ಭಾರತ – ಅಮೆರಿಕ ವ್ಯಾಪಾರ 5 ವರ್ಷಗಳಲ್ಲಿ ದ್ವಿಗುಣ: ಟ್ರಂಪ್, ಮೋದಿ ಸಭೆಯ ಬಳಿಕ ಘೋಷಣೆ
ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ 5 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ದ್ವಿಗುಣಗೊಳ್ಳಲಿದೆ ಎಂದರು.

ವಾಷಿಂಗ್ಟನ್ ಡಿಸಿ, ಫೆಬ್ರವರಿ 14: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ದ್ವಿಪಕ್ಷೀಯ ಮಾತುಕತೆ ವೇಳೆ ಉಭಯ ನಾಯಕರು ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು. ಬಳಿಕ ಜಂಟಿ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಮುಂದಿನ 5 ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ದ್ವಿಗುಣಗೊಳ್ಳಲಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಹಾಗೂ ಟ್ರಂಪ್ ಭೇಟಿಯ ಸಮಯದಲ್ಲಿ, ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮತ್ತು ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಕೂಡ ಉಪಸ್ಥಿತರಿದ್ದರು.
2030 ರ ವೇಳೆಗೆ ಭಾರತ-ಅಮೆರಿಕ ವ್ಯಾಪಾರವನ್ನು ದ್ವಿಗುಣಗೊಳಿಸುವ ಬಗ್ಗೆ ಪ್ರಧಾನಿ ಮಾತನಾಡಿದರು. 2030 ರ ವೇಳೆಗೆ ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಿ 500 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು.
ಭಾರತ ಮತ್ತು ಅಮೆರಿಕ ಮಧ್ಯೆ ಹೂಡಿಕೆ ಹೆಚ್ಚಾಗಲಿದೆ: ಮೋದಿ
ಎರಡೂ ದೇಶಗಳಿಗೆ ಪರಸ್ಪರ ಪ್ರಯೋಜನಕಾರಿಯಾಗುವ ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಲು ನಮ್ಮ ತಂಡಗಳು ಶೀಘ್ರದಲ್ಲೇ ಕೆಲಸ ಮಾಡುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ತೈಲ ಮತ್ತು ಅನಿಲ ವ್ಯಾಪಾರವನ್ನು ಬಲಪಡಿಸುತ್ತೇವೆ. ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಬದ್ಧತೆಗೆ ಟ್ರಂಪ್ ಶ್ಲಾಘಿಸಿದ ಮೋದಿ: ಭಾರತದ ಹಿತಾಸಕ್ತಿಗಳಿಗೇ ಆದ್ಯತೆ ಎಂದ ನಮೋ
ಭಾರತದ ರಕ್ಷಣಾ ಸನ್ನದ್ಧತೆಯಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದರು. ವಿಶ್ವಾಸಾರ್ಹ ಪಾಲುದಾರರಾಗಿ ನಾವು ಜಂಟಿ ಅಭಿವೃದ್ಧಿ, ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನದ ವರ್ಗಾವಣೆಯತ್ತ ಸಕ್ರಿಯವಾಗಿ ಸಾಗುತ್ತಿದ್ದೇವೆ. ಹೊಸ ತಂತ್ರಜ್ಞಾನ ಮತ್ತು ಉಪಕರಣಗಳು ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಎಂದು ಮೋದಿ ಹೇಳಿದರು.
ಭಾರತ ಅಮೆರಿಕದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ
ವರದಿಯ ಪ್ರಕಾರ, ಭಾರತವು ಅಮೆರಿಕದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ. 2024 ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ, ಎರಡೂ ದೇಶಗಳ ನಡುವಿನ ವ್ಯಾಪಾರವು 82.53 ಬಿಲಿಯನ್ ಅರಬ್ ಡಾಲರ್ ಆಗಿತ್ತು. ಅಮೆರಿಕ ಭಾರತದಿಂದ 52.89 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು. ಇದು ಭಾರತದ ಒಟ್ಟು ರಫ್ತಿನ ಶೇಕಡಾ 18.6 ರಷ್ಟಾಗಿದೆ.
ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಿದ ವ್ಯಾಪಾರ
ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ 2017 ರ ಜನವರಿಯಿಂದ 2021 ರ ಜನವರಿ ವರೆಗಿನ ನಾಲ್ಕು ವರ್ಷಗಳಲ್ಲಿ ಭಾರತದ ಅಮೆರಿಕಕ್ಕೆ ರಫ್ತು ಶೇ 22 ರಷ್ಟು ಹೆಚ್ಚಾಗಿದೆ. ಟ್ರಂಪ್ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ ನಂತರ ಇದೀಗ, ಎರಡೂ ದೇಶಗಳ ನಡುವಿನ ವ್ಯಾಪಾರ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:56 am, Fri, 14 February 25