Growth: ಮುಂದಿನ 3-4 ವರ್ಷದಲ್ಲಿ ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ: ನಿರ್ಮಲಾ ಸೀತಾರಾಮನ್

|

Updated on: Jan 10, 2024 | 6:04 PM

Indian Economy: ಭಾರತದ ಆರ್ಥಿಕತೆ 2027-28ರಲ್ಲಿ 5 ಟ್ರಿಲಿಯನ್ ಡಾಲರ್​ನಷ್ಟಾಗಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎಷ್ಟೇ ಸಂಕುಚಿತವಾಗಿ ಗಣಿಸಿದರೂ 2047ರಷ್ಟರಲ್ಲಿ ಭಾರತದ ಜಿಡಿಪಿ 30 ಟ್ರಿಲಿಯನ್ ಡಾಲರ್ ಆಗಬಹುದು ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾಮಾನ್ ಮಾತನಾಡುತ್ತಿದ್ದರು.

Growth: ಮುಂದಿನ 3-4 ವರ್ಷದಲ್ಲಿ ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ಗಾಂಧಿನಗರ್, ಜನವರಿ 10: ಮುಂದಿನ ಕೆಲ ವರ್ಷಗಳಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆಯ ದೇಶವಾಗುವುದು (Indian Economy) ನಿಶ್ಚಿತ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಕಾರ 2027-28ರಲ್ಲಿ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟುತ್ತದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಅವರು ಹೇಳಿದ್ದಾರೆ. ಹಾಗೆಯೇ, 2047ರೊಳಗೆ 30 ಟ್ರಿಲಿಯನ್ ಆರ್ಥಿಕತೆ ಆಗಿ ಬೆಳೆಯಬಹುದು ಎಂದೂ ಅಂದಾಜು ಮಾಡಿದ್ದಾರೆ.

‘2027-28ರೊಳಗೆ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು. ನಮ್ಮ ಜಿಡಿಪಿ 5 ಟ್ರಿಲಿಯನ್ ಡಾಲರ್ ಮುಟ್ಟುವ ಸಂಭಾವ್ಯತೆ ಇದೆ. ಸಂಕುಚಿತವಾಗಿ ಲೆಕ್ಕ ಹಾಕಿದರೂ 2047ರೊಳಗೆ ನಮ್ಮ ಜಿಡಿಪಿ 30 ಟ್ರಿಲಿಯನ್ ಡಾಲರ್ ಆಗುತ್ತದೆ’ ಎಂದು ಹಣಕಾಸು ಸಚಿವೆ ಹೇಳಿದ್ದಾರೆ.

ಇದನ್ನೂ ಓದಿ: Share Market: ಭಾರತದ ಷೇರು ಮಾರುಕಟ್ಟೆ ಮೇಲೆ ಈ ವರ್ಷ ಪ್ರಭಾವ ಬೀರುವ ಆರು ಘಟನೆಗಳು

ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಇದಕ್ಕೆ ಮುನ್ನ ಮಾತನಾಡಿದ ಮುಕೇಶ್ ಅಂಬಾನಿ, 2047ರೊಳಗೆ ಭಾರತದ ಆರ್ಥಿಕತೆ 35 ಟ್ರಿಲಿಯನ್ ಡಾಲರ್ ಆಗುವುದನ್ನು ತಡೆಯಲು ಈ ಭೂಮಿಯ ಯಾವ ಶಕ್ತಿಯಿಂದಲೂ ಸಾಧ್ಯ ಇಲ್ಲ ಎಂದಿದ್ದರು. ನಿರ್ಮಲಾ ಸೀತಾರಾಮನ್ ಅವರು 2047ರೊಳಗೆ ಕನಿಷ್ಠವೆಂದರೂ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಬಹುದು ಎಂದಿದ್ದಾರೆ.

ಭಾರತದ ಜಿಡಿಪಿ ಸದ್ಯ 3.5 ಟ್ರಿಲಿಯನ್ ಡಾಲರ್ ಆಸುಪಾಸಿನ ಪ್ರಮಾಣದಷ್ಟಿದೆ. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಇದೆ. ಅಮೆರಿಕ ಮತ್ತು ಚೀನಾದ ಜಿಡಿಪಿ ಭಾರತದ್ದಕ್ಕಿಂತ ಹಲವು ಪಟ್ಟು ಹೆಚ್ಚು ಇದೆ. ಆದರೆ, ಜಪಾನ್ ಮತ್ತು ಜರ್ಮನಿಯ ಆರ್ಥಿಕತೆ ಭಾರತದಕ್ಕಿಂತ ತೀರಾ ಹೆಚ್ಚೇನಿಲ್ಲ. ಭಾರತದ ಜಿಡಿಪಿ ದರ ಬಹಳ ವೇಗವಾಗಿ ಹೆಚ್ಚುತ್ತಿದ್ದರೆ, ಅವೆರಡು ದೇಶಗಳ ಆರ್ಥಿಕತೆಯ ವೇಗ ಬಹಳ ಮಂದ ಸ್ಥಿತಿಯಲ್ಲಿದೆ. ಇದೇ ದರ ಮುಂದುವರಿದಲ್ಲಿ ಜಪಾನ್ ಮತ್ತು ಜರ್ಮನಿಯ ಆರ್ಥಿಕತೆಯನ್ನು ಭಾರತ ಹಿಂದಿಕ್ಕಲು ಕೆಲವೇ ವರ್ಷ ಸಾಕಾಗಬಹುದು.

ಇದನ್ನೂ ಓದಿ: World Leaders: ಮೊರಾಕ್ಕೋ, ಟಿಮಾರ್ ಲೆಸ್ಟೇ ಸೇರಿದಂತೆ ವಿವಿಧ ದೇಶಗಳ ನಾಯಕರು ಗುಜರಾತ್​ನಲ್ಲಿ ನಿಂತು ಭಾರತದ ಬಗ್ಗೆ ಹೇಳಿದ್ದಿದು…

2022-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆದರೆ, 2023-24ರ ವರ್ಷದಲ್ಲಿ ಶೇ. 7.3ರಷ್ಟು ಬೆಳವಣಿಗೆ ಆಗುವ ನಿರೀಕ್ಷೆ ಇದೆ. ಮೊದಲೆರಡು ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಆರು ತಿಂಗಳ ಅವಧಿಯಲ್ಲಿ ಜಿಡಿಪಿ ಸರಾಸರಿಯಾಗಿ ಶೇ. 7.5ರಷ್ಟು ಹೆಚ್ಚಾಗಿದೆ. ಕೊನೆಯ ಎರಡು ಕ್ವಾರ್ಟರ್​ನಲ್ಲಿ ಶೇ. 7ರ ಆಸುಪಾಸಿನಲ್ಲಿ ಹೆಚ್ಚಾಗಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ