ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಭೇಟಿ ಭಾರತಕ್ಕೆ ಮುಖ್ಯ ಏಕೆ?
ಪ್ರಧಾನಿ ಮೋದಿ ಅಮೆರಿಕ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ವ್ಯಾಪಾರ ಸುಂಕಗಳು ಈ ಸಂಬಂಧದಲ್ಲಿ ಮತ್ತೊಂದು ಪ್ರಮುಖ ಕಿರಿಕಿರಿಯನ್ನುಂಟುಮಾಡುತ್ತಿದೆ. ರಕ್ಷಣಾ ಸಲಕರಣೆಗಳ ಮೇಲಿನ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಮತ್ತು ಹೊಸ ಒಪ್ಪಂದಗಳನ್ನು ಘೋಷಿಸುವ ಸಾಧ್ಯತೆಯ ಬಗ್ಗೆಯೂ ಇಬ್ಬರೂ ನಾಯಕರು ಚರ್ಚಿಸುವ ನಿರೀಕ್ಷೆಯಿದೆ.

ಫ್ರಾನ್ಸ್ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕಕ್ಕೆ ಭೇಟಿ ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿ ಭಾರತಕ್ಕೆ ಪ್ರಮುಖ ಏಕೆ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಈ ಸಭೆಯಲ್ಲಿ ವ್ಯಾಪಾರ, ಭದ್ರತೆ, ರಕ್ಷಣಾ ಸಹಕಾರ ಮತ್ತು ವೀಸಾ ನೀತಿಯಂತಹ ಪ್ರಮುಖ ವಿಷಯಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ. ಟ್ರಂಪ್ ಮತ್ತೆ ಅಧ್ಯಕ್ಷರಾದ ನಂತರ ಪ್ರಧಾನಿ ಮೋದಿ ಅವರ ಮೊದಲ ಅಮೆರಿಕ ಭೇಟಿ ಇದಾಗಿದೆ. ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಎರಡೂ ದೇಶಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕಬಹುದಾದ್ದರಿಂದ, ಎಲ್ಲರ ಚಿತ್ತ ಈ ಭೇಟಿಯ ಮೇಲೆ ನೆಟ್ಟಿವೆ.
ಪ್ರಧಾನಿ ಮೋದಿಯವರ ಹತ್ತನೇ ಅಮೆರಿಕ ಭೇಟಿ ಅಮೆರಿಕಕ್ಕೆ ಇದು ಪ್ರಧಾನಿ ಮೋದಿಯವರ ಹತ್ತನೇ ಭೇಟಿಯಾಗಿದೆ. 2014 ರಿಂದ ಮೋದಿ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಅವರನ್ನು ಭೇಟಿ ಮಾಡಿದ್ದಾರೆ. ಈಗ ಟ್ರಂಪ್ ಮತ್ತೆ ಅಧ್ಯಕ್ಷರಾದ ನಂತರ, ಶ್ವೇತಭವನದಲ್ಲಿ ಇಬ್ಬರು ನಾಯಕರ ನಡುವೆ ಮಹತ್ವದ ಸಭೆ ನಡೆಯಲಿದೆ.
ಪ್ರಮುಖ ಚರ್ಚಾ ವಿಷಯಗಳು
ಭಾರತಕ್ಕೆ ಅಕ್ರಮ ವಲಸಿಗರ ವಾಪಸಾತಿ ಅಮೆರಿಕ ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುತ್ತಿದೆ, ಇದರಲ್ಲಿ ಭಾರತೀಯ ನಾಗರಿಕರೂ ಸೇರಿದ್ದಾರೆ. ಭಾರತವು ತನ್ನ ನಾಗರಿಕರನ್ನು ವಾಪಸ್ ಕರೆದುಕೊಂಡು ಹೋಗಲು ಸಿದ್ಧ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಭಾರತೀಯ ನಾಗರಿಕರನ್ನು ಕೈಕೋಳ ಹಾಕಿ ಕಳುಹಿಸಲಾದ ರೀತಿ ಭಾರತದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಭವಿಷ್ಯದಲ್ಲಿ ಭಾರತೀಯ ನಾಗರಿಕರನ್ನು ಗೌರವಾನ್ವಿತ ರೀತಿಯಲ್ಲಿ ವಾಪಸ್ ಕಳುಹಿಸಲು ಸಾಧ್ಯವಾಗುವಂತೆ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಈ ವಿಷಯವನ್ನು ಚರ್ಚಿಸಲಿದ್ದಾರೆ.
ಆಮದು ಸುಂಕಗಳು ಟ್ರಂಪ್ ಆಡಳಿತವು ಅನೇಕ ದೇಶಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದೆ, ಆದರೆ ಭಾರತಕ್ಕೆ ಇಲ್ಲಿಯವರೆಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಈ ಭೇಟಿಯಲ್ಲಿ ಸುಂಕಗಳು ಮತ್ತು ವ್ಯಾಪಾರ ಸುಂಕಗಳ ಕುರಿತು ಮಾತುಕತೆ ನಡೆಯುವ ಸಾಧ್ಯತೆಯಿದೆ.
ಮತ್ತಷ್ಟು ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ; ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಪ್ರಧಾನಿ ಮೋದಿ ಚರ್ಚೆ
ದ್ವಿಪಕ್ಷೀಯ ವ್ಯಾಪಾರ ಅಮೆರಿಕ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಭಾರತ-ಅಮೆರಿಕ ವ್ಯಾಪಾರದಲ್ಲಿ ಅಮೆರಿಕದ ಪಾಲು ಶೇ.10.73. ಈ ಭೇಟಿಯ ಸಮಯದಲ್ಲಿ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಪ್ಪಂದಗಳಿಗೆ ಸಹಿ ಹಾಕಬಹುದು.
ರಕ್ಷಣಾ ಸಹಕಾರ ಭಾರತವು ಅಮೆರಿಕದಿಂದ P-8I ಕಣ್ಗಾವಲು ವಿಮಾನಗಳನ್ನು ಖರೀದಿಸುವ ಒಪ್ಪಂದದ ಮೇಲೆ ಕಣ್ಣಿಟ್ಟಿದೆ. ಈ ಒಪ್ಪಂದವು ಭಾರತದ ಭದ್ರತೆ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಇಂಡೋ-ಪೆಸಿಫಿಕ್ ಕಾರ್ಯತಂತ್ರ ಮತ್ತು ಕ್ವಾಡ್ ಪಾಲುದಾರಿಕೆ ಕುರಿತು ಇಬ್ಬರು ನಾಯಕರ ನಡುವೆ ಚರ್ಚೆ ನಡೆಯಲಿದೆ.
ವೀಸಾ ಮತ್ತು ವಲಸೆ ನೀತಿ ಭಾರತೀಯ ಐಟಿ ವೃತ್ತಿಪರರಿಗೆ H-1B ವೀಸಾ ನೀತಿಯನ್ನು ಸುಧಾರಿಸುವ ಬಗ್ಗೆ ಮಾತುಕತೆಗಳು ನಡೆಯಬಹುದು. ಅಮೆರಿಕದಲ್ಲಿರುವ ಭಾರತೀಯ ವಲಸಿಗರ ಸ್ಥಿತಿಯನ್ನು ಸುಧಾರಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಭಾರತ-ಪೂರ್ವ ಯುರೋಪ್ ಆರ್ಥಿಕ ಕಾರಿಡಾರ್ ಈ ಯೋಜನೆಯು ಯುರೋಪ್ ಮತ್ತು ಏಷ್ಯಾ ನಡುವಿನ ವ್ಯಾಪಾರ ಸಂಪರ್ಕಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕಾರಿಡಾರ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಬಹುದು. ಮೋದಿಯವರ ‘ಟ್ರಂಪ್ ಕಾರ್ಡ್’ ಮತ್ತೊಮ್ಮೆ ಮಾಸ್ಟರ್ ಸ್ಟ್ರೋಕ್ ಆಗುವುದೇ? ಈ ಭೇಟಿಯು ಭಾರತ-ಅಮೆರಿಕ ಸಂಬಂಧಗಳಲ್ಲಿ ಹೊಸ ಯುಗದ ಆರಂಭವೆಂದು ಪರಿಗಣಿಸಲಾಗಿದೆ.
ಸುಂಕ, ವೀಸಾ ನೀತಿ ಮತ್ತು ಅನಿವಾಸಿ ಭಾರತೀಯರ ವಿಷಯದಲ್ಲಿ ಟ್ರಂಪ್ ಆಡಳಿತದ ನಿಲುವು ಭಾರತಕ್ಕೆ ಮುಖ್ಯವಾಗಿರುತ್ತದೆ . ಈ ಭೇಟಿ ಭಾರತ-ಅಮೆರಿಕ ರಕ್ಷಣಾ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮಹತ್ವದ್ದಾಗಿದೆ. ಈಗ ಮೋದಿಯವರ ‘ಟ್ರಂಪ್ ಕಾರ್ಡ್’ ಮತ್ತೊಮ್ಮೆ ಮಾಸ್ಟರ್ ಸ್ಟ್ರೋಕ್ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




