Development: ಚೀನಾದ್ದು ಆಯಿತು, ಮುಂದೇನಿದ್ದರೂ ಭಾರತದ ಯುಗ; ಕಡಿಮೆ ತಲಾದಾಯವೇ ದೇಶದ ಓಟಕ್ಕೆ ಶಕ್ತಿ- ಮಾರ್ಗನ್ ಸ್ಟಾನ್ಲೀ

Morgan Stanley Report: ಇತ್ತೀಚೆಗಷ್ಟೇ ಭಾರತದ ಆರ್ಥಿಕತೆಗೆ ಲೋ ವೈಟ್​ನಿಂದ ಈಕ್ವಲ್ ವೈಟ್, ಮತ್ತೀಗ ಓವರ್​ವೈಟ್​​ಗೆ ರೇಟಿಂಗ್ ಹೆಚ್ಚಿಸಿರುವ ಮಾರ್ಗನ್ ಸ್ಟಾನ್ಲೀ ಎಂಬ ವಿದೇಶೀ ಬ್ರೋಕರೇಜ್ ಕಂಪನಿ, ಸದ್ಯದಲ್ಲೇ ಭಾರತದ ದೀರ್ಘಾವಧಿ ಬೆಳವಣಿಗೆಯ ಅಲೆ ಆರಂಭವಾಗಲಿದೆ ಎಂದು ಭವಿಷ್ಯ ನುಡಿದಿದೆ.

Development: ಚೀನಾದ್ದು ಆಯಿತು, ಮುಂದೇನಿದ್ದರೂ ಭಾರತದ ಯುಗ; ಕಡಿಮೆ ತಲಾದಾಯವೇ ದೇಶದ ಓಟಕ್ಕೆ ಶಕ್ತಿ- ಮಾರ್ಗನ್ ಸ್ಟಾನ್ಲೀ
ಭಾರತ ಚೀನಾ ಇರುವ ವಿಶ್ವ ಭೂಪ (ಸಾಂದರ್ಭಿಕ ಚಿತ್ರ)
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 03, 2023 | 4:00 PM

ನವದೆಹಲಿ, ಆಗಸ್ಟ್ 3: ತೀರಾ ಕಡಿಮೆ ಇರುವ ತಲಾದಾಯದ ಕಾರಣ ಭಾರತದ ಪ್ರಗತಿಯನ್ನು ಟೀಕಿಸುವವರಿದ್ದಾರೆ. ಈಗ ಇದೇ ಅಲ್ಪ ತಲಾದಾಯವು ಭಾರತದ ಗಮನಾರ್ಹ ಓಟಕ್ಕೆ ಎಡೆ ಮಾಡಿಕೊಡಲಿದೆ. ಮಾರ್ಗನ್ ಸ್ಟಾನ್ಲೀ ಎಂಬ ಜಾಗತಿಕ ಬ್ರೋಕರೇಜ್ ಸಂಸ್ಥೆ ಗುರುವಾರ (ಆಗಸ್ಟ್ 3) ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದ ದೀರ್ಘಾವಧಿ ಅಲೆಯ ಬೆಳವಣಿಗೆ (Long Wave Boom) ಆರಂಭ ಆಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. 12,700 ಡಾಲರ್ ತಲಾದಾಯ (GDP Per Capita Income) ಇರುವ ಚೀನಾದ ದೀರ್ಘಾವಧಿ ಅಲೆಯ ಬೆಳವಣಿಗೆ ಮುಕ್ತಾಯದ ಅಂಚಿಗೆ ಬಂದಿದೆ. ಕೇವಲ 2,500 ಡಾಲರ್​ಷ್ಟು ತಲಾದಾಯ ಇರುವ ಭಾರತಕ್ಕೆ ಅಭಿವೃದ್ಧಿಯ ದೀರ್ಘ ಅಲೆಯ ಆರಂಭ ಗೆರೆ ಹತ್ತಿರದಲ್ಲೇ ಇದೆ ಎಂದು ಮಾರ್ಗನ್ ಸ್ಟಾನ್ಲೀ ಹೇಳಿದೆ.

ಮಾರ್ಗನ್ ಸ್ಟಾನ್ಲೀ ಇತ್ತೀಚೆಗಷ್ಟೇ ಭಾರತ ಮತ್ತು ಚೀನಾ ಮೇಲಿನ ತನ್ನ ರೇಟಿಂಗ್ ಅನ್ನು ಬದಲಾಯಿಸಿದ್ದು ಗಮನಾರ್ಹ. ಈ ಬ್ರೋಕರೇಜ್ ಕಂಪನಿಗಳು ವಿವಿಧ ದೇಶಗಳ ಆರ್ಥಿಕತೆಯ ಪರಿಸ್ಥಿತಿಯನ್ನು ಅಲ್ಪ ತೂಕ (Underweight), ಸಮತೂಕ (Equal weight), ಅತಿತೂಕ (Overweight) ಎಂದು ಮೂರು ವಿಧವಾಗಿ ವರ್ಗೀಕರಿಸುತ್ತದೆ. ಕೆಲ ತಿಂಗಳ ಹಿಂದಿನವರೆಗೂ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಅಲ್ಪ ತೂಕ ಎಂದು ವರ್ಗೀಕರಿಸಲಾಗಿತ್ತು. ನಾಲ್ಕು ತಿಂಗಳ ಹಿಂದಷ್ಟೇ ಅದನ್ನು ಸಮತೂಕಕ್ಕೆ ಅಪ್​ಗ್ರೇಡ್ ಮಾಡಿತು. ಇದೀಗ ಓವರ್​ವೈಟ್ ಅಥವಾ ಅತಿತೂಕದ ಆರ್ಥಿಕತೆ ಎಂದು ಬಡ್ತಿಕೊಟ್ಟಿದೆ. ಅದೇ ವೇಳೆ, ಚೀನಾದ ಸ್ಥಾನಮಾನವನ್ನು ಓವರ್​ವೈಟ್​ನಿಂದ ಈಕ್ವಲ್ ವೈಟ್​ಗೆ ಡೌನ್​ಗ್ರೇಡ್ ಮಾಡಿದೆ.

ಜೂನ್ ತಿಂಗಳಲ್ಲಿ ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ಈಕ್ವಿಟಿ ಸ್ಟ್ರಾಟಿಜಿಸ್ಟ್ ಜೋನಾತನ್ ಗಾರ್ನರ್ ಮತ್ತವರ ತಂಡ ಭಾರತಕ್ಕೆ ಭೇಟಿ ನೀಡಿತ್ತು. ಆಗ ಭಾರತಕ್ಕೆ ನೀಡಿದ ರೇಟಿಂಗ್ ಅನ್ನು ಓವರ್​ವೈಟ್​ಗೆ ಏರಿಸಿತ್ತು.

ಇದನ್ನೂ ಓದಿ: America: ಎಚ್-1ಬಿ ವೀಸಾ, 2ನೇ ಸುತ್ತಿನ ಲಾಟರಿ; ಅಮೆರಿಕದಿಂದ ಬಹಿಷ್ಕಾರಗೊಂಡ ಕಂಪನಿಗಳು ಮತ್ತು ವ್ಯಕ್ತಿಗಳ ಹೊಸ ಪಟ್ಟಿ

ಅಲ್ಪ ತಲಾದಾಯವೇ ಮುಂದಿನ ಹಂತದ ಪ್ರಗತಿಗೆ ಪುಷ್ಟಿ?

ಚೀನಾದ 12,500 ಡಾಲರ್ ತಲಾದಾಯಕ್ಕೆ ಹೋಲಿಸಿದರೆ ಭಾರತದ 2,500 ಡಾಲರ್ ಬಹಳ ಅಲ್ಪ. ತಲಾದಾಯ ಎಂಬುದು ಒಂದು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೊತ್ತವನ್ನು ಇಡೀ ಜನಸಂಖ್ಯೆಗೆ ಸರಾಸರಿ ತೆಗೆದುಕೊಂಡಾಗ ಬರುವ ಮೊತ್ತ. ಜಿಡಿಪಿಯಲ್ಲಿ ಭಾರತ ವಿಶ್ವದ 5ನೇ ಅತಿದೊಡ್ಡ ದೇಶವಾದರೂ ತಲಾದಾಯದ ವಿಚಾರದಲ್ಲಿ 100ನೇ ಸ್ಥಾನಕ್ಕಿಂತಲೂ ಬಹಳ ಕೆಳಗೆ ಇದೆ. ಭಾರತದ ಈ ಅಲ್ಪ ತಲಾದಾಯವು ಅದರ ಆರ್ಥಿಕ ಬೆಳವಣಿಗೆಯ ಗತಿ ಹೆಚ್ಚಳಕ್ಕೆ ಎಡೆ ಮಾಡಿಕೊಡಬಹುದು ಎಂಬುದು ಹಲವು ಫಂಡ್ ಮ್ಯಾನೇಜರುಗಳು ಮತ್ತು ಮಾರುಕಟ್ಟೆ ಪರಿಣಿತರ ಅನಿಸಿಕೆ.

ಭಾರತದ ಜನಸಾಮಾನ್ಯರ ಸಾಲದ ಪ್ರಮಾಣ ಬಹಳ ಕಡಿಮೆ ಇರುವುದು ಅನುಕೂಲ

ಸರ್ಕಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಭಾರತದ ಜನಸಾಮಾನ್ಯರ ಸಾಲದ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಜಿಡಿಪಿಗೆ ಹೋಲಿಸಿದರೆ ಜನಸಾಮಾನ್ಯರ ಸಾಲ ಶೇ. 19 ಮಾತ್ರ ಇದೆ. ಇಷ್ಟು ಕಡಿಮೆ ಮಟ್ಟದಲ್ಲಿರುವುದು ಆರ್ಥಿಕತೆಯ ಆರೋಗ್ಯಕ್ಕೆ ಸೂಚಕವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಹೋಲಿಸಿದರೆ ಚೀನಾದ ಜನಸಾಮಾನ್ಯರ ಸಾಲ ಶೇ. 48ರಷ್ಟು ಇದೆ. ಮಾರ್ಗನ್ ಸ್ಟಾನ್ಲೀ ಬಿಡುಗಡೆ ಮಾಡಿದ ವರದಿ ಪ್ರಕಾರ, ಕೋವಿಡ್ ನಿರ್ಬಂಧ ಸಡಿಲಿಸಿದ ಬಳಿಕ ಭಾರತದಲ್ಲಿ ತಯಾರಿಕಾ ಮತ್ತು ಸೇವಾ ಪಿಎಂಐ ಸೂಚ್ಯಂಕಗಳು ಸ್ಥಿರವಾಗಿ ಮೇಲೇರಿವೆ. ಇದಕ್ಕೆ ತದ್ವಿರುದ್ಧವಾಗಿ ಚೀನಾದ ಪಿಎಂಐಗಳು ಕುಸಿತ ಕಂಡಿವೆ ಎಂದು ಉದಾಹರಣೆ ನೀಡಲಾಗಿದೆ.

ಇದನ್ನೂ ಓದಿ: Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು

ಬಹುಗುಂಪುಗಳ ವಿಶ್ವದಿಂದ ಭಾರತಕ್ಕೆ ಅನುಕೂಲ

‘ಭಾರತ ಜಾಗತಿಕ ರಾಜಕೀಯ ಸನ್ನಿವೇಶದಲ್ಲಿ ಬಹಳ ಬೇಗ ಅಧಿಕಾರಯುತ ಸ್ಥಾನ ಗಿಟ್ಟಿಸುತ್ತಿದೆ. ಬಹುಗುಂಪಿನ ವಿಶ್ವ ಶ್ರೇಣಿ ವ್ಯವಸ್ಥೆಯು (Multipolar world) ಭಾರತಕ್ಕೆ ಅನುಕೂಲ ಮಾಡಿಕೊಟ್ಟಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಜೊತೆ ಸೇರಿ ರಚನೆಯಾದ ಕ್ವಾಡ್ ಗುಂಪಿನಲ್ಲಿ (Quad Group) ಭಾರತ ಸದಸ್ಯನಾಗಿದೆ. ಭಾರತಕ್ಕೆ ಎಫ್​​ಡಿಐ ಒಳಹರಿವು ಹೆಚ್ಚಾಗಿದೆ. ಅಮೆರಿಕ, ಜಪಾನ್ ಮತ್ತು ತೈವಾನ್​ನ ಸಂಸ್ಥೆಗಳಿಂದ ಹೂಡಿಕೆಗಳು (FDI) ಬರುತ್ತಿವೆ. ಜೊತೆಗೆ ಭಾರತದ ದೊಡ್ಡ ದೇಶೀಯ ಮಾರುಕಟ್ಟೆಯೂ ಇದೆ. ಹಾಗೆಯೇ ರಫ್ತಿಗೆ ಬೇಕಾದ ಪೋರ್ಟ್, ರಸ್ತೆ, ವಿದ್ಯುತ್ ಪೂರೈಕೆ ಇತ್ಯಾದಿ ಸೌಕರ್ಯ ವ್ಯವಸ್ಥೆ ಉತ್ತಮಗೊಂಡಿದೆ’ ಎಂದು ಮಾರ್ಗನ್ ಸ್ಟಾನ್ಲೀ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಇದಕ್ಕೆ ಎದುರಾಗಿ, ಚೀನಾಗೆ ಬಹುಗುಂಪಿನ ವಿಶ್ವ ವ್ಯವಸ್ಥೆಯಿಂದ ಉದ್ಭವಿಸಿರುವ ಹೊಸ ಸವಾಲನ್ನು, ಅದರಲ್ಲೂ ಅಮೆರಿಕದಿಂದ ಎದುರಾಗುವ ಸವಾಲನ್ನು ಎದುರಿಸುವುದು ಚೀನಾಗೆ ಕಷ್ಟವಾಗಬಹುದು ಎಂಬ ಅಭಿಪ್ರಾಯವನ್ನೂ ಮಾರ್ಗನ್ ಸ್ಟಾನ್ಲೀ ವ್ಯಕ್ತಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ