶಗಳ ಸಾಲಿಗೆ ಅದು ಸೇರ್ಪಡೆಯಾಗುತ್ತದೆ. ನ್ಯಾಟೋ ಮಿತ್ರರಾಷ್ಟ್ರಗಳು, ಇಸ್ರೇಲ್ ಮತ್ತು ಜಪಾನ್ ದೇಶಗಳಿಗೆ ಮಾತ್ರವೇ ಎಫ್-35 ಫೈಟರ್ ಜೆಟ್ಗಳನ್ನು ಖರೀದಿಸಲು ಅನುಮತಿ ಇರುವುದು. ಆದರೆ, ಟ್ರಂಪ್ ಮತ್ತು ಮೋದಿ ಪ್ರಕಟಿಸಿದ ಜಂಟ ಹೇಳಿಕೆಯಲ್ಲಿ ಎಫ್-35 ಜೆಟ್ ಹೆಸರೇ ಪ್ರಸ್ತಾಪ ಆಗಿಲ್ಲ.
ಜಂಟಿ ಹೇಳಿಕೆಯಲ್ಲಿ ಐದನೇ ತಲೆಮಾರಿನ ಫೈಟರ್ಸ್ ಬಗ್ಗೆ ಪ್ರಸ್ತಾಪ…
ಭಾರತ ಮತ್ತು ಅಮೆರಿಕ ಮುಖ್ಯಸ್ಥರ ಜಂಟಿ ಹೇಳಿಕೆಯಲ್ಲಿ 36 ಅಂಶಗಳಿದ್ದು, ಇದರಲ್ಲಿ ರಕ್ಷಣಾ ಕ್ಷೇತ್ರದ ಬಗ್ಗೆ ಕೆಲ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಎಫ್-35 ಫೈಟರ್ ಜೆಟ್ಗಳನ್ನು ಭಾರತಕ್ಕೆ ಮಾರಲು ಸರ್ಕಾರ ಸಮ್ಮತಿಸಿರುವ ಸಂಗತಿ ಇದರಲ್ಲಿ ಪ್ರಸ್ತಾಪವಾಗಿಲ್ಲ. ಆದರೆ, ಐದನೇ ತಲೆಮಾರಿನ ಫೈಟರ್ಗಳು ಮತ್ತು ಅಂಡರ್ಸೀ ಸಿಸ್ಟಂಗಳನ್ನು ಭಾರತಕ್ಕೆ ನೀಡಲು ಅನುವಾಗುವಂತೆ ತನ್ನ ನೀತಿಯನ್ನು ಪರಾಮರ್ಶಿಸುವುದಾಗಿ ಅಮೆರಿಕ ಘೋಷಿಸಿದೆ.
ಇದನ್ನೂ ಓದಿ: MAGA=VB; 1+1=11; ಟ್ರಂಪ್-ಮೋದಿ ಭೇಟಿಯ ಹೈಲೈಟ್ಸ್; ಅಮೆರಿಕದ ಟ್ಯಾರಿಫ್ಗಳಿಂದ ಭಾರತಕ್ಕೇನೂ ಹಿನ್ನಡೆ ಇಲ್ಲವಾ?
ಇಲ್ಲಿ ಫಿಫ್ಟ್ ಜನರೇಶನ್ ಫೈಟರ್ಗಳಲ್ಲಿ ಎಫ್-35 ಕೂಡ ಒಂದು. ಅಮೆರಿಕದ ಬಳಿ ಎಫ್-22 ರಾಪ್ಟರ್ ಮತ್ತು ಎಫ್-35 ಇದ್ದು ಇವು ಐದನೇ ತಲೆಮಾರಿನ ಫೈಟರ್ ಜೆಟ್ಗಳಾಗಿವೆ.
ರಷ್ಯಾ ಬಳಿ ಇರುವ ಸುಖೋಯ್ ಎಸ್ಯು-57, ಮತ್ತು ಚೀನಾ ಬಳಿ ಚೆಂಗ್ಡು ಜೆ20 ಕೂಡ ಐದನೆ ತಲೆಮಾರಿನ ಫೈಟರ್ ಜೆಟ್ಗಳಾಗಿವೆ.
ಐದನೇ ಫೈಟರ್ ಜೆಟ್ಗಳ ವಿಶೇಷತೆ ಏನು?
ಇಲ್ಲಿ 21ನೇ ಶತಮಾನದ ಆರಂಭಿಕ ದಶಕಗಳಲ್ಲಿ ತಯಾರಾದ ಯುದ್ಧಾಸ್ತ್ರಗಳನ್ನು ಐದನೇ ತಲೆಮಾರಿನವೆಂದು ಪರಿಗಣಿಸಲಾಗುತ್ತದೆ. ಆದರೆ, ತಾಂತ್ರಿಕವಾಗಿ ಹೀಗೇ ಇರಬೇಕೆಂಬ ನಿಯಮಗಳಿಲ್ಲ. ನಾಲ್ಕನೇ ತಲೆಮಾರಿನ ಫೈಟರ್ ಜೆಟ್ಗಳು ಡಾಗ್ಫೈಟ್ಗೆ ಹೇಳಿ ಮಾಡಿಸಿದಂತೆ ಅಭಿವೃದ್ಧಿಗೊಂಡಿದ್ದವು.
ಆದರೆ, ಐದನೇ ತಲೆಮಾರಿನ ಫೈಟರ್ ಜೆಟ್ಗಳು ಸ್ಟೀಲ್ತ್ ಟೆಕ್ನಾಲಜಿ ಹೊಂದಿವೆ. ಅಂದರೆ, ರಾಡಾರ್, ಇನ್ಫ್ರಾರೆಡ್, ರೇಡಿಯೋ ಫ್ರೀಕ್ವೆನ್ಸಿ ಸ್ಪೆಕ್ಟ್ರಮ್ ಇತ್ಯಾದಿ ಕಣ್ಣಿಗೆ ಬೀಳದ ರೀತಿಯಲ್ಲಿ ಇವುಗಳು ಹಾರಾಟ ನಡೆಸಬಲ್ಲುವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿಯನ್ನೂ ಇವು ಬಳಸುತ್ತವೆ.
ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಎನ್ನುವ ಖಾಸಗಿ ಸಂಸ್ಥೆ ಎಫ್-22, ಎಫ್-35 ಇತ್ಯಾದಿ ಎಫ್ ಸರಣಿಯ ಯುದ್ಧವಿಮಾನಗಳನ್ನು ತಯಾರಿಸುತ್ತದೆ. ರಷ್ಯಾ ಮತ್ತು ಚೀನಾ ಕೂಡ ಐದನೇ ತಲೆಮಾರಿನ ಫೈಟರ್ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿವೆ.
ಇದನ್ನೂ ಓದಿ: ಭಾರತ – ಅಮೆರಿಕ ವ್ಯಾಪಾರ 5 ವರ್ಷಗಳಲ್ಲಿ ದ್ವಿಗುಣ: ಟ್ರಂಪ್, ಮೋದಿ ಸಭೆಯ ಬಳಿಕ ಘೋಷಣೆ
ಈಗ ಜಂಟಿ ಹೇಳಿಕೆಯಲ್ಲಿ ಐದನೇ ತಲೆಮಾರಿನ ಫೈಟರ್ಗಳನ್ನು ನೀಡುವ ಬಗ್ಗೆ ಪ್ರಸ್ತಾಪ ಇದೆ. ಇದು ಎಫ್-35 ವಿಮಾನ ಮಾರಾಟದ ಪರೋಕ್ಷ ಪ್ರಸ್ತಾಪ ಎಂದು ಭಾವಿಸಲು ಅಡ್ಡಿ ಇಲ್ಲ.
ಆದರೆ, ಅಮೆರಿಕದ ‘ಜಾವೆಲಿನ್’ ಹೆಸರಿನ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ಮತ್ತು ಸ್ಟ್ರೈಕರ್ ಇನ್ಫ್ಯಾಂಟ್ರಿ ಕಾಂಬ್ಯಾಟ್ ವಾಹನಗಳನ್ನು ಭಾರತದಲ್ಲಿ ಜಂಟಿಯಾಗಿ ತಯಾರಿಸುವ ಯೋಜನೆಯನ್ನು ಪ್ರಕಟಿಸಲಾಗಿದೆ. ಪಿ-81 ಎನ್ನುವ ಸಾಗರ ಸರಹದ್ದು ಕಾವಲು ವಿಮಾನಗಳನ್ನು ಖರೀದಿಸಲಾಗುತ್ತಿರುವುದನ್ನು ನಮೂದಿಸಲಾಗಿದೆ.
ಅಮೆರಿಕದ ಕಂಪನಿಗಳೊಂದಿಗೆ ಮಹೀಂದ್ರ ಗ್ರೂಪ್, ಬಿಇಎಲ್ ಸಂಸ್ಥೆಗಳ ಸಹಕಾರ…
ರಕ್ಷಣಾ ಕ್ಷೇತ್ರದಲ್ಲಿ ಪಾಲುದಾರಿಕೆ ಬಲಪಡಿಸಲು ಎರಡೂ ದೇಶಗಳ ಉದ್ಯಮಗಳನ್ನು ಜೋಡಿಸಿಕೊಳ್ಳಲಾಗಿದೆ. ಭಾರತದ ಮಹೀಂದ್ರ ಗ್ರೂಪ್ ಮತ್ತು ಅಮೆರಿಕದ ಆಂಡುರಿಲ್ ಇಂಡಸ್ಟ್ರೀಸ್ ಸಂಸ್ಥೆಗಳ ಮಧ್ಯೆ ಸಹಭಾಗಿತ್ವ ನಿರ್ಮಾಣವಾಗಿದ್ದು, ಉನ್ನತ ತಂತ್ರಜ್ಞಾನದ ಮಾರಿಟೈಮ್ ಸಿಸ್ಟಂಗಳು ಹಾಗೂ ಎಐ ಚಾಲಿತ ಅತ್ಯಾಧುನಿಕ ಯುಎಎಸ್ ನಿಗ್ರಹ ಸಿಸ್ಟಂ (ಆ್ಯಂಟಿ ಡ್ರೋನ್) ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ.
ಹಾಗೆಯೇ, ಅಮೆರಿಕದ ಎಲ್3 ಹ್ಯಾರಿಸ್ ಸಂಸ್ಥೆ ಜೊತೆ ಬಿಇಎಲ್ ಜಂಟಿಯಾಗಿ ಟೋವ್ಡ್ ಆರೇ ಸಿಸ್ಟಂಗಳನ್ನು (Towed Array Systems) ಅಭಿವೃದ್ಧಿಪಡಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




