ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

Anthropic's CTO Rahul Patil, the brain behind new Claude AI version: ಕಳೆದ ವಾರ ಭಾರತದ ಐಟಿ ಸರ್ವಿಸ್ ಕಂಪನಿಗಳ ಷೇರುಬೆಲೆ ದಿಕ್ಕೆಟ್ಟಂತೆ ಕುಸಿತ ಕಂಡಿತ್ತು. ಹೂಡಿಕೆದಾರರು ಭಯಗೊಂಡು ಷೇರು ಮಾರತೊಡಗಿದ್ದರು. ಎರಡು ಬೆಳವಣಿಗೆಗಳು ಈ ಕುಸಿತಕ್ಕೆ ಕಾರಣವಾಗಿದ್ದವು. ಆಂಥ್ರೋಪಿಕ್ ಮತ್ತು ಪಲಂಟಿರ್ ಕಂಪನಿಗಳ ಹೊಸ ಎಐ ಸಾಧನಗಳು ಐಟಿ ಸರ್ವಿಸ್ ಉದ್ಯಮದ ಬ್ಯುಸಿನೆಸ್ ತಿಂದು ಹಾಕುವ ಕುರುಹು ತೋರಿರುವುದು ಇದಕ್ಕೆ ಕಾರಣ.

ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು
ಷೇರುಪೇಟೆ

Updated on: Feb 09, 2026 | 8:48 PM

ಬೆಂಗಳೂರು, ಫೆಬ್ರುವರಿ 9: ಭಾರತದ ಷೇರು ಮಾರುಕಟ್ಟೆಯಲ್ಲಿ (Stock Market) ಐಟಿ ಸೆಕ್ಟರ್​ನ ವಿವಿಧ ಸ್ಟಾಕ್​ಗಳು ಕಳೆದ ಕೆಲ ದಿನಗಳಿಂದ ಬಹಳ ಹಿನ್ನಡೆ ಕಾಣುತ್ತಿವೆ. ನಿಫ್ಟಿ ಐಟಿ ಇಂಡೆಕ್ಸ್ ಇವತ್ತು ಸೋಮವಾರ ಪಾಸಿಟಿವ್ ಆಗಿದ್ದರೂ ಕಳೆದ ವಾರದಿಂದ ಶೇ. 7ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ. ಐಟಿ ಸ್ಟಾಕ್​ಗಳ ಮೇಲೆ ಹೂಡಿಕೆ ಮಾಡಿದ್ದವರಿಗೆ ಬರೋಬ್ಬರಿ ಎರಡೂವರೆ ಟ್ರಿಲಿಯನ್ ರುಪಾಯಿಗಳಷ್ಟು ನಷ್ಟ ಆಗಿದೆ.

ಐಟಿ ಸ್ಟಾಕ್​ಗಳು ನಿರ್ದಿಷ್ಟವಾಗಿ ಕುಸಿಯಲು ಕಾರಣಗಳಿಲ್ಲದಿಲ್ಲ. ಎಐ ಟೆಕ್ನಾಲಜಿಯೇ ಈಗ ಭಾರತದ ಐಟಿ ಸೇವೆಗಳಿಗೆ ಮುಳುವಾಗುವಂತಿದೆ. ಇತ್ತೀಚೆಗೆ ಆದ ಎರಡು ಬೆಳವಣಿಗೆಗಳು ಐಟಿ ಸೆಕ್ಟರ್ ಬಗ್ಗೆ ಹೂಡಿಕೆದಾರರು ತಲೆ ಕೆರೆದುಕೊಳ್ಳುವಂತೆ ಮಾಡಿವೆ. ಒಂದು, ಆಂಥ್ರೋಪಿಕ್ ಎನ್ನುವ ಕಂಪನಿಯು ಹೊಸ ಆಟೊಮೇಶನ್ ಟೂಲ್​ಗಳನ್ನು ರೂಪಿಸಿದೆ. ಮತ್ತೊಂದು, ಪಲಂಟಿರ್ ಕಂಪನಿಯು ಎಸ್​ಎಪಿ ಅಳವಡಿಕೆಯನ್ನು ಬಹಳ ತ್ವರಿತವಾಗಿ ಮಾಡಬಲ್ಲ ಎಐ ಪ್ಲಾಟ್​ಫಾರ್ಮ್ ಅನ್ನು ಬಿಡುಗಡೆ ಮಾಡಿದೆ.

ಈ ಎರಡು ಬೆಳವಣಿಗೆಗಳು ಐಟಿ ಸರ್ವಿಸ್ ಉದ್ಯಮವನ್ನೇ ತಲ್ಲಣಗೊಳಿಸಿವೆ. ಹೆಚ್ಚಿನ ಐಟಿ ಪ್ರಾಜೆಕ್ಟ್​ಗಳಿಗೆ ಸಂಬಂಧ ಪಟ್ಟ ಬೆಳವಣಿಗೆಯೇ ಇದು. ಹೀಗಾಗಿ, ಐಟಿ ಸೆಕ್ಟರ್​ಗೆ ಷೇರು ಮಾರುಕಟ್ಟೆಯಲ್ಲಿ ಹಿನ್ನಡೆಯಾಗತೊಡಗಿದೆ.

ಇದನ್ನೂ ಓದಿ: ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ

ಆಂಥ್ರೋಪಿಕ್ ಹಿಂದಿನ ರೂವಾರಿ ಬೆಂಗಳೂರು ವ್ಯಕ್ತಿ ರಾಹುಲ್ ಪಾಟೀಲ್

ಎಐ ಸ್ಟಾರ್ಟಪ್ ಆದ ಆಂಥ್ರೋಪಿಕ್ ಇದೀಗ ಹೊಸ ಕ್ಲಾಡ್ ಎಐ ಆವೃತ್ತಿ ಬಿಡುಗಡೆ ಮಾಡಿದೆ. ಎಐ ಏಜೆಮಂಟ್ ಆದ ಇದು ಬೆಕ್ಕಸ ಬೆರಗಾಗುವಂತಹ ಕೆಲಸಗಳನ್ನು ನಿರ್ವಹಿಸಬಲ್ಲುದು. ಯಾವುದೇ ಉದ್ಯಮವಾದರೂ, ಲೀಗಲ್ ಕಾಂಟ್ರಾಕ್ಟ್ ಅನ್ನು ಪರಾಮರ್ಶಿಸುವುದರಿಂದ ಹಿಡಿದು ಕೋಡ್ ಮ್ಯಾನೇಜ್ ಮಾಡುವುದು, ಡಾಕ್ಯುಮೆಂಟ್ ನಿರ್ವಹಿಸುವುವರೆಗೂ ಮನುಷ್ಯರ ನೆರವಿಲ್ಲದೇ ಪೂರ್ಣ ವರ್ಕ್​ಫ್ಲೋಗಳನ್ನು ನಿರ್ವಹಿಸಬಲ್ಲುದು.

ಆಂಥ್ರೋಪಿಕ್​ನ ಈ ಅದ್ಬುತ ಎಐ ಕೋವರ್ಕರ್ ಅಥವಾ ಎಐ ಏಜೆಂಟ್​ನ ಅಭಿವೃದ್ಧಿ ಹಿಂದೆ ರಾಹುಲ್ ಪಾಟೀಲ್ ಇದ್ದಾರೆ. 2025ರ ಅಕ್ಟೋಬರ್ ತಿಂಗಳಲ್ಲಷ್ಟೇ ರಾಹುಲ್ ಪಾಟೀಲ್ ಅವರು ಆಂಥ್ರೋಪಿಕ್​ಗೆ ಸಿಟಿಓ ಆಗಿ ನೇಮಕವಾಗಿದ್ದರು. ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ ಪಾಟಲ್ ಅವರು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಮೈಕ್ರೋಸಾಫ್ಟ್, ಓರೇಕಲ್, ಅಮೇಜಾನ್ ಕೈನೆಸಿಸ್, ಸ್ಟ್ರೈಪ್ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಂತರ ಆಂಥ್ರೋಪಿಕ್​ಗೆ ಸಿಟಿಒ ಆಗಿ ಸೇರಿದ್ದಾರೆ. ಬಹಳ ಕ್ಷಿಪ್ರಗತಿಯಲ್ಲಿ ಕ್ಲಾಡ್ ಎಐನ ಹೊಸ ಆವೃತ್ತಿಯನ್ನು ಅಭಿವೃದ್ಧಿಪಡಿಸಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ, ಅನೇಕ ಐಟಿ ಸರ್ವಿಸ್ ಕಂಪನಿಗಳ ಬ್ಯುಸಿನೆಸ್​ಗೆ ಖೋತಾ ಆಗುವಂತೆ ಮಾಡಿದ್​ದಾರೆ.

ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಪಲಂಟಿರ್​ನ ಎಐ ಪ್ರಾಡಕ್ಟ್ ಬಲು ಉಪಯುಕ್ತ

ಪಲಂಟಿರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಎಐ ಟೂಲ್ ಉದ್ಯಮ ವಲಯದ ಗಮನ ಸೆಳೆದಿದೆ. ಕಂಪನಿಗಳಿಗೆ ಎಸ್​ಎಪಿ ಮೈಗ್ರೇಶನ್ ಮಾಡಲು ಸಾಮಾನ್ಯವಾಗಿ ಕೆಲ ವರ್ಷಗಳೇ ಆಗುತ್ತವೆ. ಆದರೆ, ಪಲಂಟಿರ್​ನ ಎಐ ಟೂಲ್​ನಿಂದ ಎಸ್​ಎಪಿ ಮೈಗ್ರೇಶನ್ ಅನ್ನು ಕೆಲವೇ ವಾರಗಳಲ್ಲಿ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ