News9 Global Summit: ಭಾರತ-ಯುಎಇ ಸಂಬಂಧದಲ್ಲಿ ‘ಸಿಇಪಿಎ’ ಗೇಮ್ ಚೇಂಜರ್: ಸತೀಶ್ ಕುಮಾರ್ ಸಿವನ್
Consul General of India at Dubai Satish Kumar Sivan speaks at News9 Global Summit: ಭಾರತ ಮತ್ತು ಯುಎಇ ಸಂಬಂಧಕ್ಕೆ ಸಮಗ್ರ ಆರ್ಥಿಕ ಪಾಲುದಾರಿಗೆ ಒಪ್ಪಂದ ಒಂದು ಗೇಮ್ ಚೇಂಜರ್ ಆಗಿದೆ ಎಂದು ದುಬೈನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಸತೀಶ್ ಕುಮಾರ್ ಸಿವನ್ ಹೇಳಿದ್ದಾರೆ. ತಾಜ್ ದುಬೈನಲ್ಲಿ ನಡೆಯುತ್ತಿರುವ ನ್ಯೂಸ್9 ಜಾಗತಿಕ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಿಇಪಿಎ ಹೇಗೆ ಗೇಮ್ ಚೇಂಜರ್ ಆಗಿದೆ ಎನ್ನುವುದನ್ನು ವಿವರಿಸಿದ್ದಾರೆ.

ದುಬೈ, ಜೂನ್ 19: ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ಸಂಬಂಧದಲ್ಲಿ ಸಿಇಪಿಎ ಅಥವಾ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು (CEPA- C0mprehensive Economic Partnership Agreement) ಮಹತ್ವದ ಮೈಲಿಗಲ್ಲು ಎಂದು ಭಾರತದ ಕಾನ್ಸುಲ್ ಜನರಲ್ ಸತೀಶ್ ಕುಮಾರ್ ಸಿವನ್ (Satish Kumar Sivan) ಹೇಳಿದ್ಧಾರೆ. ತಾಜ್ ದುಬೈನಲ್ಲಿ ಇಂದು ನಡೆಯುತ್ತಿರುವ ಎರಡನೇ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ (News9 Global Summit) ಮಾತನಾಡುತ್ತಿದ್ದ ಸಿವನ್, ಸಿಇಪಿಎ ಒಪ್ಪಂದವು ಭಾರತ ಮತ್ತು ಯುಎಇ ಸಂಬಂಧಕ್ಕೆ ಹೊಸ ಆಯಾಮ ಕೊಟ್ಟಿದೆ, ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು.
2022ರ ಮೇ 1ರಂದು ಭಾರತ ಮತ್ತು ಯುಎಇ ಮಧ್ಯೆ ಸಿಇಪಿಎ ಒಪ್ಪಂದವಾಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹಯಾನ್ ಅವರು ಎರಡೂ ದೇಶಗಳ ಮಧ್ಯೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಹಾಕಿದರು.
ಇದನ್ನೂ ಓದಿ: ಭಾರತಕ್ಕೆ ಜಾಗತಿಕ ಧ್ವನಿಯಾಗಿದೆ ಟಿವಿ9: ನ್ಯೂಸ್9 ಗ್ಲೋಬಲ್ ಸಮಿಟ್ಗೆ ಚಾಲನೆ ಕೊಟ್ಟ ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್
ಕುತೂಹಲದ ಸಂಗತಿ ಎಂದರೆ, ಇಂಥದ್ದೊಂದು ಒಪ್ಪಂದಕ್ಕೆ ಯುಎಇ ಸಹಿ ಹಾಕಿದ್ದು ಅದೇ ಮೊದಲು. ಯುಎಇ ಜೊತೆ ಸಿಇಪಿಎ ಒಪ್ಪಂದ ಮಾಡಿಕೊಂಡ ಮೊದಲ ದೇಶ ಭಾರತ ಎನಿಸಿದೆ. ಈ ಒಪ್ಪಂದದ ಬಳಿಕ ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ಬಹಳ ಜೋರಾಗಿ ನಡೆದಿದೆ.
‘ಎರಡು ದೇಶಗಳು ಕೇವಲ 88 ದಿನದಲ್ಲಿ ಒಪ್ಪಂದ ಅಂತಿಮಗೊಳಿಸಿ ಸಹಿ ಹಾಕಿವೆ. ಇದಾದ ತತ್ಕ್ಷಣವೇ ಭಾರತದ ಜವಳಿ, ಹರಳು, ಆಹಾರ, ಕೃಷಿ, ವಾಹನ ಮತ್ತು ಔಷಧ ಇತ್ಯಾದಿ ಸೆಕ್ಟರ್ಗಳಿಂದ ಯುಎಇಗೆ ಸಾಕಷ್ಟು ರಫ್ತಾಗತೊಡಗಿತು’ ಎಂದು ದುಬೈನಲ್ಲಿರುವ ಮುಖ್ಯ ರಾಜತಾಂತ್ರಿಕ ಅಧಿಕಾರಿಯಾದ ಸತೀಶ್ ಕುಮಾರ್ ಸಿವನ್ ವಿವರಿಸಿದರು.
‘2030ರೊಳಗೆ ತೈಲವಲ್ಲದ ಸರಕುಗಳ ವ್ಯಾಪಾರವು 100 ಬಿಲಿಯನ್ ಡಾಲರ್ ತಲುಪಬೇಕು ಎನ್ನುವುದು ಸಿಇಪಿಎನಲ್ಲಿ ಇಡಲಾಗಿರುವ ಗುರಿಯಾಗಿದೆ. ಈಗಾಗಲೇ ಎರಡೂ ದೇಶಗಳ ನಡುವಿನ ತೈಲೇತರ ವ್ಯಾಪಾರವು 68 ಬಿಲಿಯನ್ ಡಾಲರ್ ಮುಟ್ಟಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: News9 Global Summit: ಭಾರತ-ಯುಎಇ ಸಂಬಂಧವು ಯಾವುದೇ ಒಪ್ಪಂದಗಳಿಗಿಂತಲೂ ಮಿಗಿಲು: ಸಚಿವ ಹರ್ದೀಪ್ ಸಿಂಗ್ ಪುರಿ
ಯುಎಇ ಪಾಲಿಗೆ ಭಾರತವು ಎರಡನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಎನಿಸಿದೆ. ಅತಿದೊಡ್ಡ ರಫ್ತು ಮಾರುಕಟ್ಟೆ ಎನಿಸಿದೆ. ಇನ್ನೊಂದೆಡೆ, ಯುಎಇ ದೇಶವು ಭಾರತಕ್ಕೆ ಮೂರನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಎನಿಸಿದೆ. ಎರಡನೇ ಅತಿದೊಡ್ಡ ರಫ್ತು ಮಾರುಕಟ್ಟೆ ಎನಿಸಿದೆ ಎಂದು ಸತೀಶ್ ಕುಮಾರ್ ಸಿವನ್ ವಿವರಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




