Indian Stock Market: ಸಾರ್ವಕಾಲಿಕ ಎತ್ತರದ ದಿನಾಂತ್ಯ ಕಂಡ ಸೆನ್ಸೆಕ್ಸ್; 3 ದಿನದಲ್ಲಿ ಹೂಡಿಕೆದಾರರ ಸಂಪತ್ತು 2.23 ಲಕ್ಷ ಕೋಟಿ ಹೆಚ್ಚಳ
ಗುರುವಾರದಂದು ಬಿಎಸ್ಇ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಎತ್ತರದೊಂದಿಗೆ ದಿನದ ವಹಿವಾಟು ಚುಕ್ತಾ ಮಾಡಿದೆ. ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಕಳೆದ ಮೂರು ದಿನದ ಏರಿಕೆಯಲ್ಲಿ ಹೂಡಿಕೆದಾರರ ಸಂಪತ್ತು ರೂ. 2,22,763.25 ಕೋಟಿ ಹೆಚ್ಚಳ ಆಗಲು ಕಾರಣ ಆಗಿದೆ.
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಕಳೆದ ಮೂರು ದಿನದ ಏರಿಕೆಯಲ್ಲಿ ಹೂಡಿಕೆದಾರರ ಸಂಪತ್ತು ರೂ. 2,22,763.25 ಕೋಟಿ ಹೆಚ್ಚಳ ಆಗಲು ಕಾರಣ ಆಗಿದೆ. ಇನ್ನು ಗುರುವಾರದಂದು ಬಿಎಸ್ಇ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಎತ್ತರದೊಂದಿಗೆ ದಿನದ ವಹಿವಾಟು ಚುಕ್ತಾ ಮಾಡಿದೆ. 30 ಷೇರುಗಳ ಗುಚ್ಛವಾದ ಬಿಎಸ್ಇ ಸೂಚ್ಯಂಕವು 254.80 ಪಾಯಿಂಟ್ಗಳಷ್ಟು ಅಥವಾ ಶೇ 0.48ರಷ್ಟು ಮೇಲೇರಿ 53,158.85 ಪಾಯಿಂಟ್ನೊಂದಿಗೆ ಗುರುವಾರ ವ್ಯವಹಾರ ಮುಕ್ತಾಯಗೊಳಿಸಿತು. ಇದು ದಿನದ ಕೊನೆಗೆ ಮುಕ್ತಾಯವಾದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಇನ್ನು ದಿನದ ಗರಿಷ್ಠ ಮಟ್ಟವಾದ 53,266.12 ಪಾಯಿಂಟ್ ಮುಟ್ಟಿತ್ತು. ಕಳೆದ ಮೂರು ದಿನದಲ್ಲಿ ಸೂಚ್ಯಂಕವು 786.16 ಪಾಯಿಂಟ್ಗಳಷ್ಟು ಮೇಲೇರಿದೆ.
ಅಂದಹಾಗೆ, ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಸಹ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 233,86,397.18 ಕೋಟಿ ರೂ. (233 ಲಕ್ಷದ 86 ಸಾವಿರದ 397 ಕೋಟಿ ರೂಪಾಯಿ) ಮುಟ್ಟಿದೆ. “ಮಾರುಕಟ್ಟೆಯು ಸತತ ಮೂರನೇ ದಿನ ಸಕಾರಾತ್ಮಕವಾದ ವಹಿವಾಟು ನಡೆಸಿದೆ. ಹತ್ತಿರಹತ್ತಿರ ಅರ್ಧ ಪರ್ಸೆಂಟ್ ಗಳಿಕೆ ಕಂಡಿದೆ. ಸೂಚ್ಯಂಕಗಳು ಅಲ್ಪ ಪ್ರಮಾಣದ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಐಟಿ, ಬ್ಯಾಂಕಿಂಗ್ ಪ್ರಮುಖ ಷೇರುಗಳಲ್ಲಿನ ಖರೀದಿಯಿಂದಾಗಿ ಸೂಚಚ್ಯಂಕವು ಎತ್ತರಕ್ಕೆ ಏರಿತು,” ರೆಲಿಗೇರ್ ಬ್ರೋಕಿಂಗ್ನ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಬಿಎಸ್ಇ ಸೆನ್ಸೆಕ್ಸ್ನಲ್ಲಿ ಎಚ್ಸಿಎಲ್ ಟೆಕ್ ಟಾಪ್ ಗೇಯ್ನರ್ ಆಗಿತ್ತು. ಶೇ 5ಕ್ಕೂ ಹೆಚ್ಚು ಗಳಿಕೆ ಕಂಡಿತ್ತು. ಆ ನಂತರ ಲಾರ್ಸನ್ ಟೂಬ್ರೋ, ಟೆಕ್ ಮಹೀಂದ್ರಾ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಸಹ ಗಳಿಕೆ ಕಂಡವು. ಇನ್ನು ಇಳಿಕೆ ಕಂಡ ಪ್ರಮುಖ ಷೇರುಗಳೆಂದರೆ, ಭಾರ್ತಿ ಏರ್ಟೆಲ್, ಮಹೀಂದ್ರಾ ಅಂಡ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಟೈಟನ್. ಬಿಎಸ್ಇಯ ಸ್ಮಾಲ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಸೂಚ್ಯಂಕಗಳು ಶೇ 0.43ರಷ್ಟು ಏರಿಕೆ ಕಂಡವು. ಬಿಎಸ್ಇ ರಿಯಾಲ್ಟಿ, ಕ್ಯಾಪಿಟಲ್ ಗೂಡ್ಸ್, ಐಟ, ಇಂಡಸ್ಟ್ರಿಯಲ್, ಲೋಹ, ಪ್ರಾಥಮಿಕ ವಸ್ತುಗಳು ಮತ್ತು ಬ್ಯಾಂಕ್ ಸೂಚ್ಯಂಕ ಶೇ 4ರ ತನಕ ಮೇಲೇರಿದವು. ಇನ್ನು ತೈಲ ಮತ್ತು ಅನಿಲ, ಟೆಲಿಕಾಂ, ಎನರ್ಜಿ, ವಾಹನ ಸೂಚ್ಯಂಕಗಳು ಶೇ 0.87ರ ತನಕ ಇಳಿಕೆ ದಾಖಲಿಸಿದವು.
ಇದನ್ನೂ ಓದಿ: Multibagger 2021 Deepak Nitrate: ಈ ಷೇರಿನ ಮೇಲೆ ಹೂಡಿಕೆ ಮಾಡಿದ ರೂ. 1 ಲಕ್ಷ 10 ವರ್ಷದಲ್ಲಿ ರೂ. 1.05 ಕೋಟಿ
(BSE Sensex closed at all time high on July 15, Thursday, Investors wealth increased more than Rs 2 lakh crores in 3 days)