
ಮುಂಬೈ, ಏಪ್ರಿಲ್ 11: ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಗರಿಗೆದರಿ ನಿಂತಂತಿದೆ. ಬೆಳಗಿನ ವಹಿವಾಟಿನಲ್ಲಿ ಗೂಳಿ ಆಟ ನಡೆಯುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇ. 1ರಿಂದ 2ರಷ್ಟು ಏರಿಕೆ ಕಂಡಿವೆ. ಬೆಳಗ್ಗೆ 11 ಗಂಟೆಗೆ ಸೆನ್ಸೆಕ್ಸ್ 1,200 ಅಂಕಗಳನ್ನು ಹೆಚ್ಚಿಸಿಕೊಂಡಿತು. ಬಹುತೇಕ ಇತರೆಲ್ಲಾ ಸೂಚ್ಯಂಕಗಳೂ ಕೂಡ ಏರಿಕೆ ಕಂಡಿವೆ. ಬಿಎಸ್ಇ ಸ್ಮಾಲ್ಕ್ಯಾಪ್ ಇಂಡೆಕ್ಸ್ ಶೇ. 2.13ರಷ್ಟು ಲಾಭ ಮಾಡಿದೆ. ಎನ್ಎಸ್ಇನಲ್ಲಿ ವಿವಿಧ ನಿಫ್ಟಿ ಸೂಚ್ಯಂಕಗಳು ಭರ್ಜರಿ ಏರಿಕೆ ಕಂಡಿವೆ. ಟ್ಯಾರಿಫ್ ಸಮರದ ಮಧ್ಯೆ ಭಾರತದ ಮಾರುಕಟ್ಟೆ ಗರಿಗೆದರಲು ಏನು ಕಾರಣ?
ಡೊನಾಲ್ಡ್ ಟ್ರಂಪ್ ಅವರು ಚೀನಾ ಹೊರತುಪಡಿಸಿ ಉಳಿದ ದೇಶಗಳಿಗೆ ಸುಂಕ ಏರಿಕೆಯ ಕ್ರಮವನ್ನು 90 ದಿನಗಳವರೆಗೆ ಹಿಂಪಡೆದುಕೊಂಡಿದ್ದಾರೆ. ಹಿಂದೆ ಇದ್ದ ಶೇ 10ರ ಮೂಲ ಸಂಕ ಮಾತ್ರವೇ ಇರಲಿದೆ. ಭಾರತಕ್ಕೆ ಟ್ರಂಪ್ ಅವರು ಶೇ. 26ರಷ್ಟು ಆಮದು ಸುಂಕ ಹಾಕುವುದಾಗಿ ಹೇಳಿದ್ದರು. ಈಗ ಮೂರು ತಿಂಗಳು ಈ ಹೊಸ ದರ ಜಾರಿ ಇರುವುದಿಲ್ಲ.
ಇದನ್ನೂ ಓದಿ: ಗಮನಿಸಿ, ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು
ಚೀನಾ ಮೇಲೆ ಅಮೆರಿಕ ಒಂದೂವರೆ ಪಟ್ಟು ಸುಂಕ ವಿಧಿಸಲು ನಿರ್ಧರಿಸಿದೆ. ಭಾರತವೂ ಸೇರಿ ಬೇರೆ ದೇಶಗಳಿಗೆ ಅಮೆರಿಕ ವಿನಾಯಿತಿ ನೀಡಿದೆ. ಇದರಿಂದ ವಿದೇಶೀ ಹೂಡಿಕೆಗಳು ಚೀನಾ ಮಾರುಕಟ್ಟೆಯಿಂದ ಹೊರನಡೆದು ಭಾರತಕ್ಕೆ ಬರುತ್ತಿರಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು 25 ಮೂಲಾಂಕಗಳಷ್ಟು ಇಳಿಕೆ ಮಾಡಿರುವುದು ಹೂಡಿಕೆದಾರರಲ್ಲಿ ಭಾರತದ ಮಾರುಕಟ್ಟೆ ಬಗ್ಗೆ ಆತ್ಮವಿಶ್ವಾಸ ಮೂಡುವಂತೆ ಮಾಡಿದೆ. ಹಾಗೆಯೇ, ಆರ್ಬಿಐನ ನೀತಿ ನಿಲುವನ್ನು ನ್ಯೂಟ್ರಲ್ನಿಂದ ಅಕಾಮೊಡೇಟಿವ್ಗೆ ಬದಲಾಯಿಸಿರುವುದೂ ಕೂಡ ಮಾರುಕಟ್ಟೆಗೆ ಸಕಾರಾತ್ಮಕ ನಿರ್ಧಾರ ಎನಿಸಿದೆ.
ಇದನ್ನೂ ಓದಿ: ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?
2025-26ರಲ್ಲಿ ಹಣದುಬ್ಬರ ಆರ್ಬಿಐ ನಿಗದಿ ಮಾಡಿಕೊಂಡ ಗುರಿಯ ಪರಿಧಿಯಲ್ಲೇ ಇರುವ ಸಾಧ್ಯತೆ ಇದೆ. ಆರ್ಬಿಐನ ಎಂಪಿಸಿ ಸಭೆಯಲ್ಲಿ ಮಾಡಲಾದ ಅಂದಾಜು ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4ರಷ್ಟು ಮಾತ್ರವೇ ಇರುವ ಸಾಧ್ಯತೆ ಇದೆ. ಇದು ಭಾರತದ ಆರ್ಥಿಕತೆಗೆ ಶುಭ ಸೂಚನೆ ಎನಿಸಿದೆ. ಜಿಡಿಪಿ ದರ ಕೂಡ ಶೇ. 6ಕ್ಕಿಂತ ಮೇಲ್ಪಟ್ಟೇ ಇರಬಹುದು ಎಂಬುದು ಆರ್ಬಿಐ ಅಂದಾಜು.
ಇವೆಲ್ಲಾ ಅಂಶಗಳು ಭಾರತದ ಆರ್ಥಿಕತೆ ಹಾಗೂ ಬಂಡವಾಳ ಮಾರುಕಟ್ಟೆ ಮೇಲೆ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ