ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 5.08; ತರಕಾರಿ ಬೆಲೆ ಏರಿಕೆ ಪ್ರಮುಖ ಕಾರಣ

|

Updated on: Jul 12, 2024 | 6:32 PM

India retail inflation in 2024 June: ಸಿಪಿಐ ಅಥವಾ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 5.08ಕ್ಕೆ ಏರಿದೆ. ಹಿಂದಿನ ತಿಂಗಳು ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಇನ್​ಫ್ಲೇಷನ್ ತುಸು ಏರಿಕೆ ಆಗಿದೆ. ತರಕಾರಿ ಹಣದುಬ್ಬರ ಶೇ. 16ಕ್ಕಿಂತಲೂ ಹೆಚ್ಚಿದೆ. ಬೇಳೆ ಕಾಳುಗಳ ಹಣದುಬ್ಬರವೂ ಗಣನೀಯವಾಗಿ ಹೆಚ್ಚಾಗಿದೆ.

ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 5.08; ತರಕಾರಿ ಬೆಲೆ ಏರಿಕೆ ಪ್ರಮುಖ ಕಾರಣ
ಹಣದುಬ್ಬರ
Follow us on

ನವದೆಹಲಿ, ಜುಲೈ 12: ಭಾರತದಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕುವ ಸರ್ಕಾರದ ಕ್ರಮಗಳು ನಿರೀಕ್ಷಿತ ಗುರಿ ಸಾಧನೆ ಆಗುತ್ತಿಲ್ಲ. ಜೂನ್ ತಿಂಗಳ ಗ್ರಾಹಕ ಬೆಲೆ ಅನುಸೂಚಿ (CPI) ಆಧಾರಿತವಾದ ಹಣದುಬ್ಬರದ ಮಾಹಿತಿ ಹೊರಬಂದಿದ್ದು, ಈ ರೀಟೇಲ್ ಇನ್​ಫ್ಲೇಶನ್ ಶೇ. 5.08ರಷ್ಟು ಇರುವುದು ಗೊತ್ತಾಗಿದೆ. ಇಂದು ಶುಕ್ರವಾರ ಸರ್ಕಾರ (ರಾಷ್ಟ್ರೀಯ ಸಾಂಖ್ಯಿಕ ಕಚೇರಿ) ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಮಾಹಿತಿ ಇದೆ. ಕಳೆದ ನಾಲ್ಕು ತಿಂಗಳಲ್ಲೇ ಇದು ಗರಿಷ್ಠ ಹಣದುಬ್ಬರ ದರವಾಗಿದೆ. ಹಿಂದಿನ ತಿಂಗಳು, ಅಂದರೆ ಮೇ ನಲ್ಲಿ ರೀಟೇಲ್ ಹಣದುಬ್ಬರ ಶೇ. 4.75ರಷ್ಟಿತ್ತು. ಕಳೆದ ವರ್ಷದ (2023) ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 4.87 ಇತ್ತು. ಫೆಬ್ರುವರಿ ತಿಂಗಳಲ್ಲಿ ಅದು ಶೇ. 5.09 ಇತ್ತು. ಆ ಬಳಿಕ ಗರಿಷ್ಠ ಮಟ್ಟ ಮುಟ್ಟಿದ್ದು ಈ ಜೂನ್ ತಿಂಗಳಲ್ಲೇ.

ಗ್ರಾಮೀಣ ಭಾಗದ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 5.67ರಷ್ಟಿದೆ. 2024ರ ಮೇ ತಿಂಗಳಲ್ಲಿ ಶೇ. 5.34, ಮತ್ತು 2023ರ ಜೂನ್ ತಿಂಗಳಲ್ಲಿ ಶೇ. 4.78 ರಷ್ಟಿತ್ತು. ನಗರಭಾಗದ ಹಣದುಬ್ಬರ ತುಸು ಉತ್ತಮ ಸ್ಥಿತಿಯಲ್ಲಿದೆ. ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ನಗರ ಭಾಗದ ಹಣದುಬ್ಬರ ಕಡಿಮೆ ಆಗಿದೆ. ಎನ್​ಎಸ್​ಒ ದತ್ತಾಂಶದ ಪ್ರಕಾರ ನಗರಭಾಗದ ಹಣದುಬ್ಬರ 2023ರ ಜೂನ್ ತಿಂಗಳಲ್ಲಿ ಶೇ. 4.96ರಷ್ಟಿತ್ತು. ಈ ಜೂನ್​ನಲ್ಲಿ ಅದು ಶೇ. 4.39ಕ್ಕೆ ಇಳಿದಿದೆ. ಆದರೆ, ಹಿಂದಿನ ತಿಂಗಳಿಗೆ ಹೋಲಿಸಿದರೆ ಇಲ್ಲಿ ಇನ್​ಫ್ಲೇಷನ್ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಅರ್ಬನ್ ಇನ್​ಫ್ಲೇಷನ್ ಶೇ. 4.21ರಷ್ಟಿತ್ತು.

ಇನ್ನು, ಆಹಾರ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 9.55ಕ್ಕೆ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಶೇ. 8.69ರಷ್ಟಿತ್ತು ಇದರ ದರ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಆಹಾರ ಹಣದುಬ್ಬರ ಶೇ. 4.55 ಇತ್ತು. ತರಕಾರಿಗಳ ಬೆಲೆ ಏರಿಕೆ ಅಥವಾ ಹಣದುಬ್ಬರ ಶೇ. 29.32ಕ್ಕೆ ಏರಿದೆ. ಬೇಳೆ ಕಾಳುಗಳ ಹಣದುಬ್ಬರ ಶೇ. 16.1ರಷ್ಟಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಎಐ ಚಾಟ್​ಬೋಟ್ ಬಳಸಿದ್ದೀರಾ? ಕಿಸಾನ್ ಇಮಿತ್ರಾ ಬಗ್ಗೆ ಇಲ್ಲಿದೆ ಡೀಟೇಲ್ಸ್

ತರಕಾರಿ ಬೆಲೆಗಳ ಹೆಚ್ಚಳವು ಜೂನ್ ತಿಂಗಳ ಒಟ್ಟಾರೆ ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವಂತಿದೆ. ‘ರೀಟೇಲ್ ಹಣದುಬ್ಬರ ನಾವು ನಿರೀಕ್ಷಿಸಿದುದಕ್ಕಿಂತಲೂ ತುಸು ಹೆಚ್ಚಿನ ಮಟ್ಟಕ್ಕೆ ಹೋಗಿದೆ. ಸದ್ಯೋಭವಿಷ್ಯದಲ್ಲಿ ಆಹಾರ ಹಣದುಬ್ಬರ ಹೆಚ್ಚಳ ಭೀತಿ ಇದ್ದೇ ಇದೆ. ಆದರೆ, ಹದವಾದ ಮಳೆ ಮತ್ತು ಸರಿಯಾದ ಬಿತ್ತನೆ ಆಗಿ ಬೆಲೆಗಳು ಹತೋಟಿಗೆ ಬರಬಹುದು ಎಂದು ನಿರೀಕ್ಷಿಸುತ್ತೇವೆ,’ ಎಂದು ಕೋಟಕ್ ಮಹೀಂದ್ರ ಬ್ಯಾಂಕ್​ನ ಮುಖ್ಯ ಆರ್ಥಿಕ ತಜ್ಞೆ ಉಪಾಸನಾ ಭಾರದ್ವಜ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ