
ನವದೆಹಲಿ, ಮೇ 9: ಯೆಸ್ ಬ್ಯಾಂಕ್ನಲ್ಲಿನ ತಮ್ಮ ಪಾಲಿನ ದೊಡ್ಡ ಮೊತ್ತದ ಷೇರುಗಳನ್ನು ಭಾರತೀಯ ಬ್ಯಾಂಕುಗಳು ಜಪಾನ್ನ ಸುಮಿಟೋಮೊ ಮಿಟ್ಸುಯ್ ಬ್ಯಾಂಕಿಂಗ್ ಕಾರ್ಪೊರೇಶನ್ಗೆ (SMBC- Sumitomo Mitsui Banking Corporation) ಮಾರುವ ಸಾಧ್ಯತೆ. ಯೆಸ್ ಬ್ಯಾಂಕ್ನಲ್ಲಿ ಶೇ. 23.97 ರಷ್ಟು ಷೇರುಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದರಲ್ಲಿ ಶೇ. 13.19ರಷ್ಟನ್ನು ಜಪಾನ್ ಮೂಲದ ಬ್ಯಾಂಕಿಗೆ ಮಾರಲು ನಿರ್ಧರಿಸಿದೆ. ಒಟ್ಟು 413.44 ಕೋಟಿಯಷ್ಟು ಷೇರುಗಳನ್ನು, ಪ್ರತೀ ಷೇರಿಗೆ 21.50 ರೂ ಬೆಲೆಯಂತೆ ಒಟ್ಟು 8,889 ಕೋಟಿ ರೂಗೆ ಎಸ್ಬಿಐ ಮಾರಬಹುದು. ಈ ವಿಚಾರವನ್ನು ಎಸ್ಬಿಐ ಇವತ್ತು ಶುಕ್ರವಾರ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದೆ.
ಎಸ್ಬಿಐ ಸೇರಿದಂತೆ ಒಟ್ಟು ಎಂಟು ಬ್ಯಾಂಕುಗಳು ಯೆಸ್ ಬ್ಯಾಂಕ್ನಲ್ಲಿನ ಶೇ. 20ರಷ್ಟು ಷೇರುಗಳನ್ನು ಜಪಾನ್ನ ಈ ಎಸ್ಎಂಬಿಸಿ ಬ್ಯಾಂಕಿಗೆ ನೀಡುವ ನಿರೀಕ್ಷೆ ಇದೆ. ಎಚ್ಡಿಎಫ್ಸಿ ಬ್ಯಾಂಕು, ಕೋಟಕ್ ಮಹೀಂದ್ರ ಬ್ಯಾಂಕು, ಐಸಿಐಸಿಐ, ಎಕ್ಸಿಸ್, ಐಡಿಎಫ್ಸಿ ಫಸ್ಟ್, ಫೆಡರಲ್ ಬ್ಯಾಂಕ್, ಬಂಧನ್ ಬ್ಯಾಂಕ್ಗಳು ಶೇ. 6.81, ಅಂದರೆ, ಸುಮಾರು 213.68 ಕೋಟಿ ಯೆಸ್ ಬ್ಯಾಂಕ್ ಷೇರುಗಳನ್ನು ಮಾರಬಹುದು ಎನ್ನಲಾಗುತ್ತಿದೆ. ಎಸ್ಬಿಐದೂ ಸೇರಿಸಿದರೆ ಒಟ್ಟು ಶೇ. 20ರಷ್ಟು ಷೇರುಗಳನ್ನು ಎಸ್ಎಂಬಿಸಿ 13,483 ಕೋಟಿ ರೂಗೆ ಪಡೆಯಲಿದೆ.
ಇದನ್ನೂ ಓದಿ: ಮೂರು ದಿನ ಎಟಿಎಂ, ಆನ್ಲೈನ್ ಟ್ರಾನ್ಸಾಕ್ಷನ್ಸ್ ಬಂದ್ ಆಗುತ್ತವಾ? ಸರ್ಕಾರ ನೀಡಿದ ಸ್ಪಷ್ಟನೆ
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಯೆಸ್ ಬ್ಯಾಂಕ್ಗೆ ಆರ್ಬಿಐ ಸೂಚನೆ ಮೇರೆಗೆ ಭಾರತದ ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೆರವಿನ ಹಸ್ತ ಚಾಚಿದವು. 2020ರಲ್ಲಿ ಈ ಸಂಸ್ಥೆಗಳು 10,000 ಕೋಟಿ ರೂ ಹೂಡಿಕೆ ಒದಗಿಸಿ ಯೆಸ್ ಬ್ಯಾಂಕ್ನನ ಷೇರುಗಳನ್ನು ಖರೀದಿಸಿದ್ದುವು. ಎಸ್ಬಿಐ ಬ್ಯಾಂಕ್ ಶೇ. 23.97ರಷ್ಟು ಷೇರು ಪಡೆದಿದೆ. ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕು, ಎಕ್ಸಿಸ್ ಬ್ಯಾಂಕ್ ಮತ್ತು ಎಲ್ಐಸಿ ಒಟ್ಟು ಸೇರಿ 11.34 ಪ್ರತಿಶತದಷ್ಟು ಷೇರುಗಳನ್ನು ಹೊಂದಿವೆ.
ಈಗ ಎಸ್ಬಿಐ ಹಾಗೂ ಇತರ ಬ್ಯಾಂಕುಗಳು ನಿರೀಕ್ಷೆಯಂತೆ ಷೇರು ಮಾರಿದರೆ ಎಸ್ಎಂಬಿಸಿ ಬ್ಯಾಂಕ್ಗೆ ಯೆಸ್ ಬ್ಯಾಂಕ್ನ ಶೇ. 20ರಷ್ಟು ಷೇರುಪಾಲು ಸಿಗಲಿದೆ. ಯೆಸ್ ಬ್ಯಾಂಕ್ ಅನ್ನು ಪೂರ್ಣವಾಗಿ ಖರೀದಿಸಲು ಎಸ್ಎಂಬಿಸಿ ಮುಂದೆ ಎರಡು ಆಯ್ಕೆಗಳಿವೆ. ಷೇರು ಬದಲಾವಣೆ ಮೂಲಕ ವಿಲೀನ ಮಾಡುವುದು ಒಂದು ಮಾರ್ಗ. ಹಾಗೆಯೇ, ಶೇ. 26ರಷ್ಟು ಷೇರುಗಳನ್ನು ಖರೀದಿಸಿ, ನಂತರ ಓಪನ್ ಆಫರ್ ಮೂಲಕ ಷೇರುಪಾಲನ್ನು ಶೇ. 51ಕ್ಕೆ ಹೆಚ್ಚಿಸಿಕೊಳ್ಳಬಹುದು.
ಇದನ್ನೂ ಓದಿ: ನೆಲ ಒರೆಸುವ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಉನ್ನತ ಪದವಿಗೆ ಏರಿದ ಮಹಿಳೆಯ ಕಥೆ; ಇದು ಪ್ರತೀಕ್ಷಾ ಫಲ
ಜಪಾನ್ ಮೂಲದ ಎಸ್ಎಂಬಿಸಿ ಬ್ಯಾಂಕು ಸುಮಿಟೊಮೊ ಮಿಟ್ಸುಯ್ ಫೈನಾನ್ಷಿಯಲ್ ಗ್ರೂಪ್ಗೆ ಸೇರಿದ್ದು, ಅದರ ಮಾರುಕಟ್ಟೆ ಬಂಡವಾಳ 7.6 ಲಕ್ಷ ಕೋಟಿ ರೂ ಇದೆ. 39 ದೇಶಗಳಲ್ಲಿ ಇದರ ಬ್ಯಾಂಕಿಂಗ್ ಬ್ಯುಸಿನೆಸ್ ಹರಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ