ಆರ್​ಬಿಐ ಲೆಕ್ಕಾಚಾರ ಮೀರಿಸುವಂತೆ ಭಾರತದ ಆರ್ಥಿಕತೆ ಬೆಳೆಯಲಿದೆ: ಎಸ್​ಬಿಐ ವರದಿಯ ಅನಿಸಿಕೆ

SBI report estimates higher GDP growth for Q1: ಭಾರತದ ಆರ್ಥಿಕ ಬೆಳವಣಿಗೆಯು 2025ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಶೇ. 6.5ರಷ್ಟು ಬೆಳೆಯಬಹುದು ಎಂದು ಆರ್​ಬಿಐ ಅಂದಾಜಿಸಿತ್ತು. ಈಗ ಎಸ್​ಬಿಐನ ಆರ್ಥಿಕ ತಜ್ಞರ ಲೆಕ್ಕಾಚಾರದ ಪ್ರಕಾರ ಈ ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 6.8ರಿಂದ ಶೇ. 7ರಷ್ಟು ಹೆಚ್ಚಬಹುದು. ಆದರೆ, 2025-26ರ ಇಡಿ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.3ರಷ್ಟು ಮಾತ್ರ ಹೆಚ್ಚಬಹುದು ಎಂದು ಎಸ್​ಬಿಐ ನಿರೀಕ್ಷಿಸಿದೆ.

ಆರ್​ಬಿಐ ಲೆಕ್ಕಾಚಾರ ಮೀರಿಸುವಂತೆ ಭಾರತದ ಆರ್ಥಿಕತೆ ಬೆಳೆಯಲಿದೆ: ಎಸ್​ಬಿಐ ವರದಿಯ ಅನಿಸಿಕೆ
ಜಿಡಿಪಿ

Updated on: Aug 22, 2025 | 12:38 PM

ನವದೆಹಲಿ, ಆಗಸ್ಟ್ 22: ಭಾರತದ ಆರ್ಥಿಕ ಬೆಳವಣಿಗೆಯು (GDP growth) ನಿರೀಕ್ಷೆ ಮೀರಿ ವೇಗ ಪಡೆದಿರುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿಯೊಂದು ಹೇಳಿದೆ. ಇದರ ವಿಶ್ಲೇಷಣೆಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.8ರಿಂದ ಶೇ. 7ರ ಆಸುಪಾಸಿನ ದರಲ್ಲಿ ಆಗಬಹುದು ಎಂದಿದೆ. ಆರ್​ಬಿಐ ಮಾಡಿದ ಅಂದಾಜು ಪ್ರಕಾರ ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚುವ ನಿರೀಕ್ಷೆ ಇತ್ತು. ಎಸ್​ಬಿಐ ಲೆಕ್ಕಾಚಾರದ ಪ್ರಕಾರ ಆರ್​ಬಿಐ ಅಂದಾಜಿಗಿಂತಲೂ ಉತ್ತಮ ಆರ್ಥಿಕ ಬೆಳವಣಿಗೆ ಈ ತ್ರೈಮಾಸಿಕದಲ್ಲಿ ಆಗಿರಬಹುದು.

ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಜಿಡಿಪಿ ಬೆಳವಣಿಗೆ ಶೇ. 6.9ರಷ್ಟು ಇರಬಹುದು. ಜಿವಿಎ ಶೇ. 6.5ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ‘ಆರಂಭಿಕ ಅಂದಾಜುಪ್ರಕಾರ ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ಸುಮಾರು ಶೇ. 6.8ರಿಂದ ಶೇ. 7.0ರಷ್ಟು ಇರಬಹುದು’ ಎಂದು ಎಸ್​ಬಿಐ ಅನಾಲಿಸಿಸ್ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಕಿಂಡ್ರಿಲ್​ನಿಂದ ಬೆಂಗಳೂರಿನಲ್ಲಿ ಎಐ ಲ್ಯಾಬ್; ಭಾರತದಲ್ಲಿ 2.25 ಬಿಲಿಯನ್ ಡಾಲರ್ ಹೂಡಿಕೆ

ಇಡೀ ವರ್ಷಕ್ಕೆ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆ?

ಮೊದಲ ಕ್ವಾರ್ಟರ್​ನಲ್ಲಿ ಆರ್​ಬಿಐ ಅಂದಾಜು ಮಾಡಿದ ಶೇ. 6.5ರ ದರಕ್ಕಿಂತಲೂ ಹೆಚ್ಚಿನ ಜಿಡಿಪಿ ಬೆಳವಣಿಗೆ ಆಗಬಹುದು ಎಂದು ಎಸ್​ಬಿಐ ವಿಶ್ಲೇಷಕರು ಹೇಳಿದ್ದಾರಾದರೂ, ಒಟ್ಟಾರೆ ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯು ಕಡಿಮೆ ದಾಖಲಾಗಬಹುದು ಎಂದಿದ್ದಾರೆ.

ಆರ್​ಬಿಐ ಮಾಡಿದ ಅಂದಾಜು ಪ್ರಕಾರ 2025-26ರಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚುವ ನಿರೀಕ್ಷೆ ಇತ್ತು. ಆದರೆ, ಎಸ್​ಬಿಐ ಮಾಡಿದ ಅಂದಾಜು ಪ್ರಕಾರ ಈ ವರ್ಷದ ಆರ್ಥಿಕ ಬೆಳವಣಿಗೆ ಶೇ. 6.3ಕ್ಕೆ ಸೀಮಿತಗೊಳ್ಳಬಹುದು.

ಇದನ್ನೂ ಓದಿ: ಪ್ರಧಾನಿ ಮೋದಿ ದೀಪಾವಳಿ ಗಿಫ್ಟ್ ಇದೇ: ಜಿಎಸ್​ಟಿ ಶೇ 12, 28ರ ಸ್ಲ್ಯಾಬ್‌ ರದ್ದು, 90 ವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ

ಹಣದುಬ್ಬರ ಬಹಳ ಕಡಿಮೆ ಮಟ್ಟದಲ್ಲಿರುವುದರಿಂದ ನಾಮಿನಲ್ ಜಿಡಿಪಿ ಮತ್ತು ರಿಯಲ್ ಜಿಡಿಪಿ ನಡುವಿನ ಅಂತರ ಕಡಿಮೆ ಆಗಿದೆ. ಮೊದಲ ಕ್ವಾರ್ಟರ್​ನಲ್ಲಿ ರಿಯಲ್ ಜಿಡಿಪಿ ಶೇ. 6.5ರಿಂದ ಶೇ. 7.0ರಷ್ಟು ಇರಬಹುದು. ನಾಮಿನಲ್ ಜಿಡಿಪಿ ಶೇ. 8ರಷ್ಟಿರಬಹುದು ಎಂದು ಎಸ್​ಬಿಐ ಅನಾಲಿಸಿಸ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ