Health Infrastructure: ಭಾರತದಲ್ಲಿ ವೈದ್ಯರ ಸಂಖ್ಯೆ ಓಕೆ, ಆದ್ರೆ ಆಸ್ಪತ್ರೆ ಬೆಡ್​ಗಳದ್ದೇ ಕೊರತೆ; ಇನ್ನೂ ಎಷ್ಟು ಬೆಡ್ ಬೇಕು?

|

Updated on: Nov 25, 2023 | 1:58 PM

Knight Frank report: ಸಮೀಕ್ಷೆ ಪ್ರಕಾರ ಭಾರತದಲ್ಲಿ 24 ಲಕ್ಷ ಬೆಡ್​ಗಳ ಕೊರತೆ ಇದೆಯಂತೆ. ವಿಶ್ವ ಆರೋಗ್ಯ ಸಂಸ್ಥೆ ಮಾಡಿರುವ ಶಿಫಾರಸು ಪ್ರಕಾರ ಯಾವುದೇ ಒಂದು ದೇಶದಲ್ಲಿ ಪ್ರತೀ 1,000 ಜನರಿಗೆ 3 ಬೆಡ್​ಗಳು ಇರಬೇಕು. ಈ ಅನುಪಾತದ ಪ್ರಕಾರ ಭಾರತದಲ್ಲಿ 140 ಕೋಟಿ ಜನಸಂಖ್ಯೆಗೆ ಇನ್ನೂ 24 ಲಕ್ಷ ಹೆಚ್ಚುವರಿ ಬೆಡ್​ಗಳ ಅವಶ್ಯಕತೆ ಇದೆ.

Health Infrastructure: ಭಾರತದಲ್ಲಿ ವೈದ್ಯರ ಸಂಖ್ಯೆ ಓಕೆ, ಆದ್ರೆ ಆಸ್ಪತ್ರೆ ಬೆಡ್​ಗಳದ್ದೇ ಕೊರತೆ; ಇನ್ನೂ ಎಷ್ಟು ಬೆಡ್ ಬೇಕು?
ಆಸ್ಪತ್ರೆ
Follow us on

ನವದೆಹಲಿ, ನವೆಂಬರ್ 25: ಕೋವಿಡ್ ಬಂದ ಬಳಿಕ ಇಡೀ ಜಗತ್ತಿಗೆ ಹೆಲ್ತ್ ಇನ್​ಫ್ರಾಸ್ಟ್ರಕ್ಚರ್ ಎಷ್ಟು ಮುಖ್ಯ ಎಂಬುದು ಅರಿವಿಗೆ ಬಂದಿದೆ. ಆ ಅವಧಿಯಲ್ಲಿ ಹೆಚ್ಚಿನ ದೇಶಗಳಲ್ಲಿ ಆರೋಗ್ಯ ಸೌಕರ್ಯ (healthcare infrastructure) ವ್ಯವಸ್ಥೆಯನ್ನು ಸಮರೋಪಾದಿಯಲ್ಲಿ ಹೆಚ್ಚಿಸುವ ಪ್ರಯತ್ನವಾಗಿದ್ದು ಹೌದು. ಭಾರತವೂ ಇದಕ್ಕೆ ಹೊರತಲ್ಲ. ಇವತ್ತು ಭಾರತದಲ್ಲಿ ಹೆಲ್ತ್ ಇನ್​ಫ್ರಾಸ್ಟ್ರಕ್ಚರ್ ಹೇಗಿದೆ? ನೈಟ್ ಫ್ರ್ಯಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಕಂಪನಿ ಹಾಗೂ ಅದರ ಅಮೆರಿಕನ್ ಸಹಭಾಗಿ ಕಂಪನಿ ಬೆರ್ಕಾಡಿಯಾ (Berkadia) ಜಂಟಿಯಾಗಿ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ 24 ಲಕ್ಷ ಬೆಡ್​ಗಳ ಕೊರತೆ ಇದೆಯಂತೆ. ವಿಶ್ವ ಆರೋಗ್ಯ ಸಂಸ್ಥೆ ಮಾಡಿರುವ ಶಿಫಾರಸು ಪ್ರಕಾರ ಯಾವುದೇ ಒಂದು ದೇಶದಲ್ಲಿ ಪ್ರತೀ 1,000 ಜನರಿಗೆ 3 ಬೆಡ್​ಗಳು ಇರಬೇಕು. ಈ ಅನುಪಾತದ ಪ್ರಕಾರ ಭಾರತದಲ್ಲಿ 140 ಕೋಟಿ ಜನಸಂಖ್ಯೆಗೆ ಇನ್ನೂ 24 ಲಕ್ಷ ಹೆಚ್ಚುವರಿ ಬೆಡ್​ಗಳ ಅವಶ್ಯಕತೆ ಇದೆ.

ಸದ್ಯ ಭಾರತದಲ್ಲಿ ಪ್ರತೀ 1,000 ಮಂದಿಗೆ 1.3 ಬೆಡ್ ಮಾತ್ರವೇ ಇರುವುದು. ಈ ಕೊರತೆ ನೀಗಿಸಲು ಹೆಚ್ಚುವರಿ ಬೆಡ್ ಅಳವಡಿಕೆ ಮಾಡಬೇಕೆಂದರೆ 200 ಕೋಟಿ ಚದರಡಿಯಷ್ಟು ಜಾಗದ ಅವಶ್ಯಕತೆ ಇದೆ. ಈ ವಿಚಾರವನ್ನು ಉಲ್ಲೇಖಿಸಿರುವ ನೈಟ್ ಫ್ರಾಂಕ್ ಸಂಸ್ಥೆ, ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಸಾಧ್ಯತೆಯನ್ನು ತೆರೆದಿಟ್ಟಿದೆ.

ಇದನ್ನೂ ಓದಿ: 19 ಫಾರೆಕ್ಸ್ ಟ್ರೇಡಿಂಗ್ ಸಂಸ್ಥೆಗಳು ಆರ್​ಬಿಐನ ಅಲರ್ಟ್ ಪಟ್ಟಿಗೆ; ಒಟ್ಟು ಸಂಖ್ಯೆ 75ಕ್ಕೆ ಏರಿಕೆ

200 ಕೋಟಿ ಚದರಡಿ ಎಂದರೆ 4,500 ಎಕರೆ ಸ್ಥಳವಾಗುತ್ತದೆ. ಆಸ್ಪತ್ರೆಗಳ ನಿರ್ಮಾಣಕ್ಕೆ ಅಷ್ಟು ಜಾಗ ಬೇಕಾಗುತ್ತದೆ. ಆಸ್ಪತ್ರೆಯೂ ಸೇರಿದಂತೆ ಭಾರತದಲ್ಲಿ 582 ಹೂಡಿಕೆ ಅವಕಾಶಗಳನ್ನು ವರದಿಯಲ್ಲಿ ಗುರುತಿಸಲಾಗಿದೆ. 32 ಬಿಲಿಯನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂ) ಮೊತ್ತದ ಹೂಡಿಕೆ ಸಾಧ್ಯತೆ ಇದೆ.

ಭಾರತದಲ್ಲಿ ಹೆಲ್ತ್​ಕೇರ್ ಅಥವಾ ಆರೋಗ್ಯ ಮಾರುಕಟ್ಟೆ 372 ಕೋಟಿ ಬಿಲಿಯನ್ ಡಾಲರ್ ಮೌಲ್ಯದ್ದು ಎಂದು 2022ರಲ್ಲಿ ಅಂದಾಜಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಶೇ. 18ರ ದರದಲ್ಲಿ ಈ ಮಾರುಕಟ್ಟೆ ವಿಸ್ತರಿಸುತ್ತಿದೆ. ಈ ಆರೋಗ್ಯ ಕ್ಷೇತ್ರದಲ್ಲಿ ಶೇ. 80ರಷ್ಟು ಪಾಲು ಆಸ್ಪತ್ರೆ ಉದ್ಯಮದ್ದೇ ಆಗಿದೆ. ಈ ಪೈಕಿ ಖಾಸಗಿ ವಲಯದ ಶೇ. 63ರಷ್ಟು ಆಸ್ಪತ್ರೆಗಳಿವೆ.

ಇದನ್ನೂ ಓದಿ: ರೇಮಂಡ್ ರಾದ್ಧಾಂತ; ಮಕ್ಕಳಿಗೆ ಆಸ್ತಿಕೊಟ್ಟು ಮೂರ್ಖರಾಗಬೇಡಿ: ವಿಜಯ್​ಪತ್ ಸಿಂಘಾನಿಯಾ ಕಣ್ಣೀರು

ಇನ್ನು, ಭಾರತದಲ್ಲಿ ವೈದ್ಯರ ಸಂಖ್ಯೆ ಸಾಕಷ್ಟಿದೆ ಎನ್ನಲಾಗಿದೆ. ಡಬ್ಲ್ಯೂಎಚ್​ಒ ಮಾಡಿರುವ ಶಿಫಾರಸು ಪ್ರಕಾರ ವೈದ್ಯರ ಸಂಖ್ಯೆ ಪ್ರತೀ 1,000 ಜನರಿಗೆ ಒಬ್ಬರಿರಬೇಕು. ಭಾರತದಲ್ಲಿ ಇದಕ್ಕಿಂತಲೂ ತುಸು ಹೆಚ್ಚೇ ಇದ್ದಾರೆ. 2022ರ ಜೂನ್ ತಿಂಗಳಲ್ಲಿ ಸಂಸತ್​ಗೆ ಸರ್ಕಾರ ಕೊಟ್ಟ ಮಾಹಿತಿ ಪ್ರಕಾರ, 13 ಲಕ್ಷ ನೊಂದಾಯಿತ ಆಲೋಪಥಿ ವೈದ್ಯರು ಮತ್ತು 5.65 ಲಕ್ಷ ಆಯುಷ್ ವೈದ್ಯರಿದ್ದಾರೆ. ಇವರ ಜೊತೆಗೆ, 34.33 ಲಕ್ಷ ನೊಂದಾಯಿತ ನರ್ಸಿಂಗ್ ಸಿಬ್ಬಂದಿ, 13 ಲಕ್ಷ ಇತರ ಆರೋಗ್ಯ ವೃತ್ತಿಪರರು ಇದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ