ನವದೆಹಲಿ, ನವೆಂಬರ್ 8: ಜಾಗತಿಕ ಟೆಕ್ನಾಲಜಿ ಕಂಪನಿಗಳಲ್ಲಿ ಸರ್ವೋಚ್ಚ ಸ್ಥಾನಗಳನ್ನು ಅಲಂಕರಿಸುತ್ತಿರುವ ಭಾರತೀಯರ ಬಳಗ ಬೆಳೆಯುತ್ತಿದೆ. ಸ್ವೀಡನ್ ಮೂಲದ ಟ್ರೂಕಾಲರ್ ಸಂಸ್ಥೆಗೆ ರಿಷಿತ್ ಜುಂಜುನವಾಲ (Rishit Jhunjhunwala) ಸಿಇಒ ಆಗಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದಲೂ ಟ್ರೂಕಾಲರ್ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ರಿಷಿತ್ ಜುಂಜುನವಾಲ ಜನವರಿ 9ರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಸದ್ಯ ಅವರು ಟ್ರೂಕಾಲರ್ನಲ್ಲಿ ಚೀಫ್ ಪ್ರಾಡಕ್ಟ್ ಆಫೀಸರ್ ಮತ್ತು ಎಂಡಿಯಾಗಿದ್ದಾರೆ.
ಟ್ರೂಕಾಲರ್ನ ಈಗಿನ ಸಿಇಒ ಅಲನ್ ಮಮೇದಿ (Alan Mamedi) ಜನವರಿ ಮೊದಲ ವಾರದವರೆಗೂ ಕಾರ್ಯ ನಿರ್ವಹಿಸಲಿದ್ದು ಅದಾದ ಬಳಿಕ ಕಂಪನಿ ಮಂಡಳಿಯ ಕರ್ತವ್ಯಕ್ಕೆ ವರ್ಗಾವಣೆಗೊಳ್ಳಲಿದ್ದಾರೆ. ಟ್ರೂಕಾಲರ್ನ ಸಹ-ಸಂಸ್ಥಾಪಕರಾದ ಮತ್ತು ಈಗ ಚೀಫ್ ಸ್ಟ್ರಾಟಿಜಿ ಆಫೀಸರ್ ಆಗಿರುವ ನಾಮಿ ಜಾರಿಂಘಲಂ (Nami Zarringhalam) ಅವರೂ ಕೂಡ ತಮ್ಮ ಸ್ಥಾನದಿಂದ ವಿಮುಕ್ತರಾಗುತ್ತಿದ್ದಾರೆ.
ಇದನ್ನೂ ಓದಿ: ಉದ್ಯಮ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರೋದನ್ನು ವಿರೋಧಿಸುತ್ತೇನೆ: ರಾಹುಲ್ ಗಾಂಧಿ ಸ್ಪಷ್ಟನೆ
ಅಲನ್ ಮಾಮೇದಿ ಮತ್ತು ನಾಮಿ ಝಾರಿಂಗಲಂ ಅವರಿಬ್ಬರೂ ಜನವರಿ 9ರ ಬಳಿಕ 2025ರ ಜೂನ್ 30ರವರೆಗೆ ಕಂಪನಿಯ ಅಡ್ವೈಸರ್ಗಳಾಗಿ ಮುಂದುವರಿಯಲಿದ್ದಾರೆ ಎಂದು ಟ್ರೂಕಾಲರ್ ಸಂಸ್ಥೆ ಹೇಳಿಕೆ ನೀಡಿದೆ.
1977ರಲ್ಲಿ ಜನಿಸಿದ 47 ವರ್ಷದ ರಿಷಿತ್ ಜುಂಜುನವಾಲ ಬೆಂಗಳೂರು ಹುಡುಗ. ಓದಿದ್ದೆಲ್ಲಾ ಸಿಲಿಕಾನ್ ಸಿಟಿಯಲ್ಲೇ. ಮಲ್ಯ ಅದಿತಿ ಶಾಲೆಯಲ್ಲಿ ಓದಿದ್ದಾರೆ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಡಿಗ್ರಿ ಪಡೆದಿದ್ದಾರೆ.
ರಿಷಿತ್ ಟ್ರೂಕಾಲರ್ ಸೇರುವ ಮುನ್ನ ಎರಡು ಸ್ಟಾರ್ಟಪ್ಗಳನ್ನು ಸ್ಥಾಪಿಸಿದ್ದಾರೆ. 2000ದ ವರ್ಷದಲ್ಲೇ ಅವರು ವೆರಿಟಿ ಟೆಕ್ನಾಲಜೀಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅಲ್ಲಿ ಸಿಟಿಒ ಆಗಿ ಏಳು ವರ್ಷ ಇದ್ದರು. ನಂತರ ಜುಲೈ ಸಿಸ್ಟಮ್ಸ್ ಎನ್ನುವ ಮೊಬೈಲ್ ಇಂಟರ್ನೆಟ್ ಟೆಕ್ನಾಲಜಿ ಕಂಪನಿಯಲ್ಲಿ ನಾಲ್ಕು ವರ್ಷ ವಿಪಿಯಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಅಡುಗೆ ಚಾನಲ್ ಪ್ರಾರಂಭಿಸಿ ನಂ. 1 ಶ್ರೀಮಂತೆಯಾದ ನಿಶಾ ಮಧುಲಿಕಾ
ಇದಾದ ಬಳಿಕ ರಿಷಿ ಜುಂಜುನವಾಲ ಅವರು ಕ್ಲೌಡ್ಮ್ಯಾಜಿಕ್ ಎನ್ನುವ ಕಂಪನಿ ಸ್ಥಾಪಿಸಿದ್ದಾರೆ. 2015ರಲ್ಲಿ ಟ್ರೂಕಾಲರ್ ಸಂಸ್ಥೆಯ ಪ್ರಾಡಕ್ಟ್ ವಿಭಾಗದಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ನೇಮಕವಾದರು. 2020ರಲ್ಲಿ ಚೀಫ್ ಪ್ರಾಡಕ್ಟ್ ಆಫೀಸರ್ ಆಗಿದ್ದಾರೆ. 2021ರಿಂದ ಎಂಡಿಯಾಗಿಯೂ ಹೆಚ್ಚುವರಿ ಜವಾಬ್ದಾರಿ ಪಡೆದಿದ್ದಾರೆ. ಈಗ ಸಿಇಒ ಸ್ಥಾನಕ್ಕೆ ನಿಯುಕ್ತರಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ