
ನವದೆಹಲಿ, ಆಗಸ್ಟ್ 19: ಅಮೆರಿಕದ ಟ್ಯಾರಿಫ್ ಆರ್ಭಟದ ಮಧ್ಯೆ ಭಾರತ ಮತ್ತು ಚೀನಾ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸದ್ದಿಲ್ಲದೆ ಹತ್ತಿರ ಬರುತ್ತಿವೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಇತ್ತೀಚಿನ ಚೀನಾ ಭೇಟಿ ಫಲಪ್ರದವಾದಂತಿದೆ. ಭಾರತಕ್ಕೆ ಬಹಳ ಅವಶ್ಯಕವಾಗಿರುವ ಕೆಲ ಸರಕುಗಳನ್ನು ಕೊಡಲು ಚೀನಾ (China) ಒಪ್ಪಿದೆ. ರಸಗೊಬ್ಬರ (fertilizers), ವಿರಳ ಭೂ ಖನಿಜ (Rare earth materials), ಟನಲ್ ಬೋರಿಂಗ್ ಮೆಷಿನ್ಗಳನ್ನು (Tunnel Boring Machines) ಭಾರತಕ್ಕೆ ಸರಬರಾಜು ಮಾಡಲು ಚೀನಾ ಒಪ್ಪಿದೆ ಎಂದು ಹೇಳಲಾಗುತ್ತಿದೆ.
ಚೀನಾಗೆ ಹೋಗಿದ್ದ ವೇಳೆ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಭಾರತಕ್ಕೆ ಬಹಳ ಅಗತ್ಯವಾಗಿರುವ ರಸಗೊಬ್ಬರಗಳು, ರೇರ್ ಅರ್ಥ್ ಮಿನರಲ್ಗಳು, ಟನಲ್ ಬೋರಿಂಗ್ ಮೆಷೀನ್ಗಳನ್ನು ಸರಬರಾಜು ಮಾಡುವ ಕುರಿತು ಮಾತನಾಡಿದ್ದರೆನ್ನಲಾಗಿದೆ. ಇದಕ್ಕೆ ಚೀನಾದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ರೈಲು ಹಳಿ ಮೂಲಕ ಸೌರ ವಿದ್ಯುತ್ ಉತ್ಪಾದನೆ; ಪೂರ್ಣ ನವೀಕರಣ ಇಂಧನದತ್ತ ರೈಲ್ವೇಸ್
ಅಮೆರಿಕದ ನೀತಿಗಳು ಭಾರತ ಮತ್ತು ಚೀನಾಗೆ ವಿರುದ್ಧವಾಗಿರಬಹುದು. ಈ ಹಿನ್ನೆಲೆಯಲ್ಲಿ ಈ ಎರಡೂ ದೇಶಗಳು ಸೌಹಾರ್ದಯುತವಾಗಿ ಇರುವ ಅವಶ್ಯಕತೆ ಇದೆ ಎನ್ನುವ ಅಭಿಪ್ರಾಯಕ್ಕೆ ಇಬ್ಬರೂ ಬಂದರೆನ್ನಲಾಗಿದೆ.
ಭಾರತಕ್ಕೆ ಯೂರಿಯಾ, ಎನ್ಪಿಕೆ, ಡಿಎಪಿ ಇತ್ಯಾದಿ ಅಗತ್ಯ ರಸಗೊಬ್ಬರಗಳು, ಟನಲ್ ಬೋರಿಂಗ್ ಮೆಷಿನ್ಗಳು, ಹಾಗೂ ವಿರಳ ಭೂಖನಿಜಗಳನ್ನು ಕೊಡಲು ಚೀನಾ ಒಪ್ಪಿರುವುದು ಬಹಳ ದೊಡ್ಡ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ವಾಹನ ತಯಾರಿಕೆಗೆ ರೇರ್ ಅರ್ಥ್ ವಸ್ತುಗಳು ಬಹಳ ಅವಶ್ಯಕತೆ ಇದೆ. ರಸ್ತೆ ನಿರ್ಮಾಣಕ್ಕೆ ಸುರಂಗಗಳನ್ನು ಕೊರೆಯಲು ಟನಲ್ ಬೋರಿಂಗ್ ಮೆಷಿನ್ಗಳು ಬೇಕು. ಕೃಷಿ ಕ್ಷೇತ್ರಕ್ಕೆ ರಸಗೊಬ್ಬರ ಬೇಕು. ಚೀನಾ ಇತ್ತೀಚೆಗೆ ಇವುಗಳ ರಫ್ತಿಗೆ ನಿರ್ಬಂಧ ಹಾಕಿತ್ತು. ಈಗ ಇವುಗಳನ್ನು ಭಾರತಕ್ಕೆ ಸರಬರಾಜು ಮಾಡಲು ಒಪ್ಪಿದೆ.
ಇದನ್ನೂ ಓದಿ: ‘ಡಮ್ಮಿ ಆಫೀಸು’, ‘ಡಮ್ಮಿ ಸಹೋದ್ಯೋಗಿಗಳು’; ಚೀನಾದಲ್ಲಿ ಹೊಸ ಟ್ರೆಂಡ್
ಎ ಜೈಶಂಕರ್ ಅವರು ತಮ್ಮ ಚೀನಾ ಭೇಟಿ ವೇಳೆ ಗಡಿ ಸಮಸ್ಯೆ ವಿಚಾರವನ್ನು ಪ್ರಸ್ತಾಪಿಸಲಿಲ್ಲ. ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರು ಈ ವಿಚಾರದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದಾಗ ಈ ಗಡಿ ವಿಚಾರವನ್ನು ಪ್ರಸ್ತಾಪಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ