Indian Stock Market | ಒಂದೇ ವಾರದಲ್ಲಿ ಟಾಪ್ 9 ಕಂಪೆನಿಗಳ ಮೌಲ್ಯ 2.19 ಲಕ್ಷ ಕೋಟಿ ರೂ. ಇಳಿಕೆ
ಕಳೆದ ವಾರ (ಫೆ.22ರಿಂದ 26ರ ಮಧ್ಯೆ) ಭಾರತದ 10 ಅತ್ಯಂತ ಮೌಲ್ಯಯುತ ಕಂಪೆನಿಗಳ ಪೈಕಿ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ ₹ 2,19,920.71 ಕೋಟಿ ಕಡಿಮೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರದ ಬಜೆಟ್ ಮೊತ್ತವೇ ₹ 2.37 ಲಕ್ಷ ಕೋಟಿ.
ಕಳೆದ ವಾರ (ಫೆಬ್ರವರಿ 22ರಿಂದ 26ರ ಮಧ್ಯೆ) ಭಾರತದ ಷೇರು ಮಾರ್ಕೆಟ್ನಲ್ಲಿ ಹೂಡಿಕೆದಾರರು ಭಾರೀ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ. ಅತ್ಯಂತ ಮೌಲ್ಯಯುತ 10 ಕಂಪೆನಿಗಳ ಪೈಕಿ 9 ಕಂಪೆನಿಗಳು ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 2,19,920.71 ಕೋಟಿ ರೂಪಾಯಿ (₹ 2.19 ಲಕ್ಷ ಕೋಟಿ) ಕಳೆದುಕೊಂಡಿವೆ. ಇದು ಒಂದೇ ವಾರದಲ್ಲಿ ಇಳಿಕೆ ಆಗಿರುವ ಮೊತ್ತ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರದ ಬಜೆಟ್ ಮೊತ್ತವೇ 2.37 ಲಕ್ಷ ಕೋಟಿ ರೂಪಾಯಿ ಇತ್ತು. ಅಂದರೆ, ಕರ್ನಾಟಕ ರಾಜ್ಯದ ಒಂದು ವರ್ಷದ ಬಜೆಟ್ ಮೊತ್ತಕ್ಕೆ ಇಪ್ಪತ್ತು ಸಾವಿರ ಕೋಟಿ ರೂಪಾಯಿ ಕಡಿಮೆ ಹಣ ಒಂದೇ ವಾರದಲ್ಲಿ ಷೇರು ಮಾರ್ಕೆಟ್ನಲ್ಲಿ ಕೇವಲ ಹತ್ತು ಕಂಪೆನಿಗಳು ಕಳೆದುಕೊಂಡಿವೆ. ಸೆನ್ಸೆಕ್ಸ್ ಸೂಚ್ಯಂಕ ಶೇ 3ಕ್ಕೂ ಹೆಚ್ಚು ಕುಸಿತ ಕಂಡಿದೆ.
ಟಾಪ್ 10 ಮೌಲ್ಯಯುತ ಕಂಪೆನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ ಗಳಿಕೆ ಕಂಡಿದೆ. ಇನ್ನು ನಷ್ಟದ ವಿಚಾರಕ್ಕೆ ಬಂದರೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮಾರುಕಟ್ಟೆ ಮೌಲ್ಯ 81,506.34 ಕೋಟಿ ರೂ. ಇಳಿಕೆಯಾಗಿ, ಒಟ್ಟಾರೆ ಮೌಲ್ಯ 10,71,263.77 ಕೋಟಿಗೆ ತಲುಪಿದೆ.
ಯಾವ ಕಂಪೆನಿಯ ಮೌಲ್ಯ ಎಷ್ಟು ಕಡಿಮೆ
ಎಚ್ಡಿಎಫ್ಸಿ ಬ್ಯಾಂಕ್- ₹ 2,202.12 ಕೋಟಿ, ಐಸಿಐಸಿಐ ಬ್ಯಾಂಕ್ ₹ 18,098.57 ಕೋಟಿ, ಹಿಂದೂಸ್ತಾನ್ ಯುನಿಲಿವರ್ ₹ 11,536.32, ಎಚ್ಡಿಎಫ್ಸಿ ₹ 35,389.88, ಇನ್ಫೋಸಿಸ್ ₹ 16,613.57 ಕೋಟಿ, ಬಜಾಜ್ ಫೈನಾನ್ಸ್ ₹ 15,172.46 ಕೋಟಿ, ಕೊಟಕ್ ಮಹೀಂದ್ರಾ ಬ್ಯಾಂಕ್ ₹ 30,695.43 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ₹ 8,166.02 ಕೋಟಿ.
ಷೇರುಪೇಟೆ ಬಂಡವಾಳ ಗಾತ್ರದ ಮಾನದಂಡದಲ್ಲಿ ಟಾಪ್ 10 ಎನಿಸಿರುವ ಕಂಪೆನಿಗಳ ಪೈಕಿ ಮೌಲ್ಯ ಏರಿಕೆ ಆಗಿರುವುದು ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಮಾತ್ರ. ಕಂಪೆನಿಯ ಮೌಲ್ಯ ₹ 2,092.01 ಕೋಟಿ ಹೆಚ್ಚಾಗಿದೆ. ಒಟ್ಟಾರೆ ಮಾರುಕಟ್ಟೆ ಮೌಲ್ಯ ₹ 13,21,044.35 ಕೋಟಿಗೆ ತಲುಪಿದೆ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
Published On - 2:37 pm, Sun, 28 February 21