ರಾಷ್ಟ್ರೀಯ ಬದ್ಧತೆಗೆ ಟ್ರಂಪ್ ಶ್ಲಾಘಿಸಿದ ಮೋದಿ: ಭಾರತದ ಹಿತಾಸಕ್ತಿಗಳಿಗೇ ಆದ್ಯತೆ ಎಂದ ನಮೋ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಗುರುವಾರ ಓವಲ್ ಕಚೇರಿಯಲ್ಲಿ ದ್ವಿಪಕ್ಷೀಯ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಟ್ರಂಪ್ ಅವರನ್ನು ಮತ್ತೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕಾಗಿ ಅಭಿನಂದಿಸಿದರು. ಬಾಂಗ್ಲಾದೇಶದ ಬಗ್ಗೆ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ಅದನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ವಾಷಿಂಗ್ಟನ್ ಡಿಸಿ, ಫೆಬ್ರವರಿ 14: ಗುರುವಾರ ಓವಲ್ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ದ್ವಿಪಕ್ಷೀಯ ಸಭೆ ನಡೆಯಿತು. ಈ ಸಮಯದಲ್ಲಿ, ಇಬ್ಬರೂ ನಾಯಕರು ವ್ಯಾಪಾರ ಸಂಬಂಧಗಳು ಮತ್ತು ಅಕ್ರಮ ವಲಸಿಗರ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು. ಟ್ರಂಪ್ ಪ್ರಧಾನಿ ಮೋದಿಯವರನ್ನು ತಮ್ಮ ಸ್ನೇಹಿತ ಎಂದು ಕರೆದರು. ಇದೇ ವೇಳೆ, ಅಧ್ಯಕ್ಷರಾಗಿ ಪುನರಾಯ್ಕೆಯಾದ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ವಿವರವಾದ ಮಾತುಕತೆಗೆ ಮುನ್ನ, ಇಬ್ಬರೂ ನಾಯಕರು ಪತ್ರಿಕಾಗೋಷ್ಠಿ ನಡೆಸಿದರು. ಇದರಲ್ಲಿ ಅವರು ಹಲವಾರು ವಿಷಯಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಭಾರತದ ಜನರ ಪರವಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ ಎಂದು ಟ್ರಂಪ್ಗೆ ಪ್ರಧಾನಿ ಮೋದಿ ಹೇಳಿದರು. ಭಾರತದಲ್ಲಿ ಸರ್ಕಾರ ನಡೆಸಲು ನನಗೆ ಮೂರನೇ ಬಾರಿಗೆ ಜನಾದೇಶ ನೀಡಲಾಗಿದೆ. ನಾವು ಸಮಾನ ಶಕ್ತಿ ಮತ್ತು ಉತ್ಸಾಹದಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಚಲ ಬದ್ಧತೆ: ಮೋದಿ
ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಟ್ರಂಪ್ ಅವರ ಅಚಲ ಬದ್ಧತೆಯ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಮೆರಿಕದ ಹಿತಾಸಕ್ತಿಗೆ ಮೊದಲ ಸ್ಥಾನ ನೀಡುವ ಟ್ರಂಪ್ ಅವರ ದೃಷ್ಟಿಕೋನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ತಾವು ಯಾವಾಗಲೂ ಅಮೆರಿಕ ಅಧ್ಯಕ್ಷರಿಂದ ಕಲಿತು ರಾಷ್ಟ್ರಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದರು. ಅವರು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವುದಕ್ಕೆ ಪ್ರಶಂಸಿಸುತ್ತೇನೆ. ಅಧ್ಯಕ್ಷ ಟ್ರಂಪ್ ಅವರಂತೆಯೇ, ಭಾರತದ ಹಿತಾಸಕ್ತಿಗಳನ್ನು ಉನ್ನತ ಸ್ಥಾನದಲ್ಲಿಟ್ಟುಕೊಂಡು ಕೆಲಸ ಮಾಡುವುದು ನನಗೆ ಸಿಕ್ಕ ದೊಡ್ಡ ಅದೃಷ್ಟ ಎಂದು ಮೋದಿ ಹೇಳಿದರು.
ಮೋದಿ ನನ್ನ ದೊಡ್ಡ ಗೆಳೆಯ: ಟ್ರಂಪ್
ಪ್ರಧಾನಿ ಮೋದಿ ಅವರನ್ನು ಟ್ರಂಪ್ ‘ನನ್ನ ದೊಡ್ಡ ಗೆಳೆಯ’ ಎಂದು ಕರೆದರು. ಭಾರತ ತೈಲ ಮತ್ತು ಅನಿಲ ಖರೀದಿಸಲಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶದ ಬಗ್ಗೆ ‘ಟಿವಿ9’ ಸಮೂಹದ ಮಾಧ್ಯಮ ಸಂಸ್ಥೆ ‘ಟಿವಿ9 ಭಾರತ್‌ವರ್ಷ’ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಬಾಂಗ್ಲಾದೇಶ ವಿಚಾರವನ್ನು ಪ್ರಧಾನಿ ಮೋದಿ ನೋಡಿಕೊಳ್ಳುತ್ತಾರೆ ಎಂದರು.
ಹೌಡಿ ಮೋದಿಯನ್ನು ನೆನಪಿಸಿಕೊಂಡ ಟ್ರಂಪ್
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಸಮಯದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2019 ರಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ಮತ್ತು ಅಹಮದಾಬಾದ್‌ಗೆ ನೀಡಿದ ಭೇಟಿಯನ್ನು ನೆನಪಿಸಿಕೊಂಡರು. ಈ ಭೇಟಿಯನ್ನು ವಿಶೇಷ ಎಂದು ಕರೆದ ಟ್ರಂಪ್, ಭಾರತದಲ್ಲಿ ತಮಗೆ ಅದ್ಭುತ ಸ್ವಾಗತ ಸಿಕ್ಕಿತ್ತು ಎಂದು ಹೇಳಿದರು. ಅವರು ಮೋದಿ ಅವರೊಂದಿಗೆ ಹಳೆಯ ಅನುಭವಗಳನ್ನು ಹಂಚಿಕೊಂಡರು ಮತ್ತು ಭಾರತ-ಅಮೆರಿಕ ಸಂಬಂಧಗಳ ಕುರಿತು ಚರ್ಚಿಸಿದರು.
ವ್ಯವಹಾರ ಒಪ್ಪಂದಗಳ ಬಗ್ಗೆ ಟ್ರಂಪ್ ಹೇಳಿದ್ದೇನು?
ಈಗ ಉಭಯ ದೇಶಗಳ ಮಧ್ಯೆ ಅದ್ಭುತ ವ್ಯಾಪಾರ ಒಪ್ಪಂದಗಳು ನಡೆಯಲಿವೆ ಎಂದು ಟ್ರಂಪ್ ಹೇಳಿದರು. ಭಾರತಕ್ಕೆ ತೈಲ ಮತ್ತು ಅನಿಲವನ್ನು ರಫ್ತು ಮಾಡುವುದಾಗಿ ಹೇಳಿದರು.
ಶಾಂತಿಯನ್ನು ಬೆಂಬಲಿಸುತ್ತೇವೆ: ಪ್ರಧಾನಿ ಮೋದಿ
ರಷ್ಯಾ ಉಕ್ರೇನ್ ಯುದ್ಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಭಾರತ ತಟಸ್ಥವಾಗಿಲ್ಲ ಎಂದು ಹೇಳಿದರು. ಭಾರತ ಶಾಂತಿಯ ಪರವಾಗಿದೆ. ಇದು ಯುದ್ಧದ ಯುಗವಲ್ಲ. ಯುದ್ಧಭೂಮಿಯಲ್ಲಿ ಪರಿಹಾರಗಳು ಸಿಗುವುದಿಲ್ಲ. ನಾವೆಲ್ಲರೂ ಎಲ್ಲಾ ಶಾಂತಿ ಉಪಕ್ರಮಗಳನ್ನು ಬೆಂಬಲಿಸುತ್ತೇವೆ. ಯುದ್ಧವನ್ನು ಕೊನೆಗೊಳಿಸುವ ಟ್ರಂಪ್ ಅವರ ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ ಎಂದು ಮೋದಿ ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




