Stock Market: ಇತಿಹಾಸದಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಅನ್ನು ಹಿಂದಿಕ್ಕಿದೆ ಭಾರತದ ಷೇರುಪೇಟೆ; ಚೀನಾ ಸಮೀಪ ದೌಡು

|

Updated on: Jan 23, 2024 | 10:41 AM

Countries With Largest Market Capitalization: ಭಾರತದ ಷೇರು ಮಾರುಕಟ್ಟೆಯ ಒಟ್ಟು ಷೇರುಸಂಪತ್ತು ಜನವರಿ 22ರಂದು 4.33 ಟ್ರಿಲಿಯನ್ ಡಾಲರ್ ತಲುಪಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಷೇರುಮಾರುಕಟ್ಟೆಯನ್ನು ಭಾರತ ಹಿಂದಿಕ್ಕಿದೆ. ಅತಿದೊಡ್ಡ ಷೇರುಮಾರುಕಟ್ಟೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ, ಜಪಾನ್ ನಂತರದ ಸ್ಥಾನ ಭಾರತದ್ದಾಗಿದೆ.

Stock Market: ಇತಿಹಾಸದಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಅನ್ನು ಹಿಂದಿಕ್ಕಿದೆ ಭಾರತದ ಷೇರುಪೇಟೆ; ಚೀನಾ ಸಮೀಪ ದೌಡು
ಷೇರುಮಾರುಕಟ್ಟೆ
Follow us on

ನವದೆಹಲಿ, ಜನವರಿ 23: ಭಾರತದ ಷೇರುಮಾರುಕಟ್ಟೆ (Indian stock market) ಉಚ್ಛ್ರಾಯ ಸ್ಥಿತಿಯಲ್ಲಿದೆ. ಸತತವಾಗಿ ಏರುತ್ತಲೇ ಇದೆ. ಭಾರತದ್ದು ದಕ್ಷಿಣ ಏಷ್ಯಾದ ಅತಿದೊಡ್ಡ ಷೇರು ಮಾರುಕಟ್ಟೆ ಎನ್ನುವುದು ಮಾತ್ರವಲ್ಲ, ಏಷ್ಯಾದ ದೈತ್ಯ ಮಾರುಕಟ್ಟೆಗಳಲ್ಲಿ ಒಂದೆನಿಸಿದೆ. ಇದೀಗ ಹಾಂಕಾಂಗ್​ನ ಷೇರುಪೇಟೆಯನ್ನು ಭಾರತ ಹಿಂದಿಕ್ಕಿದೆ. ನಿನ್ನೆ ಮಂಗಳವಾರ ಭಾರತದ ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಲಿಸ್ಟ್ ಆಗಿರುವ ಷೇರುಗಳ ಒಟ್ಟು ಮೌಲ್ಯ 4.33 ಟ್ರಿಲಿಯನ್ ಡಾಲರ್ ತಲುಪಿತು. ಅದೇ ವೇಳೆ, ಹಾಂಕಾಂಗ್​ನ ಷೇರು ವಿನಿಯಮ ಕೇಂದ್ರಗಳಲ್ಲಿ ಲಿಸ್ಟ್ ಆಗಿರುವ ಷೇರುಗಳ ಒಟ್ಟು ಮೌಲ್ಯ 4.29 ಟ್ರಿಲಿಯನ್ ಡಾಲರ್ ಇತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಷೇರುಸಂಪತ್ತು ಹಾಂಕಾಂಗ್​ನದ್ದನ್ನು ಮೀರಿಸಿದೆ ಎಂದು ಬ್ಲೂಮ್​ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ.

ವಿಶ್ವದ ಅತಿದೊಡ್ಡ ಷೇರುಮಾರುಕಟ್ಟೆಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿದೆ. ಹಾಂಕಾಂಗ್ ಐದನೇ ಸ್ಥಾನಕ್ಕೆ ಇಳಿದಿದೆ. ಕಳೆದ ನಾಲ್ಕು ವರ್ಷಗಳಿಂದ ಭಾರತದ ಸ್ಟಾಕ್ ಮಾರ್ಕೆಟ್ ಅದ್ಭುತವಾಗಿ ಬೆಳೆದು, ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಕಳೆದ ತಿಂಗಳು ಡಿಸೆಂಬರ್ 5ರಂದು ಭಾರತದ ಷೇರು ಮಾರುಕಟ್ಟೆಯ ಒಟ್ಟೂ ಷೇರುಸಂಪತ್ತು 4 ಟ್ರಿಲಿಯನ್ ಡಾಲರ್ ಮೈಲಿಗಲ್ಲನ್ನು ಮೊದಲ ಬಾರಿಗೆ ಮುಟ್ಟಿತ್ತು.

ಇದನ್ನೂ ಓದಿ: Share Market: ಭಾರತದ ಷೇರುಪೇಟೆ ಹೊಸ ಎತ್ತರಕ್ಕೆ; ಸೆನ್ಸೆಕ್ಸ್, ನಿಫ್ಟಿ ಎರಡೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ

ಅತಿಹೆಚ್ಚು ಮೌಲ್ಯದ ಷೇರುಮಾರುಕಟ್ಟೆ ಹೊಂದಿರುವ ದೇಶಗಳು (ವಿಕಿಪೀಡಿಯಾ ಮಾಹಿತಿ)

  1. ಅಮೆರಿಕ: 49.6 ಟ್ರಿಲಿಯನ್ ಡಾಲರ್
  2. ಚೀನಾ: 10 ಟ್ರಿಲಿಯನ್ ಡಾಲರ್
  3. ಜಪಾನ್: 5.47 ಟ್ರಿಲಿಯನ್ ಡಾಲರ್
  4. ಭಾರತ: 4.6 ಟ್ರಿಲಿಯನ್ ಡಾಲರ್
  5. ಹಾಂಕಾಂಗ್: 4 ಟ್ರಿಲಿಯನ್ ಡಾಲರ್
  6. ಫ್ರಾನ್ಸ್: 2.8 ಟ್ರಿಲಿಯನ್ ಡಾಲರ್
  7. ಬ್ರಿಟನ್: 2.8 ಟ್ರಿಲಿಯನ್ ಡಾಲರ್
  8. ಕೆನಡಾ: 2.6 ಟ್ರಿಲಿಯನ್ ಡಾಲರ್
  9. ಸೌದಿ ಅರೇಬಿಯಾ: 2.4 ಟ್ರಿಲಿಯನ್ ಡಾಲರ್
  10. ಜರ್ಮನಿ: 2.28 ಟ್ರಲಿಯನ್ ಡಾಲರ್

ಚೀನಾವನ್ನೂ ಹಿಂದಿಕ್ಕಬಲ್ಲುದೇ ಭಾರತದ ಷೇರುಪೇಟೆ?

ಇತ್ತೀಚಿನ ಕೆಲ ವರ್ಷಗಳಿಂದ ಭಾರತದ ಷೇರು ಮಾರುಕಟ್ಟೆ ಗಣನೀಯ ವೇಗದಲ್ಲಿ ಬೆಳೆಯುತ್ತಿದೆ. ರೀಟೇಲ್ ಹೂಡಿಕೆದಾರರು, ಕಾರ್ಪೊರೇಟ್ ಕಂಪನಿಗಳ ವಿಶ್ವಾಸ ಗಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆರ್ಥಿಕ ಸುಧಾರಣಾ ಕ್ರಮಗಳು, ಆರ್ಥಿಕತೆಯ ಬೆಳವಣಿಗೆ, ಉದ್ಯಮಸ್ನೇಹಿ ವಾತಾವರಣ, ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಇವೆಲ್ಲವೂ ಕೂಡ ಹೂಡಿಕೆಗೆ ಭಾರತ ಪ್ರಶಸ್ತ ಸ್ಥಳವನ್ನಾಗಿ ಪರಿಗಣಿಸುವಂತೆ ಮಾಡಿದೆ.

ಇದನ್ನೂ ಓದಿ: Great Return: ಒಂದು ಲಕ್ಷ ಹಣ ಆರು ತಿಂಗಳಲ್ಲಿ 12 ಲಕ್ಷ ರೂ; ಇದು ಈ ಮಲ್ಟಿಬ್ಯಾಗರ್ ಮ್ಯಾಜಿಕ್

ಕೋವಿಡ್ ನಂತರ ಚೀನಾದ ಸಾಕಷ್ಟು ಬಾರಿ ಲಾಕ್​ಡೌನ್​ಗಳನ್ನು ಮಾಡಿದ್ದು ಅದರ ಆರ್ಥಿಕತೆಗೆ ಘಾಸಿ ಮಾಡಿತ್ತು. ಹಾಗೆಯೇ, ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆ ದುರ್ಬಲಗೊಳ್ಳುವಂತೆ ಮಾಡಿತು. ಇದು ಚೀನಾದ ಷೇರುಪೇಟೆ ದುರ್ಬಲಗೊಳ್ಳುವಂತೆ ಮಾಡಿದೆ. ಹಾಗೆಯೇ, ಜಾಗತಿಕ ರಾಜಕೀಯ ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಚೀನಾ ಬಗ್ಗೆ ನಕಾರಾತ್ಮಕ ಮನೋಭಾವ ಹೆಚ್ಚಾಗಿದೆ.

ಕೆಲವೊಂದು ಬ್ರೋಕರೇಜ್ ಕಂಪನಿಗಳ ಪ್ರಕಾರ 2024ರಲ್ಲಿ ಚೀನಾದ ಷೇರು ಮಾರುಕಟ್ಟೆ ತಿರುಗಿ ನಿಲ್ಲುವ ಸಾಧ್ಯತೆ ಇದೆ. ಭಾರತದಲ್ಲಿ ಷೇರುಪೇಟೆ ಸ್ವಾಭಾವಿಕ ಹಂತ ದಾಟಿ ಅತಿರೇಕ ಮಟ್ಟಕ್ಕೆ ಏರಿದೆ. 2024ರಲ್ಲಿ ಮೌಲ್ಯ ಇಳಿಕೆ (ಕೋರ್ಸ್ ಕರೆಕ್ಷನ್) ಆಗಬಹುದು ಎಂಬ ವಾದ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ