
ದುಬೈ, ಜೂನ್ 19: ಭಾರತ ಮತ್ತು ಯುಎಇ ನಡುವೆ ಬಹಳ ವಿಶೇಷ ಸಂಬಂಧ ಇದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಭಾರತಕ್ಕೆ ಅತ್ಯಂತ ಆಪ್ತವಾಗಿರುವ ದೇಶ ಯುಎಇ ಆಗಿದೆ ಎಂದು ಆ ದೇಶಕ್ಕೆ ಭಾರತದ ರಾಯಭಾರಿಯಾಗಿರುವ ಸಂಜಯ್ ಸುಧೀರ್ (Sunjay Sudhir) ಹೇಳಿದ್ಧಾರೆ. ನ್ಯೂಸ್9 ಗ್ಲೋಬಲ್ ಸಮಿಟ್ನ ಯುಎಇ ಆವೃತ್ತಿಯ (News9 Global Summit 2025, UAE) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಭಾರತ ಹಾಗೂ ಯುಎಇ ದೇಶಗಳ ನಡುವಿನ ಸಂಬಂಧವು ಕಾಲ ಪರೀಕ್ಷೆಯಲ್ಲಿ ಜೈಸಿದೆ. ಬಹಳ ಗಾಢವಾದ ವಿಶ್ವಾಸದಿಂದ ಕೂಡಿರುವ ಸಮಗ್ರ ಸಹಭಾಗಿತ್ವವಾಗಿ (comprehensive partnership) ಬೆಳೆದಿದೆ ಎಂದು ಅಭಿಪ್ರಾಯಪಟ್ಟರು. ಗ್ಲೋಬಲ್ ಸಮಿಟ್ ಕಾರ್ಯಕ್ರಮಕ್ಕೆ ಯುಎಇಯನ್ನು ಆಯ್ಕೆ ಮಾಡಿಕೊಂಡ ನ್ಯೂಸ್9 ನಿರ್ಧಾರವನ್ನೂ ಅವರು ಸ್ವಾಗತಿಸಿದರು.
‘ಭಾರತದ ಸಕ್ರಿಯ ಮಾಧ್ಯಮದ ಮುಖವಾಗಿದೆ ನ್ಯೂಸ್9. ರಾಜಕೀಯವೇ ಆಗಲೀ, ಆರ್ಥಿಕವೇ ಆಗಲೀ, ಸಾಮಾಜಿಕವೇ ಆಗಲಿ, ದೇಶದ ಚಲನಶೀಲಶಕ್ತಿಯನ್ನು (Vibrancy) ಅದು ಪ್ರತಿನಿಧಿಸುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: News9 Global Summit: ಭಾರತ-ಯುಎಇ ಸಂಬಂಧದಲ್ಲಿ ‘ಸಿಇಪಿಎ’ ಗೇಮ್ ಚೇಂಜರ್: ಸತೀಶ್ ಕುಮಾರ್ ಸಿವನ್
ಟಿವಿ9 ನೆಟ್ವರ್ಕ್ ಆಯೋಜಿಸಿರುವ ನ್ಯೂಸ್9 ಗ್ಲೋಬಲ್ ಸಮಿಟ್ನ ಎರಡನೇ ಆವೃತ್ತಿ ಇದು. ಕಳೆದ ವರ್ಷ ಜರ್ಮನಿಯಲ್ಲಿ ಮೊದಲ ಸಮಿಟ್ ನಡೆದಿತ್ತು. ಎರಡನೇ ಸಮಿಟ್ಗೆ ಯುಎಇಯನ್ನು ಆಯ್ಕೆ ಮಾಡಲಾಗಿದೆ. 35 ಲಕ್ಷಕ್ಕೂ ಅಧಿಕ ಭಾರತೀಯ ಸಮುದಾಯದವರು ಇರುವುದು, ಮತ್ತು ಭಾರತದ ಜೊತೆ ಅತ್ಯುತ್ತಮ ವ್ಯಾಪಾರ ಸಂಬಂಧ ಹೊಂದಿರುವ ಕಾರಣಕ್ಕೆ ಯುಎಇಯಲ್ಲಿ ಶೃಂಗಸಭೆ ನಡೆಸಲಾಗುತ್ತಿದೆ. ಭಾರತ ಮತ್ತು ಯುಎಇ ನಡುವಿನ ಸಂಬಂಧವೇ ಈ ಸಮಿಟ್ನ ಮುಖ್ಯ ಥೀಮ್ ಆಗಿದೆ.
ಭಾರತ ಮತ್ತು ಯುಎಇ ನಡುವೆ ಸಂಬಂಧವು ಬಹಳ ಹಳೆಯದಾದರೂ ಕಳೆದ 10 ವರ್ಷಗಳಿಂದ ಒಂದು ಲಯಕ್ಕೆ ತಿರುಗಿದೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದರು. ಅದಕ್ಕೂ ಮೊದಲು 34 ವರ್ಷ ಭಾರತದ ಯಾವ ಪ್ರಧಾನಿಯೂ ಯುಎಇಗೆ ಹೋಗಿರಲಿಲ್ಲ. ಈ ಸಂಬಂಧ ಗಟ್ಟಿಗೊಳ್ಳುತ್ತಾ ಹೋಗಿ ಕೊನೆಗೆ ಸಿಇಪಿಎ ಒಪ್ಪಂದಕ್ಕೆ ಸಹಿಹಾಕುವ ಮಟ್ಟಕ್ಕೆ ತಲುಪಿದೆ. 2030ರೊಳಗೆ ಎರಡೂ ದೇಶಗಳ ಮಧ್ಯೆ 100 ಬಿಲಿಯನ್ ಡಾಲರ್ ತೈಲೇತರ ಸರಕು ವ್ಯಾಪಾರ ನಡೆಯುವ ಗುರಿಯನ್ನು ಸಿಇಪಿಎನಲ್ಲಿ ಇಡಲಾಗಿದೆ.
ಇದನ್ನೂ ಓದಿ: ಭಾರತಕ್ಕೆ ಜಾಗತಿಕ ಧ್ವನಿಯಾಗಿದೆ ಟಿವಿ9: ನ್ಯೂಸ್9 ಗ್ಲೋಬಲ್ ಸಮಿಟ್ಗೆ ಚಾಲನೆ ಕೊಟ್ಟ ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್
‘ಐತಿಹಾಸಿಕವಾಗಿ ಎರಡೂ ದೇಶಗಳ ಮಧ್ಯೆ ಹರಳುಗಳು ಮತ್ತು ಮಸಾಲೆ ವಸ್ತುಗಳ ವ್ಯಾಪಾರದ ಸಂಬಂಧ ಇತ್ತು. ಇವತ್ತು ಸಂಬಂಧ ಬಹಳ ಗಾಢವಾಗಿದೆ’ ಎಂದು ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ