ವಡೋದರಾ, ಅಕ್ಟೋಬರ್ 28: ಕಳೆದ ಒಂದು ದಶಕದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳ ಪರಿಣಾಮವಾಗಿ ಭಾರತದಲ್ಲಿ ರಕ್ಷಣಾ ಕ್ಷೇತ್ರ ಹುಲುಸಾಗಿ ಬೆಳೆಯುತ್ತಿದೆ. ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ಹೆಚ್ಚುತ್ತಿದೆ. ಕಳೆದ ಐದಾರು ವರ್ಷದಲ್ಲಿ 1,000 ಹೊಸ ಸ್ಟಾರ್ಟಪ್ಗಳು ಆರಂಭವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ನ ವಡೋದರಾ ನಗರದಲ್ಲಿ ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ, ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಪ್ರೈವೇಟ್ ಸೆಕ್ಟರ್ನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ್ದೇವೆ. ಖಾಸಗಿ ವಲಯ ಹೆಚ್ಚು ಕ್ಷಮತೆ ಹೊಂದಿರುವಂತೆ ನೋಡಿಕೊಳ್ಳಲಾಗಿದೆ. ಆರ್ಡ್ನೆನ್ಸ್ ಫ್ಯಾಕ್ಟರಿಗಳನ್ನು (ದೇಶೀಯವಾಗಿ ಮಿಲಿಟರಿ ಉತ್ಪನ್ನಗಳನ್ನು ತಯಾರಿಸುವ ಘಟಕ) ಏಳು ದೊಡ್ಡ ಕಂಪನಿಗಳಾಗಿ ರೂಪಿಸಲಾಗಿದೆ. ಡಿಆರ್ಡಿಎ ಮತ್ತು ಎಚ್ಎಎಲ್ಗೆ ಹೆಚ್ಚು ಶಕ್ತಿ ತುಂಬಿದ್ದೇವೆ. ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಎರಡು ದೊಡ್ಡ ಡಿಫೆನ್ಸ್ ಕಾರಿಡಾರ್ಗಳನ್ನು ಸ್ಥಾಪಿಸಿದ್ದೇವೆ,’ ಎಂದು ಪ್ರಧಾನಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಡೋದರಾದಲ್ಲಿ ಟಾಟಾ ಗ್ರೂಪ್ನಿಂದ ಮಿಲಿಟರಿ ವಿಮಾನದ ಫ್ಯಾಕ್ಟರಿ; ಸ್ಪೇನ್ ಪ್ರಧಾನಿ ಮತ್ತು ನರೇಂದ್ರ ಮೋದಿಯಿಂದ ಉದ್ಘಾಟನೆ
ಕಳೆದ ಹತ್ತು ವರ್ಷದಲ್ಲಿ ಭಾರತದ ರಕ್ಷಣಾ ಉತ್ಪನ್ನಗಳ ರಫ್ತು 30 ಪಟ್ಟು ಹೆಚ್ಚಿದೆ. ನೂರಕ್ಕೂ ಹೆಚ್ಚು ದೇಶಗಳಿಗೆ ಇವತ್ತು ರಕ್ಷಣಾ ಉಪಕರಣಗಳನ್ನು ಸರಬರಾಜು ಮಾಡುತ್ತಿದ್ದೇವೆ. ದೇಶದಲ್ಲಿ 18,000ಕ್ಕೂ ಹೆಚ್ಚು ವಿಮಾನದ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ. ಸಣ್ಣ ಮತ್ತು ಕಿರು ಉದ್ಯಮಗಳು ಈ ತಯಾರಿಕಾ ಕಾರ್ಯವನ್ನು ಮುನ್ನಡೆಸಲಿವೆ ಎಂದು ಮೋದಿ ಹೇಳಿದ್ಧಾರೆ.
Marching towards #AatmanirbhartaInDefence!
Over the last decade, defence production has skyrocketed from ₹43,746 Cr to ₹1,27,265 Cr!
With 21% from the private sector, India’s journey towards self-reliance is stronger than ever.#MakeInIndia@makeinindia pic.twitter.com/xuE8xAgsDl
— Ministry of Information and Broadcasting (@MIB_India) October 28, 2024
ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ನಲ್ಲಿ ಏರ್ಬಸ್ನ ಸಿ-295 ಯುದ್ಧವಿಮಾನದ ತಯಾರಿಕೆ ನಡೆಯಲಿದೆ. ಏರ್ಬಸ್ ಸಹಯೋಗದಲ್ಲಿ ಟಾಟಾ ಸಂಸ್ಥೆ 40 ಮಿಲಿಟರಿ ವಿಮಾನಗಳನ್ನು ಇಲ್ಲಿ ಮ್ಯಾನುಫ್ಯಾಕ್ಚರ್ ಮಾಡಲಿದೆ. ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ನರೇಂದ್ರ ಮೋದಿ ಜಂಟಿಯಾಗಿ ಈ ಘಟಕಕ್ಕೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: Income Disparity: ಭಾರತದಲ್ಲಿ ಆದಾಯ ಅಸಮಾನತೆ ಅಂತರದಲ್ಲಿ ಗಣನೀಯ ಇಳಿಕೆ: ಎಸ್ಬಿಐ ಅಧ್ಯಯನ ವರದಿ
ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ರಕ್ಷಣಾ ಉತ್ಪಾದನೆ 43,746 ಕೋಟಿ ರೂನಿಂದ 1,27,265 ಕೋಟಿ ರೂಗೆ ಹೆಚ್ಚಿದೆ. ಖಾಸಗಿ ವಲಯದ ಪಾಲು ಇದರಲ್ಲಿ ಶೇ. 21ರಷ್ಟಿದೆ. 16,000ಕ್ಕೂ ಹೆಚ್ಚು ಎಂಎಸ್ಎಂಇಗಳು ಡಿಫೆನ್ಸ್ ಇಕೋಸಿಸ್ಟಂನ ಭಾಗವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Mon, 28 October 24