
ಚೆನ್ನೈ, ಅಕ್ಟೋಬರ್ 31: ವಿಮಾನಗಳು ಟೇಕಾಫ್ ಆಗಲು ಮತ್ತು ಇಳಿಯಲು ರನ್ವೇ ಬೇಕೇ ಬೇಕು. ರನ್ ವೇ ಇಲ್ಲದೆ ವಿಮಾನ ಕೆಳಗಿಯಲ್ಲ. ರನ್ ವೇ ಇಲ್ಲದೇ ಕೆಳಗಿಳಿಯುವ ವಿಮಾನ ಯಾಕಿಲ್ಲ ಎಂದು ಯಾರಿಗಾದರೂ ಅನಿಸುತ್ತಿರಬಹುದು. ಡ್ರೋನ್ ಮಾದರಿಯಲ್ಲಿ, ಹೆಲಿಕಾಪ್ಟರ್ ಮಾದರಿಯಲ್ಲಿ, ಸ್ಕೈಫೈ ಸಿನಿಮಾಗಳಲ್ಲಿ ಬರುವ ಏಲಿಯನ್ಗಳ ಸ್ಪೇಸ್ಶಿಪ್ ಮಾದರಿಯಲ್ಲಿ ವಿಮಾನಗಳನ್ನು ಯಾಕೆ ತಯಾರಿಸಬಾರದು ಎಂದು ಕೆಲವರಿಗಾದರೂ ಕಾಡುತ್ತಿರಬಹುದು. ಈ ಕಾತರ ಮತ್ತು ಪ್ರಶ್ನೆಗಳಿಗೆ ಭಾರತೀಯ ವಿಜ್ಞಾನಿಗಳು ಉತ್ತರ ಕೊಡುತ್ತಿದ್ದಾರೆ. ವಿಮಾನವು ನೇರವಾಗಿ ಮತ್ತು ಮೆದುವಾಗಿ ಕೆಳಗಿಳಿಯಬಲ್ಲಂತಹ ತಂತ್ರಜ್ಞಾನವನ್ನು ಐಐಟಿ ಮದ್ರಾಸ್ನ ತಂಡವೊಂದು ಆವಿಷ್ಕರಿಸಿದೆ. ವಿಶ್ವದಲ್ಲಿ ಕೆಲವೇ ದೇಶಗಳು ಈ ತಂತ್ರಜ್ಞಾನ ಆವಿಷ್ಕಾರದಲ್ಲಿ ತೊಡಗಿವೆ. ಈ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ.
ಐಐಟಿ ಮದ್ರಾಸ್ನ ತಂಡವು ಹೈಬ್ರಿಡ್ ರಾಕೆಟ್ ಥ್ರಸ್ಟರ್ ಮತ್ತು ವರ್ಚುವಲ್ ಸಿಮುಲೇಶನ್ ತಂತ್ರಜ್ಞಾನವನ್ನು ಏಕೀಕರಿಸಿ, ವಿಮಾನ ನೇರವಾಗಿ ಇಳಿಯಲು ಸಾಧ್ಯವಾಗುವಂತೆ ಮಾಡಿದ್ದಾರೆ. ಇದಕ್ಕೆ ಸಂಕೀರ್ಣ ಎಂಜಿನಿಯರಿಂಗ್ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ. ಇಲ್ಲಿ ವಿಮಾನ ಅಥವಾ ವೈಮಾನಿಕ ವಾಹನವು ಕೆಳಗಿಳಿಯುವಾಗ ಎಷ್ಟು ನಿಧಾನಗೊಳ್ಳುತ್ತದೆ, ಎಷ್ಟು ಮೆದುವಾಗಿ ಇಳಿಯುತ್ತದೆ ಎಂಬುದು ಮುಖ್ಯ. ಇದನ್ನು ಸಾಧಿಸಲು ಜಾಗತಿಕವಾಗಿ ಎಂಜಿನಿಯರುಗಳು ಮತ್ತು ವಿಜ್ಞಾನಿಗಳು ಹರಸಾಹಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನಿಗಳು ಇದನ್ನು ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ.
ಇದನ್ನೂ ಓದಿ: ಭಾರತದ ಸಾಗರ ಯೋಜನೆಗಳಿಂದ 4.5 ಲಕ್ಷ ಕೋಟಿ ರೂ ಹೂಡಿಕೆ, 2,500ಕ್ಕೂ ಅಧಿಕ ಹಡಗುಗಳ ನಿರ್ಮಾಣ: ಪ್ರಧಾನಿ ನಿರೀಕ್ಷೆ
ಈಗ ನೇರವಾಗಿ ಏರಬಲ್ಲ ಮತ್ತು ಇಳಿಯಬಲ್ಲ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಆವಿಷ್ಕರಿಸಲಾಗಿದೆ. ಆದರೆ, ಇವುಗಳ ತಂತ್ರಜ್ಞಾನ ತೀರಾ ಸಂಕೀರ್ಣವಾಗಿರುತ್ತದೆ. ಇದನ್ನು ಮೈಂಟೆನೆನ್ಸ್ ಮಾಡುವುದು ಕೂಡ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಐಐಟಿ ಮದ್ರಾಸ್ ತಂಡ ವಿನೂತನ ವಿಧಾನ ಅನುಸರಿಸಿ ಯಶಸ್ವಿಯಾಗಿದೆ. ತಮ್ಮ ಪ್ರಯೋಗದ ಸಂಗತಿಯನ್ನು ಈ ತಂಡವು ಅಂತಾರಾಷ್ಟ್ರೀಯ ಜರ್ನಲ್ನಲ್ಲಿ ಪ್ರಕಟಿಸಿದೆ.
ಆವಿಷ್ಕರಿಸಲಾಗಿರುವ ಈ ವ್ಯವಸ್ಥೆಯನ್ನು ತಾಂತ್ರಿಕವಾಗಿ ಉಪಯೋಗಿಸಿ, ಅದನ್ನು ಕಮರ್ಷಿಯಲ್ ಆಗಿ ಬಳಸಲು ಸಾಧ್ಯವಾದರೆ ಜಾಗತಿಕ ವೈಮಾನಿಕ ಕ್ಷೇತ್ರದಲ್ಲೇ ಗೇಮ್ ಚೇಂಜರ್ ಎನಿಸಲಿದೆ ಎಂದು ಐಐಟಿ ಮದ್ರಾಸ್ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪಿ.ಎ. ರಾಮಕೃಷ್ಣ ಅವರು ಹೇಳುತ್ತಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?
ಸದ್ಯ ಈ ರೀತಿ ನೇರವಾಗಿ ಏರಬಲ್ಲ ಮತ್ತು ಇಳಿಯಬಲ್ಲ ವೈಮಾನಿಕ ವಾಹನ ಎಂದರೆ ಹೆಲಿಕಾಪ್ಟರ್ ಮಾತ್ರವೇ. ಆದರೆ, ಇದರ ವೇಗ ಬಹಳ ಕಡಿಮೆ, ಕಾರ್ಯನಿರ್ವಹಣೆ ವೆಚ್ಚ ಅಧಿಕ, ಕ್ರಮಿಸುವ ದೂರವೂ ಕಡಿಮೆ. ಹೀಗಾಗಿ, ಐಐಟಿ ಮದ್ರಾಸ್ನ ವಿಜ್ಞಾನಿಗಳು ಆವಿಷ್ಕರಿಸಿದ ತಂತ್ರಜ್ಞಾನ ನಿಜಕ್ಕೂ ಗೇಮ್ ಚೇಂಜರ್ ಎನಿಸುತ್ತದೆ.
ಒಂದು ವೇಳೆ, ಈ ತಂತ್ರಜ್ಞಾನವನ್ನು ವಿಮಾನಗಳಿಗೆ ಅಳವಡಿಸಲು ಯಶಸ್ವಿಯಾದಲ್ಲಿ ವೈಮಾನಕ ಚಹರೆಯೇ ಬದಲಾಗಬಲ್ಲುದು. ವಿಮಾನಗಳು ಮೇಲೇರಲು ಮತ್ತು ಲ್ಯಾಂಡ್ ಆಗಲು ರನ್ವೆಗಳೇ ಬೇಕಾಗುವುದಿಲ್ಲ. ಬೆಟ್ಟ ಗುಡ್ಡಗಳು, ಕಾಡು ಇತ್ಯಾದಿ ಊಹಿಸಲೂ ಸಾಧ್ಯವಿಲ್ಲದ ಜಾಗಗಳಲ್ಲೂ ವಿಮಾನವನ್ನು ಇಳಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ