
ಜನಸಾಮಾನ್ಯರು ದೂರ ಪ್ರಯಾಣಕ್ಕೆ ಅತಿಹೆಚ್ಚಾಗಿ ಬಳಸುವ ಸಾರಿಗೆ ಮಾಧ್ಯಮ ಎಂದರೆ ಟ್ರೈನುಗಳು. ಭಾರತೀಯ ರೈಲ್ವೇಸ್ (Indian Railways) ದೇಶಾದ್ಯಂತ ಬಹುತೇಕ ಎಲ್ಲೆಡೆ ರೈಲ್ವೆ ನೆಟ್ವರ್ಕ್ ಹೊಂದಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಲು ಟ್ರೈನುಗಳಲ್ಲಿ ಅತಿಕಡಿಮೆ ವೆಚ್ಚ ಆಗುತ್ತದೆ. ಟಿಕೆಟ್ ದರ ಬಹಳ ಕಡಿಮೆ ಇದೆ. ಮಕ್ಕಳಿಗೆ ಟಿಕೆಟ್ ದರದಲ್ಲಿ ವಿನಾಯಿತಿ ಮತ್ತು ರಿಯಾಯಿತಿಗಳಿವೆ. ಆದರೆ, ಹಾಗೆಯೇ ಕೆಲ ನಿಬಂಧನೆಗಳೂ ಇವೆ. ಮಕ್ಕಳಿಗೆ ಟಿಕೆಟ್ ಉಚಿತ ಎಂದು ಹೋಗುವ ಮುನ್ನ ಈ ನಿಬಂಧನೆಗಳನ್ನು ತಿಳಿಯುವುದು ಉತ್ತಮ.
ಭಾರತೀಯ ರೈಲ್ವೇಸ್ನ ಟಿಕೆಟ್ ನೀತಿ ಪ್ರಕಾರ ಐದು ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಟಿಕೆಟ್ ಖರೀದಿಸಬೇಕೆನ್ನುವ ಕಡ್ಡಾಯ ಇಲ್ಲ. ಇವರಿಗೆ ಪ್ರಯಾಣ ಉಚಿತವಾಗಿ ಮಾಡುವ ಅವಕಾಶ ಕೊಡಲಾಗಿದೆ. 5-12 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಬೆಲೆಗೆ ಪ್ರಯಾಣಿಸುವ ಅವಕಾಶ ಇದೆ. ಆದರೆ, ಇಲ್ಲಿ ಷರತ್ತುಗಳಿವೆ.
ಇದನ್ನೂ ಓದಿ: ಪಾಕಿಸ್ತಾನದ ಸಿಪೆಕ್ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?
ಐದು ವರ್ಷದೊಳಗಿನ ವಯಸ್ಸಿನ ಮಕ್ಕಳಿಗೆ ಟಿಕೆಟ್ ಉಚಿತ. ಆದರೆ, ಪ್ರತ್ಯೇಕ ಸೀಟು ಸಿಗಲ್ಲ. ಜೊತೆಯಲ್ಲಿರುವ ದೊಡ್ಡವರೊಂದಿಗೆ ಸೀಟು ಹಂಚಿಕೊಳ್ಳಬೇಕಾಗುತ್ತದೆ. ಪ್ರತ್ಯೇಕ ಸೀಟು ಅಥವಾ ಬರ್ತ್ ಬೇಕೆಂದರೆ ಪೂರ್ಣ ಬೆಲೆಯ ಟಿಕೆಟ್ ಖರೀದಿಸಬೇಕಾಗುತ್ತದೆ.
5ರಿಂದ 12 ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಅರ್ಧ ಬೆಲೆಗೆ ಟಿಕೆಟ್ ಸಿಗುತ್ತದಾದರೂ, ಅವರಿಗೆ ಪ್ರತ್ಯೇಕ ಸೀಟನ್ನು ಕೊಡಲಾಗುವುದಿಲ್ಲ. ಪ್ರತ್ಯೇಕ ಸೀಟು ಬೇಕೆಂದರೆ ಪೂರ್ಣ ಬೆಲೆಗೆ ಟಿಕೆಟ್ ಖರೀದಿಸಬೇಕಾಗುತ್ತದೆ.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು
ಹೀಗಾಗಿ, ಟ್ರೈನ್ನಲ್ಲಿ ನೀವು ಆರಾಮವಾಗಿ ಕುಟುಂಬ ಸಮೇತ ಪ್ರಯಾಣಿಸುವುದಿದ್ದರೆ ಮಕ್ಕಳಿಗೂ ಪೂರ್ಣ ದರದ ಟಿಕೆಟ್ ಖರೀದಿಸುವುದು ಉತ್ತಮ. ಅದರಲ್ಲೂ ದೀರ್ಘ ಪ್ರಯಾಣ ಇದ್ದರೆ. ಒಂದು ವೇಳೆ, ಮಗು ನಡೆದಾಡದಷ್ಟು ಚಿಕ್ಕದಿದ್ದರೆ ಅದು ದೊಡ್ಡವರ ಸುಪರ್ದಿಯಲ್ಲೇ ಇರಬೇಕಾಗುತ್ತದೆ. ಅದಕ್ಕೆ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಪ್ರತ್ಯೇಕವಾಗಿ ಸೀಟು ಬೇಕೆನಿಸಿದಾಗ ಮಾತ್ರ ಮಕ್ಕಳಿಗೂ ಟಿಕೆಟ್ ತೆಗೆದುಕೊಳ್ಳಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ