
ನವದೆಹಲಿ, ಸೆಪ್ಟೆಂಬರ್ 14: ಭಾರತದ ವ್ಯಾಪಾರ ನೀತಿಗಳ ಮೇಲೆ ಅಮೆರಿಕನ್ನರ ದಾಳಿ ನಿಲ್ಲುತ್ತಿಲ್ಲ. ಜಾಗತಿಕವಾಗಿ ವ್ಯಾಪಾರ ವಹಿವಾಟು ನಡೆಸಿ ಲಾಭ ಮಾಡುವ ಭಾರತ ತನ್ನ ಕೃಷಿ ಕ್ಷೇತ್ರವನ್ನು ಸ್ವಲ್ಪವಾದರೂ ಮುಕ್ತಗೊಳಿಸದೆ ಮುಚ್ಚಿಟ್ಟುಕೊಳ್ಳುತ್ತಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವಾರ್ಡ್ ಲುಟ್ನಿಕ್ (Howard Lutnick) ಟೀಕಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಭಾರತದ ವ್ಯಾಪಾರ ನೀತಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಭಾರತ 140 ಕೋಟಿ ಜನಸಂಖ್ಯೆಯ ದೇಶ ಎಂದು ಬೀಗುತ್ತದೆ. ಆದರೆ ನಮ್ಮಿಂದ ಅವರು ಒಂದು ಬುಟ್ಟಿ ಜೋಳ (Corn bushel) ಕೂಡ ಯಾಕೆ ಖರೀದಿಸುವುದಿಲ್ಲ? ಅದು ಯಾರಿಗಾದರೂ ಸರಿ ಕಾಣುತ್ತಾ? ಅವರು ಎಲ್ಲವನ್ನೂ ನಮಗೆ ಮಾರುತ್ತಾರೆ. ಆದರೆ ನಮ್ಮ ಜೋಳವನ್ನು ಮಾತ್ರ ಕೊಳ್ಳೋದಿಲ್ಲ. ಎಲ್ಲದಕ್ಕೂ ಸುಂಕ ಹಾಕುತ್ತಾರೆ’ ಎಂದು ಹೋವಾರ್ಡ್ ಲುಟ್ನಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಥನಾಲ್ ಬಂದ ನಂತರ ಸಕ್ಕರೆ ಕಾರ್ಖಾನೆಗಳಿಗೆ ಬಂತು ಜೀವ: ನಿತಿನ್ ಗಡ್ಕರಿ
‘ನಿಮ್ಮ ಸುಂಕವನ್ನು ಕಡಿಮೆ ಮಾಡಿ. ನಿಮ್ಮನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆಯೋ, ಅದೇ ರೀತಿ ನಮ್ಮನ್ನು ನಡೆಸಿಕೊಳ್ಳಿ ಎಂದು ಅಧ್ಯಕ್ಷರು (ಡೊನಾಲ್ಡ್ ಟ್ರಂಪ್) ಹೇಳುತ್ತಿದ್ದಾರೆ. ಹಲವು ವರ್ಷಗಳಿಂದ ಆದ ತಪ್ಪನ್ನು ನಾವು ಸರಿಪಡಿಸಬೇಕಿದೆ. ಇದು ಸರಿಯಾಗುವವರೆಗೂ ಅವರ ಮೇಲೆ ಟ್ಯಾರಿಫ್ ಹಾಕುತ್ತೇವೆ. ಇದು ಅಧ್ಯಕ್ಷರ ಉದ್ದೇಶ. ಇದನ್ನು ನೀವು ಸ್ವೀಕರಿಸಬೇಕು. ಇಲ್ಲದಿದ್ದರೆ ವಿಶ್ವದ ಅತಿದೊಡ್ಡ ಅನುಭೋಗ ದೇಶದೊಂದಿಗೆ ಬ್ಯುಸಿನೆಸ್ ಮಾಡುವುದು ನಿಮಗೆ ಕಷ್ಟವಾಗುತ್ತದೆ’ ಎಂದು ಲುಟ್ನಿಕ್ ನಿಷ್ಠುರವಾಗಿ ಹೇಳಿದ್ದಾರೆ.
ಜಾಗತಿಕವಾಗಿ ಭಾರತದ ಪ್ರಭಾವ ಹೆಚ್ಚುತ್ತಿದೆ. ಒಂದೆಡೆ ಭಾರತವು ತಾನು ಮುಕ್ತ ಮಾರುಕಟ್ಟೆಯ ಪ್ರಜಾತಂತ್ರ ದೇಶ ಎಂದು ಬಿಂಬಿಸಿಕೊಳ್ಳುತ್ತದೆ. ಇನ್ನೊಂದೆಡೆ ಕೃಷಿ ಕ್ಷೇತ್ರವನ್ನು ರಕ್ಷಿಸುವ ನೀತಿ ಅನುಸರಿಸುತ್ತಾ ಅಮೆರಿಕದ ಹತಾಶೆಗೆ ಕಾರಣವಾಗಿದೆ. ತಮ್ಮ ಆರ್ಥಿಕತೆಯನ್ನು ಮುಚ್ಚಿಟ್ಟುಕೊಂಡು ನಮಗೆ ಮಾರುತ್ತಾರೆ. ನಮ್ಮ ಮುಕ್ತತೆಯನ್ನು ಉಪಯೋಗಿಸಿಕೊಳ್ಳುತ್ತಾರೆ ಎಂದು ಎಕ್ಸಿಯಾಸ್ ಸಂದರ್ಶನದ ವೇಳೆ ಅಮೆರಿಕದ ವಾಣಿಜ್ಯ ಕಾರ್ಯದರ್ಶಿಗಳು ಭಾರತದ ಮೇಲೆ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಭಾರತ ಹೇಗೆ ಸಾಗಬೇಕು? ಮಲೇಷ್ಯಾವಾ, ಕೊರಿಯಾವಾ? ಭಾರತದ 16 ವರ್ಷದ ಜೀನಿಯಸ್ ಬಾಲಕ ಹೇಳೋದೇನು ಗೊತ್ತಾ?
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಇನ್ನೂ ಅಂತಿಮಗೊಂಡಿಲ್ಲ. ಮೂಲಗಳ ಪ್ರಕಾರ, ಭಾರತದ ಕೃಷಿ ಕ್ಷೇತ್ರಕ್ಕೆ ಮುಕ್ತ ಪ್ರವೇಶದ ಅವಕಾಶವನ್ನು ನೀಡಬೇಕೆಂದು ಅಮೆರಿಕ ಪಟ್ಟು ಹಿಡಿದಿದೆ. ಇದಕ್ಕೆ ಭಾರತ ಒಪ್ಪುತ್ತಿಲ್ಲ. ಹೀಗಾಗಿ, ವ್ಯಾಪಾರ ಒಪ್ಪಂದ ಏರ್ಪಟ್ಟಿಲ್ಲ ಎನ್ನಲಾಗಿದೆ. ಒಪ್ಪಂದ ಆಗದ್ದಕ್ಕೆ ಅಮೆರಿಕವು ಭಾರತದ ಮೇಲೆ ಶೇ. 25 ಟ್ಯಾರಿಫ್ ಹಾಕುತ್ತಿದೆ. ರಷ್ಯನ್ ತೈಲ ಖರೀದಿ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಹೆಚ್ಚುವರಿ ಶೇ. 25 ಟ್ಯಾರಿಫ್ ಹಾಕಿದೆ. ಒಟ್ಟು ಶೇ. 50ರಷ್ಟು ಟ್ಯಾರಿಫ್ ಅನ್ನು ಅಮೆರಿಕವು ಭಾರತದ ಮೇಲೆ ಹಾಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ