ನವದೆಹಲಿ, ಏಪ್ರಿಲ್ 17: ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾದರೂ ಬಡ ರಾಷ್ಟ್ರವಾಗಿಯೇ (poor nation) ಉಳಿಯುತ್ತದೆ. ಆದ್ದರಿಂದ ತೀರಾ ಖುಷಿ ಪಡುವಂಥ ವಿಷಯವೇನಲ್ಲ ಎಂದು ಮಾಜಿ ಆರ್ಬಿಐ ಗವರ್ನರ್ ಡಿ ಸುಬ್ಬಾರಾವ್ (D Subbarao) ಅಭಿಪ್ರಾಯಪಟ್ಟಿದ್ದಾರೆ. ತಾವು ಬರೆದ ‘ಜಸ್ಟ್ ಎ ಮರ್ಸನರಿ?: ನೋಟ್ಸ್ ಫ್ರಂ ಮೈ ಲೈಫ್ ಅಂಡ್ ಕರಿಯರ್’ (Just a Mercenary?: Notes from My Life and Career) ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸುಬ್ಬಾರಾವ್, ಒಂದು ದೇಶದ ಆರ್ಥಿಕತೆ ಬೆಳೆದಿದೆ ಎಂದರೆ ಅದು ಮುಂದುವರಿದ ದೇಶ ಎನ್ನಲಾಗದು ಎಂದು ಎಚ್ಚರಿಸಿದ್ದಾರೆ.
ತಮ್ಮ ಪಕ್ಷ ಅಧಿಕಾರಕ್ಕೆ ಮರಳಿದರೆ 2029ಕ್ಕೆ ಮುನ್ನವೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ವೇಳೆ ಸಾಕಷ್ಟು ಬಾರಿ ಹೇಳುತ್ತಿದ್ದಾರೆ. ಮೋದಿ ಅವರಷ್ಟೇ ಅಲ್ಲ ಜಾಗತಿಕ ಏಜೆನ್ಸಿಗಳೂ ಕೂಡ ಭಾರತ ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎನ್ನುತ್ತಿವೆ. ಅಮೆರಿಕ ಮತ್ತು ಚೀನಾದ ನಂತರದ ಸ್ಥಾನ ಭಾರತ ಪಡೆಯಲಿದೆ ಎಂಬುದು ಬಹುತೇಕ ಎಲ್ಲರ ನಿರೀಕ್ಷೆ. ಈ ಬಗ್ಗೆ ನಿನ್ನೆ ಮಂಗಳವಾರ ಮಾಜಿ ಆರ್ಬಿಐ ಗವರ್ನರ್ ಸುಬ್ಬಾರಾವ್ ಪ್ರತಿಕ್ರಿಯಿಸುತ್ತಾ, ಆರ್ಥಿಕ ಬೆಳವಣಿಗೆಗಿಂತ ತಲಾದಾಯ ಹೆಚ್ಚಿಸುವುದು ಮುಖ್ಯ ಎಂಬ ಸಂಗತಿಯ ಮೇಲೆ ಬೆಳಕು ಚೆಲ್ಲಿದ್ದಾರೆ.
‘ನನ್ನ ಅಭಿಪ್ರಾಯ ಕೇಳುವುದಾದರೆ, ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲು ಸಾಧ್ಯ. ಆದರೆ, ಅದರಿಂದ ಖುಷಿ ಪಡಬೇಕಿಲ್ಲ. ಯಾಕೆ ಗೊತ್ತಾ? ನಮ್ಮಲ್ಲಿರುವ 140 ಕೋಟಿ ಜನಸಂಖ್ಯೆಯಿಂದಾಗಿ ದೊಡ್ಡ ಆರ್ಥಿಕತೆಯಾಗಿದ್ದೇವೆ. ಉತ್ಪಾದನೆ ಹೆಚ್ಚಲು ಈ ಜನಸಂಖ್ಯೆ ಕಾರಣವಾಗಿದೆ. ಆದರೆ, ನಾವಿನ್ನೂ ಬಡ ದೇಶವಾಗಿಯೇ ಇದ್ದೇವೆ,’ ಎಂದಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ಬೇಕಾದಂತೆ ಆರ್ಬಿಐ ನಡೆಯಬೇಕಿತ್ತು: ಯುಪಿಐ ಅವಧಿಯ ಪರಿಸ್ಥಿತಿ ತೆರೆದಿಟ್ಟ ಡಿ ಸುಬ್ಬಾರಾವ್
ಭಾರತ ಸದ್ಯ 4 ಟ್ರಿಲಿಯನ್ ಡಾಲರ್ ಸಮೀಪದಷ್ಟು ಆರ್ಥಿಕತೆ ಹೊಂದಿದೆ. ವಿಶ್ವದಲ್ಲಿ ಐದನೆ ಸ್ಥಾನದಲ್ಲಿದೆ. ಆದರೆ, ವಾರ್ಷಿಕ ಸರಾಸರಿ ತಲಾದಾಯ 2,600 ಡಾಲರ್ ಇದೆ. ತಲಾದಾಯದಲ್ಲಿ ಭಾರತ ಜಾಗತಿಕವಾಗಿ 139ನೇ ಸ್ಥಾನದಲ್ಲಿದೆ. ಈ ವಿಚಾರದ ಬಗ್ಗೆ ಸುಬ್ಬಾರಾವ್ ಬೆಳಕು ಚೆಲ್ಲಿದ್ದಾರೆ.
2047ರಷ್ಟರಲ್ಲಿ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡುವ ಪ್ರಧಾನಿಗಳ ಸಂಕಲ್ಪವನ್ನು ಉಲ್ಲೇಖಿಸಿದ ಮಾಜಿ ಆರ್ಬಿಐ ಗವರ್ನರ್ ಸುಬ್ಬಾರಾವ್, ಆ ನಿಟ್ಟಿನಲ್ಲಿ ಅಳವಡಿಸಿಕೊಳ್ಳಬಹುದಾದ ನಾಲ್ಕು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಪ್ರಸಕ್ತ ಹಣಕಾಸು ವರ್ಷ ಭಾರತದ ಆರ್ಥಿಕತೆ ಶೇ. 6.8ರಷ್ಟು ಬೆಳೆಯುವ ಸಾಧ್ಯತೆ; ಅಂದಾಜು ಹೆಚ್ಚಿಸಿದ ಐಎಂಎಫ್
‘ಹೇಗೆ ಮುನ್ನಡೆಯಬೇಕು ಎಂಬುದು ಬಹಳ ಸ್ಪಷ್ಟವಿದೆ. ಬೆಳವಣಿಗೆ ದರವನ್ನು ಹೆಚ್ಚಿಸಬೇಕು. ಅದರ ಫಲ ಎಲ್ಲೆಡೆ ಹಂಚಿಹೋಗುವುದನ್ನು ಖಾತ್ರಿಪಡಿಸಬೇಕು,’ ಎಂದು ಡಿ ಸುಬ್ಬಾರಾವ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ