ನವದೆಹಲಿ, ಮಾರ್ಚ್ 1: ಷೇರು ಮಾರುಕಟ್ಟೆ ವಾರಾಂತ್ಯದಲ್ಲಿ ಸಖತ್ ಹವಾ ಸೃಷ್ಟಿಸುತ್ತಿದೆ. ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಬಹಳಷ್ಟು ಷೇರುಗಳು ಸಕಾರಾತ್ಮಕ ಸ್ಪಂದನೆ ಪಡೆದಿವೆ. ಹಲವು ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಭರ್ಜರಿ ಏರಿಕೆ ಪಡೆದಿವೆ. ಅದರಲ್ಲೂ ಸೆನ್ಸೆಕ್ಸ್ ಹೊಸ ಎತ್ತರಕ್ಕೆ ಏರಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ (bse sensex) ಇಂದು ಶುಕ್ರವಾರ 73,574 ಅಂಕಗಳ ಮಟ್ಟ ಮುಟ್ಟಿತ್ತು. ಇದು ಈವರೆಗೆ ಸೆನ್ಸೆಕ್ಸ್ ಏರಿದ ಗರಿಷ್ಠ ಎತ್ತರ. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ50 ಸೂಚ್ಯಂಕ ಮತ್ತೊಮ್ಮೆ 22,000 ಅಂಕಗಳ ಗಡಿ ದಾಟಿದೆ.
ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಉತ್ತಮ ವಹಿವಾಟು ಕಾಣಲು ಕೆಲ ಪ್ರಮುಖ ಕಾರಣಗಳಿವೆ:
ಸರ್ಕಾರ ನಿನ್ನೆ ಗುರುವಾರ ಮೂರನೇ ಕ್ವಾರ್ಟರ್ನ ಜಿಡಿಪಿ ದತ್ತಾಂಶವನ್ನು ಬಿಡುಗಡೆ ಮಾಡಿತು. ಎಲ್ಲರ ನಿರೀಕ್ಷೆಗಳನ್ನೂ ಮೀರಿಸಿ, ಶೇ. 8.4ರಷ್ಟು ಆರ್ಥಿಕ ಬೆಳವಣಿಗೆ ಆಗಿರುವುದು ಈ ದತ್ತಾಂಶ ತೋರಿಸಿದೆ. ಏಪ್ರಿಲ್ನಿಂದ ಮೊದಲೆರಡು ಕ್ವಾರ್ಟರ್ನಲ್ಲಿ ಆಗಿದ್ದಕ್ಕಿಂತಲೂ ಮೂರನೇ ಕ್ವಾರ್ಟರ್ನಲ್ಲಿ ಹೆಚ್ಚು ಬೆಳವಣಿಗೆ ಆಗಿದೆ. ಹಲವು ಆರ್ಥಿಕ ವಿಶ್ಲೇಷಕರು 3ನೇ ಕ್ವಾರ್ಟರ್ನಲ್ಲಿ ಶೇ. 6ರಿಂದ 7ರಷ್ಟು ಮಾತ್ರವೇ ಜಿಡಿಪಿವೃದ್ಧಿಸಬಹುದು ಎಂದಿದ್ದರು. ಆದ್ದರಿಂದ ಭಾರತದ ಜಿಡಿಪಿ ಬೆಳವಣಿಗೆ ಅಚ್ಚರಿ ಮೂಡಿಸಿದೆ. ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿರಬಹುದು.
ಅಮೆರಿಕದ ಹಣದುಬ್ಬರ ಇನ್ನಷ್ಟು ಕೆಳಗಿಳಿದಿರುವುದು ಜಾಗತಿಕವಾಗಿ ಸಕಾರಾತ್ಮಕ ಪರಿಣಾಮ ಬೀರಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರ ಕಡಿತಗೊಳಿಸುವ ಮುನ್ಸೂಚನೆ ದಟ್ಟವಾಗಿದೆ. ಇದೂ ಕೂಡ ಹೂಡಿಕೆದಾರರ ವಿಶ್ವಾಸ ಮೂಡಿಸಿದೆ. ಭಾರತ ಮಾತ್ರವಲ್ಲ ಜಾಗತಿಕ ಷೇರುಮಾರುಕಟ್ಟೆಯಲ್ಲೂ ಉತ್ಸಾಹ ಇದೆ.
ಇತ್ತೀಚಿನ ಕೆಲ ಸಮೀಕ್ಷೆಗಳು ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಮತ್ತೆ ಗೆಲುವು ಸಾಧಿಸಬಹುದು ಎಂದು ಅಂದಾಜು ಮಾಡಿವೆ. ಕಳೆದ ಹತ್ತು ವರ್ಷಗಳಿಂದ ಸರ್ಕಾರ ಮಾಡಿರುವ ನೀತಿಗಳು ಮುಂದುವರಿಯಬಹುದು ಎನ್ನುವಂತಹ ಸಂಗತಿ ಉದ್ಯಮ ವಲಯಕ್ಕೆ ಸಮಾಧಾನ ತಂದಿದೆ. ಬ್ಯಾಂಕಿಂಗ್ ಮತ್ತು ಸರ್ಕಾರಿ ಸಂಸ್ಥೆಗಳ ಷೇರುಗಳಿಗೆ ಬೇಡಿಕೆ ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ