ಮುಖ್ಯ ಆರ್ಥಿಕ ಸಲಹೆಗಾರರಾಗಿ ಮುಂದುವರಿಯಲಿರುವ ಅನಂತನಾಗೇಶ್ವರನ್; ಎರಡು ವರ್ಷ ಅವರ ಅಧಿಕಾರಾವಧಿ ವಿಸ್ತರಣೆ
V Anantha Nageswaran to be CEA for 2 more years: ವಿ ಅನಂತ ನಾಗೇಶ್ವರನ್ ಅವರು ಇನ್ನೂ ಎರಡು ವರ್ಷ ಮುಖ್ಯ ಆರ್ಥಿಕ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. 2022ರ ಜನವರಿಯಲ್ಲಿ ಸಿಇಎ ಆಗಿ ನೇಮಕವಾಗಿದ್ದ ಅವರ ಅಧಿಕಾರಾವಧಿ ಈ ವರ್ಷ ಅಂತ್ಯವಾಗುತ್ತಿದೆ. ಪ್ರಧಾನಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಅನಂತನಾಗೇಶ್ವರನ್ ಅವರನ್ನು ಸಿಇಎ ಆಗಿ ಮುಂದುವರಿಸುವ ನಿರ್ಧಾರ ಮಾಡಿತು. 2027ರ ಮಾರ್ಚ್ 31ರವರೆಗೂ ಅವರು ಸಿಇಎ ಆಗಿರಲಿದ್ದಾರೆ.

ನವದೆಹಲಿ, ಫೆಬ್ರುವರಿ 20: ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ಅವರ ಅಧಿಕಾರಾವಧಿ ಇನ್ನೂ ಎರಡು ವರ್ಷ ವಿಸ್ತರಣೆ ಆಗಿದೆ. 2027ರ ಮಾರ್ಚ್ 31ರವರೆಗೂ ಅವರು ಭಾರತದ ಸಿಇಎ ಆಗಿ ಮುಂದುವರಿಯಲಿದ್ದಾರೆ. 2022ರಲ್ಲಿ ಅವರನ್ನು ಸರ್ಕಾರ ತನ್ನ ಮುಖ್ಯ ಆರ್ಥಿಕ ಸಲಹೆಗಾರರನ್ನಲಾಗಿ ಮೂರು ವರ್ಷಗಳಿಗೆ ನೇಮಕ ಮಾಡಿತ್ತು. 2022ರ ಜನವರಿ 28ರಂದು ಅವರು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ವರ್ಷ ಮಾರ್ಚ್ 31ರವರೆಗೆ ಅವರ ಅಧಿಕಾರಾವಧಿ ಇತ್ತು. ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ವಿ ಅನಂತನಾಗೇಶ್ವನ್ ಅವರನ್ನು ಇನ್ನೂ ಎರಡು ವರ್ಷ ಸಿಇಎ ಆಗಿ ಮುಂದುವರಿಸುವ ನಿರ್ಧಾರ ಮಾಡಿದೆ.
ಸಿಇಎ ಜವಾಬ್ದಾರಿಗಳು ಏನೇನು?
ಭಾರತದ ಮುಖ್ಯ ಆರ್ಥಿಕ ಸಲಹೆಗಾರರು, ಆ ಹುದ್ದೆಯ ಹೆಸರೇ ಸೂಚಿಸುವಂತೆ ಅವರು ಸರ್ಕಾರಕ್ಕೆ ಆರ್ಥಿಕ ವಿಚಾರದಲ್ಲಿ ಸಲಹೆಗಳನ್ನು ನೀಡುತ್ತಾರೆ. ಸರ್ಕಾರದ ಆರ್ಥಿಕ ನೀತಿ ರೂಪಿಸುವ ಕಾರ್ಯದಲ್ಲಿ ಸಿಇಎ ಪಾತ್ರ ಪ್ರಮುಖವಾಗಿರುತ್ತದೆ. ಹಾಗೆಯೇ, ಬಜೆಟ್ ಸಂದರ್ಭದಲ್ಲಿ ನಡೆಸಲಾಗುವ ಆರ್ಥಿಕ ಸಮೀಕ್ಷೆಯೂ ಕೂಡ ಸಿಇಎ ಮಾರ್ಗದರ್ಶನದ ಅಡಿಯಲ್ಲೇ ನಡೆಯುತ್ತದೆ. ದೇಶದ ಪ್ರಸಕ್ತ ಆರ್ಥಿಕ ಸ್ಥಿತಿ ಹೇಗಿದೆ, ಸಕಾರಾತ್ಮಕ ಮತ್ತು ನಕಾರಾತ್ಮಕ ಎನಿಸುವ ಅಂಶಗಳೇನಿವೆ, ಭವಿಷ್ಯದಲ್ಲಿ ಆರ್ಥಿಕತೆಯ ಗತಿ ಹೇಗಿರಬಹುದು, ಯಾವೆಲ್ಲಾ ಶಕ್ತಿ ಬಳಸಿ ಆರ್ಥಿಕತೆಗೆ ಪುಷ್ಟಿ ನೀಡಬಹುದು ಎನ್ನುವುದನ್ನು ಎಕನಾಮಿಕ್ ಸರ್ವೆಯಲ್ಲಿ ತಿಳಿಸಲಾಗುತ್ತದೆ.
ಇದನ್ನೂ ಓದಿ: ಧೂಮಪಾನಿಗಳಿಗೆ ಮತ್ತಷ್ಟು ಬಿಸಿ..! ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಮತ್ತಷ್ಟು ತೆರಿಗೆ ಹಾಕಲು ಸರ್ಕಾರ ಯೋಜನೆ
ಅನಂತ ನಾಗೇಶ್ವರನ್ ಹಿನ್ನೆಲೆ ಏನು?
ತಮಿಳುನಾಡಿನವರಾದ 62 ವರ್ಷದ ವೆಂಕಟರಮಣನ್ ಅನಂತನಾಗೇಶ್ವರನ್ ಅವರು ಮದುರೈನಲ್ಲಿ ಶಾಲೆ ಮತ್ತು ಕಾಲೇಜು ಶಿಕ್ಷಣ ಪಡೆದು ಬಳಿಕ ಅಹ್ಮದಾಬಾದ್ ಐಐಎಂ ಹಾಗು ಅಮೆರಿಕದ ಮಸಾಚುಸೆಟ್ಸ್ ಅಮ್ಹರ್ಸ್ಟ್ನ ಐಸನ್ಬರ್ಕ್ ಮ್ಯಾನೇಜ್ಮೆಂಟ್ ಸ್ಕೂಲ್ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
ಸ್ವಿಸ್ ಯೂನಿಯನ್ ಬ್ಯಾಂಕ್, ಕ್ರೆಡಿಟ್ ಸ್ವೀಸ್ ಸೇರಿದಂತೆ 17 ವರ್ಷ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ್ದರು. ವಿವಿಧ ಭಾರತೀಯ ಕಂಪನಿಗಳ ಮಂಡಳಿಗಳಲ್ಲಿ ಸದಸ್ಯರಾಗಿದ್ದರು. ಆವಿಸ್ಕಾರ್ ಇಂಡಿಯಾ ಮೈಕ್ರೋ ವೆಂಚರ್ ಕ್ಯಾಪಿಟಲ್ ಫಂಡ್ನ ಸಹ-ಸಂಸ್ಥಾಪಕರಾಗಿದ್ದರು. ಸಾರ್ವಜನಿಕ ನೀತಿ ವಿಚಾರದಲ್ಲಿ ಚಿಂತನ ವೇದಿಕೆಯಾದ ತಕ್ಷಶಿಲಾ ಇನ್ಸ್ಟಿಟ್ಯೂಟ್ನ ಸ್ಥಾಪಕರೂ ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ