Multibagger 2021 Deepak Nitrate: ಈ ಷೇರಿನ ಮೇಲೆ ಹೂಡಿಕೆ ಮಾಡಿದ ರೂ. 1 ಲಕ್ಷ 10 ವರ್ಷದಲ್ಲಿ ರೂ. 1.05 ಕೋಟಿ
ಮಲ್ಟಿಬ್ಯಾಗರ್ ದೀಪಕ್ ನೈಟ್ರೇಟ್ ಕಂಪೆನಿಯ ಷೇರಿನ 10 ವರ್ಷದ ಹಿಂದೆ ಯಾರಾದರೂ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಆ ಷೇರುಗಳನ್ನು ಹಾಗೇ 2021ರ ಜುಲೈ ತಿಂಗಳಲ್ಲೂ ಉಳಿಸಿಕೊಂಡಿದ್ದರೆ ಅದೇ 1 ಲಕ್ಷ ರೂಪಾಯಿ ಮೊತ್ತವು 1.05 ಕೋಟಿ ರೂಪಾಯಿ ಆಗಿರುತ್ತದೆ. ಅಂದರೆ 105 ಪಟ್ಟು ಬೆಳೆದಿರುತ್ತದೆ.
ಕೊವಿಡ್ ಮೊದಲನೇ ಅಲೆಯ ನಂತರ ಹಲವು ಕಂಪೆನಿಯ ಷೇರುಗಳು ಮಲ್ಟಿಬ್ಯಾಗರ್ (Multibagger) ಗಳಾಗಿವೆ. ನೀವೂ ಈ ಮಲ್ಟಿಬ್ಯಾಗರ್ ಎಂಬ ಪದವನ್ನು ಕೇಳಿರಬಹುದು. ಮೊದಲಿಗೆ ಮಲ್ಟಿಬ್ಯಾಗರ್ ಅಂದರೇನು ಅಂತ ತಿಳಿದುಬಿಡಿ. ಆ ನಂತರ ಈ ಲೇಖನದಲ್ಲಿ ಹೇಳಲು ಹೊರಟಿರುವ ಮಲ್ಟಿಬ್ಯಾಗರ್ ದೀಪಕ್ ನೈಟ್ರೇಟ್ ಕಂಪೆನಿಯ ಷೇರಿನ ಬಗ್ಗೆ ತಿಳಿಸಲಾಗುವುದು. ಷೇರಿನ ಮೇಲೆ ಹೂಡುವ ಬಂಡವಾಳವು ಹಲವು ಪಟ್ಟು (Multi Times) ಏರಿಕೆ ಕಂಡರೆ ಅವುಗಳನ್ನು ಮಲ್ಟಿಬ್ಯಾಗರ್ ಎನ್ನಲಾಗುತ್ತದೆ. ಅಂಥದ್ದೇ ಒಂದು ಕಂಪೆನಿ ದೀಪಕ್ ನೈಟ್ರೇಟ್. ಷೇರು ಮಾರುಕಟ್ಟೆಯಲ್ಲಿ ಒಂದು ಮಾತಿದೆ: ಕೊಳ್ಳುವುದು ಮತ್ತು ಮಾರುವುದರಲ್ಲಿ ದುಡ್ಡಿಲ್ಲ, ಕಾಯುವುದರಲ್ಲಿ ಹಣವಿದೆ. ಈಗ ದೀಪಕ್ ನೈಟ್ರೇಟ್ ಕಂಪೆನಿಯ ಷೇರಿನ ಉದಾಹರಣೆಯನ್ನೇ ತೆಗೆದುಕೊಳ್ಳಿ: ಕಳೆದ 10 ವರ್ಷದಲ್ಲಿ ಶೇಕಡಾ 10,413.5ರಷ್ಟು ರಿಟರ್ನ್ಸ್ ಕೊಟ್ಟಿದೆ.
ದೀಪಕ್ ನೈಟ್ರೇಟ್ ಷೇರು ಬೆಲೆ ಟಾರ್ಗೆಟ್ ದೀಪಕ್ ನೈಟ್ರೇಟ್ ಷೇರಿನ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಿರುವ ತಜ್ಞರು, 2021ರ ಫೆಬ್ರವರಿ 11ನೇ ತಾರೀಕಿನಂದು ರೂ. 1000 ಬೆಲೆಯ ಗಡಿಯನ್ನು ದಾಟಿದ ಮೇಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಾ ಸಾಗಿದೆ. ಚಾರ್ಟ್ನಲ್ಲಿ ಈ ಷೇರು ಪಾಸಿಟಿವ್ ಆಗಿ ಕಂಡಿದೆ. ಈಗಲೂ ಒಂದು ತಿಂಗಳಲ್ಲಿ 2040ರಿಂದ 2100 ರೂಪಾಯಿ ತಲುಪುವ ಸಾಧ್ಯತೆ ಇದೆ. 1880 ರೂಪಾಯಿಗಿಂತ ಸ್ವಲ್ಪ ಕೆಳಗೆ ಸ್ಟಾಪ್ ಲಾಸ್ ಇಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಹೂಡಿಕೆದಾರರಿಗೆ ರಿಟರ್ನ್ಸ್ 2011ನೇ ಇಸವಿಯ ಜುಲೈ 8ನೇ ತಾರೀಕಿನಂದು ರೂ. 18.50 ಇತ್ತು. ಜುಲೈ 9ನೇ ತಾರೀಕಿನ 2021ಕ್ಕೆ ಪ್ರತಿ ಷೇರಿಗೆ 1945 ರೂಪಾಯಿ ಆಗಿತ್ತು. ಆ ಲೆಕ್ಕದಲ್ಲಿ ದೀಪಕ್ ನೈಟ್ರೇಟ್ ಕಂಪೆನಿಯ ಷೇರಿನ ಮೇಲೆ 10 ವರ್ಷದ ಹಿಂದೆ ಯಾರಾದರೂ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಆ ಷೇರುಗಳನ್ನು ಹಾಗೇ 2021ರ ಜುಲೈ ತಿಂಗಳಲ್ಲೂ ಉಳಿಸಿಕೊಂಡಿದ್ದರೆ ಅವರ ಅದೇ 1 ಲಕ್ಷ ರೂಪಾಯಿ ಮೊತ್ತವು 1.05 ಕೋಟಿ ರೂಪಾಯಿ ಆಗಿರುತ್ತದೆ. ಅಂದರೆ 105 ಪಟ್ಟು ಬೆಳೆದಿರುತ್ತದೆ. ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಅಂತಿಮ ಬಳಕೆದಾರರಿಂದ ಬೇಡಿಕೆ ಹೆಚ್ಚಾದ ಕಾರಣಕ್ಕೆ FY21Q4ನಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ.
ದೀರ್ಘಕಾಲೀನ ದೃಷ್ಟಿಯಲ್ಲಿ ನೋಡುವುದಾದರೆ, ಚೀನಾ+1 ಎಂಬ ನೀತಿಯು ಕಂಪೆನಿಗೆ ಅನುಕೂಲವಾಗಿ ಪರಿಣಮಿಸಲಿದೆ. ಮುಂದೆ ಕಂಪೆನಿಯಿಂದ ವಿವಿಧ ಉತ್ಪನ್ನಗಳ ತಯಾರಿಗೆ ಯೋಜನೆ ಸಿದ್ಧವಾಗಿದ್ದು, ಕಂಪೆನಿಯ ಪ್ರೊಫೈಲ್ ಉತ್ತಮವಾಗಲಿದೆ. ಕಚ್ಚಾ ತೈಲದ ಜತೆಜತೆಗೆ ಪೆಟ್ರೋಕೆಮಿಕಲ್ಸ್ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಆಗುತ್ತಿದ್ದು, ದೀಪಕ್ ನೈಟ್ರೇಟ್ ಹೆಚ್ಚಿನ ಇನ್ಪುಟ್ ದರವನ್ನು ದಾಟಿಸುವ ಸಾಧ್ಯತೆ ಇದೆ.
(ಈ ಲೇಖನವು ಮಾಹಿತಿ ಉದ್ದೇಕ್ಕೆ ಹೊರತು ಖರೀದಿ ಅಥವಾ ಮಾರಾಟಕ್ಕೆ ಶಿಫಾರಸಲ್ಲ. ಇಲ್ಲಿರುವ ಅಭಿಪ್ರಾಯಗಳು ತಜ್ಞರದ್ದೇ ವಿನಾ ಲೇಖಕರದ್ದಲ್ಲ. ಒಂದು ವೇಳೆ ಈ ಲೇಖನದ ಆಧಾರದಲ್ಲಿ ಖರೀದಿಸಿ ನಷ್ಟ ಅನುಭವಿಸಿದಲ್ಲಿ ಅದಕ್ಕೆ ಟಿವಿ9 ಡಿಜಿಟಲ್ ಕನ್ನಡ ಅಥವಾ ಅದರ ಸಹವರ್ತಿ ಸಂಸ್ಥೆಗಳು ಹೊಣೆಯಲ್ಲ)
ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು
ಇದನ್ನೂ ಓದಿ: Kotak Mahindra Bank: ಖಾಸಗಿ ಬ್ಯಾಂಕ್ ಷೇರಿನ 10,000 ರೂಪಾಯಿ 20 ವರ್ಷದಲ್ಲಿ 64 ಲಕ್ಷ ರೂ.
(Deepak Nitrate share investment of Rs 1 lakh become Rs 1.05 crore in 10 years)