Railways: ಜುಲೈ 1ರಿಂದ ಕಿಮೀಗೆ ಅರ್ಧಪೈಸೆಯಿಂದ 2 ಪೈಸೆಯವರೆಗೆ ರೈಲು ಟಿಕೆಟ್ ದರ ಏರಿಕೆ?

Train ticket price may see marginal increase from July 1st: ಸಬರ್ಬನ್ ರೈಲು ಹೊರತುಪಡಿಸಿ ಉಳಿದ ಪ್ಯಾಸೆಂಜರ್ ರೈಲುಗಳ ಟಿಕೆಟ್ ದರವನ್ನು ಜುಲೈ 1ರಿಂದ ಏರಿಸಲಾಗುತ್ತಿದೆ. ವರದಿ ಪ್ರಕಾರ, ಎಸಿ ಅಲ್ಲದ ಮೇಲ್ ಟ್ರೈನ್ ಮತ್ತು ಎಕ್ಸ್​ಪ್ರೆಸ್ ಟ್ರೈನುಗಳ ಟಿಕೆಟ್ ದರ ಪ್ರತೀ ಕಿಮೀಗೆ 1 ಪೈಸೆಯಷ್ಟು ಏರಿಕೆ ಮಾಡಲಾಗುತ್ತಿದೆ. ಎಸಿ ರೈಲುಗಳಲ್ಲಿ 2 ಪೈಸೆ ಏರಿಕೆ ಆಗುತ್ತದೆ. ಕೋವಿಡ್ ಸಂದರ್ಭ ಬಳಿಕ ಭಾರತೀಯ ರೈಲ್ವೇಸ್ ಮೊದಲ ಬಾರಿಗೆ ಟಿಕೆಟ್ ದರ ಹೆಚ್ಚಿಸುತ್ತಿದೆ.

Railways: ಜುಲೈ 1ರಿಂದ ಕಿಮೀಗೆ ಅರ್ಧಪೈಸೆಯಿಂದ 2 ಪೈಸೆಯವರೆಗೆ ರೈಲು ಟಿಕೆಟ್ ದರ ಏರಿಕೆ?
ರೈಲು

Updated on: Jun 24, 2025 | 6:52 PM

ನವದೆಹಲಿ, ಜೂನ್ 24: ಭಾರತೀಯ ರೈಲ್ವೇಸ್ (Indian Railways) ನಾಲ್ಕೈದು ವರ್ಷದ ಬಳಿಕ ಮೊದಲ ಬಾರಿಗೆ ಪ್ರಯಾಣ ದರ ಏರಿಸಲು ಹೊರಟಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಬಹಳ ಅತ್ಯಲ್ಪ ದರ ಏರಿಕೆ ಆಗಲಿದೆ. ಎಸಿ ಅಲ್ಲದ ಟ್ರೈನುಗಳ ಪ್ರಯಾಣ ದರ (train ticket fare) ಪ್ರತೀ ಕಿಮೀಗೆ ಒಂದು ಪೈಸೆಯಷ್ಟು ಏರಿಕೆ ಆಗಲಿದೆ. ಎಸಿ ಟಿಕೆಟ್​​ಗಳಿಗೆ ಪ್ರತೀ ಕಿಮೀಗೆ ಎರಡು ಪೈಸೆಯಷ್ಟು ದರ ಏರಿಕೆ ಆಗಲಿದೆ ಎಂದು ರೈಲ್ವೇಸ್​ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಈ ದರ ಏರಿಕೆಯು ಜುಲೈ 1ರಿಂದ ಜಾರಿಗೆ ಬರಬಹುದು ಎಂದೂ ಹೇಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಟಿಕೆಟ್ ದರ ಏರಿಸಲಾಗಿತ್ತು. ಅದಾದ ಬಳಿಕ ಮೊದಲ ಬಾರಿಗೆ ಪ್ಯಾಸೆಂಜರ್ ಟಿಕೆಟ್ ದರ ಹೆಚ್ಚಳ ಆಗಿದೆ.

ಸಬರ್ಬನ್ ಟ್ರೈನುಗಳಲ್ಲಿ 500 ಕಿಮೀ ಒಳಗಿನ ದೂರದ ಪ್ರಯಾಣಕ್ಕೆ ಯಾವುದೇ ದರ ಏರಿಕೆ ಇರುವುದಿಲ್ಲ. ಸೆಕೆಂಡ್ ಕ್ಲಾಸ್ ಕಂಪಾರ್ಟ್ಮೆಂಟ್​​ನಲ್ಲಿ ಪ್ರಯಾಣಿಸುವವರಿಗೂ ದರ ಏರಿಕೆ ಇರುವುದಿಲ್ಲ. ಆದರೆ, 500 ಕಿಮೀಗೂ ಹೆಚ್ಚು ದೂರದ ಪ್ರಯಾಣವಾದರೆ ಪ್ರತೀ ಕಿಮೀಗೆ ಅರ್ಧ ಪೈಸೆಯಷ್ಟು ದರ ಏರಿಕೆ ಆಗಲಿದೆ.

ಪರಿಷ್ಕೃತ ರೈಲು ಪ್ರಯಾಣ ದರ

  • ಸಬರ್ಬನ್ ರೈಲುಗಳ ಟಿಕೆಟ್ ದರದಲ್ಲಿ ಏರಿಕೆ ಇರುವುದಿಲ್ಲ.
  • ಮಾಸಿಕ ಸೀಸನ್ ಟಿಕೆಟ್ ದರದಲ್ಲಿ ಬದಲಾವಣೆ ಇಲ್ಲ
  • ಸೆಕೆಂಡ್ ಕ್ಲಾಸ್ ಪ್ರಯಾಣದಲ್ಲಿ 500 ಕಿಮೀ ದೂರದವರೆಗೆ ಟಿಕೆಟ್ ದರ ಏರಿಕೆ ಇಲ್ಲ
  • ಸೆಕೆಂಡ್ ಕ್ಲಾಸ್​​ನಲ್ಲಿ 500 ಕಿಮೀಗೂ ಹೆಚ್ಚು ದೂರದ ಪ್ರಯಾಣಕ್ಕೆ ಪ್ರತೀ ಕಿಮೀಗೆ ಅರ್ಧಪೈಸೆಯಷ್ಟು ದರ ಏರಿಕೆ
  • ಎಸಿ ಅಲ್ಲದ ಮೇಲ್ ಮತ್ತು ಎಕ್ಸ್​​ಪ್ರೆಸ್ ಟ್ರೈನ್​ಗಳ ಪ್ರಯಾಣ ದರ ಪ್ರತೀ ಕಿಮೀಗೆ 1 ಪೈಸೆ ಹೆಚ್ಚಳ
  • ಎಸಿ ರೈಲುಗಳಲ್ಲಿ ಪ್ರತೀ ಕಿಮೀಗೆ 2 ಪೈಸೆ ಟಿಕೆಟ್ ದರ ಏರಿಕೆ

ಇದನ್ನೂ ಓದಿ: ಜುಲೈ 31ರ ಬಳಿಕ ಐಟಿ ರಿಟರ್ನ್ಸ್ ಸಲ್ಲಿಸಿದರೆ ಬಡ್ಡಿ, ದಂಡ ಸೇರಿಸಿ ಕಟ್ಟಬೇಕಾಗುತ್ತದಾ? ಇಲ್ಲಿದೆ ಮಾಹಿತಿ

ರೈಲ್ವೇಸ್​ನ ಹಾಲಿ ಟಿಕೆಟ್ ದರ ಎಷ್ಟಿದೆ?

ಕೆಎಸ್ಸಾರ್ಟಿಸಿ ಬಸ್ ರೀತಿಯಲ್ಲಿ ರೈಲ್ವೇಸ್ ಕೂಡ ಸ್ಲಾಬ್ ಲೆಕ್ಕಾಚಾರದಲ್ಲಿ ಟಿಕೆಟ್ ದರ ನಿಗದಿ ಮಾಡುತ್ತದೆ. 2025ರ ಮಾರ್ಚ್​​ನಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಭಾರತೀಯ ರೈಲ್ವೇಸ್​​ನ ಆಪರೇಟಿಂಗ್ ಎಕ್ಸ್​ಪೆನ್ಸ್ ಅಥವಾ ಕಾರ್ಯಾಚರಣೆ ವೆಚ್ಚ ಒಬ್ಬ ಪ್ರಯಾಣಿಕರಿಗೆ ಒಂದು ಕಿಮೀಗೆ 1.38 ರೂ ಇದೆ. ಪ್ರಯಾಣಿಕರಿಂದ ಟಿಕೆಟ್ ಮೂಲಕ 73 ಪೈಸೆ ಪಡೆಯುತ್ತದೆ. ಇನ್ನುಳಿದ ಹಣವು ಸರ್ಕಾರದಿಂದ ಕೊಡುವ ಸಬ್ಸಿಡಿಯಿಂದ ಭರ್ತಿಯಾಗುತ್ತದೆ.

ತತ್ಕಾಲ್ ಟಿಕೆಟ್ ಬುಕಿಂಗ್​​ಗೆ ಬೇಕು ಆಧಾರ್

ತತ್ಕಾಲ್​ನಲ್ಲಿ ಟ್ರೈನ್ ಟಿಕೆಟ್ ಬುಕ್ ಮಾಡಬೇಕೆಂದರೆ ಆಧಾರ್ ದೃಢೀಕರಣ ಬೇಕಾಗುತ್ತದೆ. ಜೂನ್ 10ರಂದು ರೈಲ್ವೆ ಸಚಿವಾಲಯವು ಇಂಥದ್ದೊಂದು ನಿರ್ದೇಶನ ಹೊರಡಿಸಿತ್ತು. ಜುಲೈ 1ರಿಂದ ಈ ಹೊಸ ನಿಯಮ ಚಾಲನೆಗೆ ಬರಲಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ತತ್ಕಾಲ್​ ರೈಲ್ವೆ ಟಿಕೆಟ್​ ಬುಕಿಂಗ್​ಗೆ ಹೊಸ ರೂಲ್ಸ್: ಜುಲೈ​ 1ರಿಂದ ಜಾರಿ

ಬುಕಿಂಗ್ ಏಜೆಂಟ್ಸ್​​ಗಳಿಗೆ ತತ್ಕಾಲ್ ಬುಕಿಂಗ್ ನಿರ್ಬಂಧ

ಭಾರತೀಯ ರೈಲ್ವೇಸ್​​ನ ಅಧಿಕೃತ ಬುಕಿಂಗ್ ಏಜೆಂಟ್​​ಗಳು ತತ್ಕಾಲ್ ಟಿಕೆಟ್ ಬುಕಿಂಗ್​ನ ಮೊದಲ ದಿನದಂದು ಆರಂಭಿಕ ಅರ್ಧ ಗಂಟೆಯನ್ನು ಬಳಸಲು ಆಗುವುದಿಲ್ಲ. ಇಂಥದ್ದೊಂದು ನಿರ್ಬಂಧವನ್ನು ಹಾಕಲಾಗಿದೆ. ಎಸಿ ಕ್ಲಾಸ್ ಬುಕಿಂಗ್​ಗಳಲ್ಲಿ ಬೆಳಗ್ಗೆ 10ರಿಂದ 10:30ರವರೆಗೆ ನಿರ್ಬಂಧ ಇರುತ್ತದೆ. ನಾನ್ ಎಸಿ ಆದರೆ ಬೆಳಗ್ಗೆ 11ರಿಂದ 11:30ರವರೆಗೆ ನಿರ್ಬಂಧ ಇರುತ್ತದೆ. ಈ ಅವಧಿಯಲ್ಲಿ ಏಜೆಂಟ್​​ಗಳು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ