AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲ, ಮುಂಬೈ ಅಲ್ಲ, ದಿಲ್ಲಿ ಅಲ್ಲ; ಭಾರತದ ನಂ. 1 ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ?

India's 10 richest districts: ಒಂದು ಪ್ರದೇಶದ ಜನರ ಸರಾಸರಿ ಶ್ರೀಮಂತಿಕೆಯನ್ನು ಜಿಡಿಪಿ ತಲಾದಾಯ ಮೂಲಕ ಅಳೆಯಲಾಗುತ್ತದೆ. ಭಾರತದ ವಿವಿಧ ಜಿಲ್ಲೆಗಳ ಪೈಕಿ ಅತ್ಯಂತ ಶ್ರೀಮಂತ ಜಿಲ್ಲೆ ಎಂದರೆ ಹೈದರಾಬಾದ್ ಗಡಿಯಲ್ಲಿರುವ ರಂಗಾರೆಡ್ಡಿ. ಕರ್ನಾಟಕದ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಟಾಪ್-10 ಪಟ್ಟಿಯಲ್ಲಿವೆ.

ಬೆಂಗಳೂರಲ್ಲ, ಮುಂಬೈ ಅಲ್ಲ, ದಿಲ್ಲಿ ಅಲ್ಲ; ಭಾರತದ ನಂ. 1 ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ?
ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 22, 2025 | 2:08 PM

Share

ನವದೆಹಲಿ, ಆಗಸ್ಟ್ 22: ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಿದೆ. ಆದರೆ, ಜಿಡಿಪಿ ತಲಾದಾಯದಲ್ಲಿ (GDP per capita) ಭಾರತ ಇನ್ನೂ ಬಹಳ ಹಿಂದಿದೆ. ಅಂದರೆ ಸರಾಸರಿ ಶ್ರೀಮಂತಿಕೆ ಕಡಿಮೆ ಇದೆ. 2024-25ರ ಆರ್ಥಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ಭಾರತದೊಳಗೆ ವಿವಿಧ ನಗರ ಅಥವಾ ಜಿಲ್ಲೆಗಳ ಜಿಡಿಪಿ ತಲಾದಾಯ ಎಷ್ಟಿದೆ ಎನ್ನುವ ವರದಿಯನ್ನು ಇಂಡಿಯನ್ ಎಕ್ಸ್​ಪ್ರೆಸ್ ಪ್ರಕಟಿಸಿತ್ತು. ಅದರಲ್ಲಿ ಕೆಲ ಅಚ್ಚರಿಯ ಅಂಶಗಳಿವೆ. ಈ ವರದಿ ಪ್ರಕಾರ ಭಾರತದಲ್ಲಿ ಅತಿಹೆಚ್ಚು ಜಿಡಿಪಿ ತಲಾದಾಯ ಹೊಂದಿರುವ ಜಿಲ್ಲೆ ಎಂದರೆ ಅದು ಬೆಂಗಳೂರಲ್ಲ, ಮುಂಬೈ ಅಲ್ಲ, ದಿಲ್ಲಿ ಅಲ್ಲ, ಹೈದರಾಬಾದ್ ಅಲ್ಲ, ಕೋಲ್ಕತಾ ಅಲ್ಲ, ಚೆನ್ನೈ ಕೂಡ ಅಲ್ಲ. ಅದು ರಂಗಾರೆಡ್ಡಿ ಜಿಲ್ಲೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ 11.46 ಲಕ್ಷ ರೂನಷ್ಟು ಜಿಡಿಪಿ ತಲಾದಾಯ ಹೊಂದಿದೆ. ಭಾರತದಲ್ಲಿರುವ ಜಿಲ್ಲೆಗಳ ಪೈಕಿ ಇದು ಗರಿಷ್ಠ ಜಿಡಿಪಿ ತಲಾದಾಯ. ಭಾರತದ ಸಿಲಿಕಾನ್ ವ್ಯಾಲಿ ಎನ್ನಲಾದ ಬೆಂಗಳೂರು 3ನೇ ಸ್ಥಾನ ಪಡೆದಿದೆ. ವಾಣಿಜ್ಯ ನಗರಿ ಎನಿಸಿದ ಮುಂಬೈ 9ನೇ ಸ್ಥಾನದಲ್ಲಿರುವುದು ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯು ಟಾಪ್-10ನಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ.

ಇದನ್ನೂ ಓದಿ: ಕಿಂಡ್ರಿಲ್​ನಿಂದ ಬೆಂಗಳೂರಿನಲ್ಲಿ ಎಐ ಲ್ಯಾಬ್; ಭಾರತದಲ್ಲಿ 2.25 ಬಿಲಿಯನ್ ಡಾಲರ್ ಹೂಡಿಕೆ

ಭಾರತದ ಟಾಪ್-10 ಶ್ರೀಮಂತ ಜಿಲ್ಲೆಗಳು

  1. ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ: 11.46 ಲಕ್ಷ ರೂ ತಲಾದಾಯ
  2. ಗುರುಗ್ರಾಮ್, ಹರ್ಯಾಣ: 9.05 ಲಕ್ಷ ರೂ ತಲಾದಾಯ
  3. ಬೆಂಗಳೂರು ನಗರ, ಕರ್ನಾಟಕ: 8.93 ಲಕ್ಷ ರೂ ತಲಾದಾಯ
  4. ಗೌತಮ್ ಬುದ್ಧ ನಗರ್, ಉತ್ತರಪ್ರದೇಶ: 8.48 ಲಕ್ಷ ರೂ ತಲಾದಾಯ
  5. ಸೋಲನ್ ಜಿಲ್ಲೆ, ಹಿಮಾಚಲಪ್ರದೇಶ: 8.10 ಲಕ್ಷ ರೂ ತಲಾದಾಯ
  6. ಗೋವಾ ಉತ್ತರ ಮತ್ತು ದಕ್ಷಿಣ: 7.63 ಲಕ್ಷ ರೂ ತಲಾದಾಯ
  7. ಗ್ಯಾಂಗ್​ಟಾಕ್, ನಾಮ್ಚಿ, ಸಿಕ್ಕಿಂ: 7.46 ಲಕ್ಷ ರೂ ತಲಾದಾಯ
  8. ದಕ್ಷಿಣ ಕನ್ನಡ, ಕರ್ನಾಟಕ: 6.69 ಲಕ್ಷ ರೂ ತಲಾದಾಯ
  9. ಮುಂಬೈ, ಮಹಾರಾಷ್ಟ್ರ: 6.57 ಲಕ್ಷ ರೂ ತಲಾದಾಯ
  10. ಅಹ್ಮದಾಬಾದ್, ಗುಜರಾತ್: 6.54 ಲಕ್ಷ ರೂ ತಲಾದಾಯ

ಈ ಮೇಲಿನ ಪಟ್ಟಿಯಲ್ಲಿ ಬಹಳ ಅಚ್ಚರಿ ಹೆಸರುಗಳು ಕಂಡಿದ್ದು ಹಿಮಾಚಲಪ್ರದೇಶದ ಸೋಲನ್ ಜಿಲ್ಲೆ ಮತ್ತು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯದ್ದು. ಸೋಲನ್ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆ ಮತ್ತು ಫಾರ್ಮಾ ಉದ್ಯಮಗಳು ಸಾಕಷ್ಟು ನೆಲಸಿವೆ. ಹೀಗಾಗಿ, ದೇಶ ಅತಿ ಸಮೃದ್ಧ ನಗರಗಳ ಸಾಲಿಗೆ ಅದು ಸೇರುತ್ತದೆ. ನಂಬರ್ ಎನಿಸಿರುವ ರಂಗಾರೆಡ್ಡಿ ಜಿಲ್ಲೆ ಹೈದರಾಬಾದ್ ಬಗಲಿನಲ್ಲೇ ಇದೆ. ಇಲ್ಲಿ ಸಾಲುಸಾಲು ಐಟಿ ಕಂಪನಿಗಳು ನೆಲಸಿವೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್

ಇನ್ನು, ಗುರುಗ್ರಾಮ್ ಮತ್ತು ಗೌತಮ್ ಬುದ್ಧ ನಗರ್ ಜಿಲ್ಲೆಗಳು ಈ ಪಟ್ಟಿಯಲ್ಲಿರುವುದು ಕೆಲವರಿಗೆ ಅಚ್ಚರಿ ಎನಿಸಿರಬಹುದು. ಆದರೆ, ಇವೆರಡು ಜಿಲ್ಲೆಗಳ ಅನೇಕ ಭಾಗಗಳು ಗ್ರೇಟರ್ ನೋಯ್ಡಾ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ರಾಷ್ಟ್ರ ರಾಜಧಾನಿ ದೆಹಲಿಯ ಸುತ್ತಮುತ್ತಲಿರುವ ಪ್ರದೇಶಗಳಿವು. ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ್, ಗೌತಮ್ ಬುದ್ಧ ನಗರ್ ಇತ್ಯಾದಿ ಪ್ರದೇಶಗಳಲ್ಲಿ ಬಹಳಷ್ಟು ಕೈಗಾರಿಕೆ ಮತ್ತು ಉದ್ದಿಮೆಗಳು ನೆಲಸಿವೆ.

ಈ ಮೇಲಿನ ಟಾಪ್-10 ಪಟ್ಟಿಯಲ್ಲಿ ಒಂದೇ ರಾಜ್ಯದ ಎರಡು ನಗರ ಅಥವಾ ಜಿಲ್ಲೆಗಳು ಕಂಡು ಬಂದಿದ್ದು ಕರ್ನಾಟಕದ್ದು ಮಾತ್ರವೇ. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದರು ಚಟುವಟಿಕೆ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಯು ಅದಕ್ಕೆ ಪ್ರಮುಖ ಆದಾಯ ಮೂಲವೆನಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ