Inflation: ಭಾರತದಲ್ಲಿ ಹಣದುಬ್ಬರ ಇಳಿಕೆ; ಜನವರಿ ತಿಂಗಳ ಇನ್ಫ್ಲೇಶನ್ ಶೇ. 5.1; ಸರ್ಕಾರದಿಂದ ದತ್ತಾಂಶ ಬಿಡುಗಡೆ
Retail Inflation Down To 5.1pc: ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ ಫೆ. 12ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2024ರ ಜನವರಿ ತಿಂಗಳಲ್ಲಿ ಹಣದುಬ್ಬರ ಶೇ. 5.1ರಷ್ಟಿದೆ. ಹಣದುಬ್ಬರ 2023ರ ಡಿಸೆಂಬರ್ನಲ್ಲಿ ಶೇ. 5.69, 2023ರ ಜನವರಿಯಲ್ಲಿ ಶೇ. 6.52ರಷ್ಟಿತ್ತು. ವಿವಿಧ ಆಹಾರ ಪದಾರ್ಥಗಳ ಬೆಲೆಗಳು ಜನವರಿಯಲ್ಲಿ ಕಡಿಮೆ ಆಗಿದ್ದರಿಂದ ಹಣದುಬ್ಬರ ತುಸು ಮಂದಗೊಳ್ಳಲು ಕಾರಣವಾಗಿದೆ.

ನವದೆಹಲಿ, ಫೆಬ್ರುವರಿ 12: ಜನವರಿ ತಿಂಗಳಲ್ಲಿ ಭಾರತದ ರೀಟೇಲ್ ಹಣದುಬ್ಬರ (Retail Inflation) ಕಡಿಮೆ ಆಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಇಂದು ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಗ್ರಾಹಕ ಬೆಲೆ ಅನುಸೂಚಿ (CPI) ಆಧಾರಿತ ರೀಟೇಲ್ ಇನ್ಫ್ಲೇಶನ್ ಜನವರಿಯಲ್ಲಿ ಶೇ. 5.1ರಷ್ಟು ಇದೆ. ಹಿಂದಿನ ತಿಂಗಳು ಮತ್ತು ಹಿಂದಿನ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಹಣದುಬ್ಬರ ಏರಿಕೆಯ ಪ್ರಮಾಣ ಕಡಿಮೆ ಆಗಿದೆ. 2023ರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69 ಇತ್ತು. 2023ರ ಜನವರಿ ತಿಂಗಳಲ್ಲಿ ಶೇ. 6.52ರಷ್ಟಿತ್ತು. ಶೇ. 5.1ರಷ್ಟು ಹಣದುಬ್ಬರವು ಕಳೆದ ಮೂರು ತಿಂಗಳಲ್ಲೇ ಕನಿಷ್ಠ ದರ ಎನಿಸಿದೆ.
ರೀಟೇಲ್ ಹಣದುಬ್ಬರದಲ್ಲಿ ಆಹಾರ ಗುಂಪಿನ ಹಣದುಬ್ಬರ ಶೇ. 7.58ರಷ್ಟಿದೆ. ಹಿಂದಿನ ತಿಂಗಳಲ್ಲಿ (2023ರ ಡಿಸೆಂಬರ್) ಇದು ಶೇ. 9.53ರಷ್ಟಿತ್ತು. ಹಣ್ಣು, ತರಕಾರಿ, ಬೇಳೆ ಕಾಳು, ಸಾಂಬಾರ್ ಪದಾರ್ಥಗಳ ಬೆಲೆ ಇಳಿಕೆ ಆದ ಪರಿಣಾಮ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಬಟ್ಟೆ, ಪಾದರಕ್ಷೆ, ಮನೆ ಇತ್ಯಾದಿ ಬೆಲೆಗಳೂ ತುಸು ಇಳಿದಿದ್ದು ಜನವರಿಯಲ್ಲಿ ಹಣದುಬ್ಬರ ಏರಿಕೆ ಮಂದಗೊಳ್ಳಲು ಕಾರಣವಾಗಿದೆ.
ಇದನ್ನೂ ಓದಿ: ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ವರ್ಷಕ್ಕೆ ಕೇವಲ 436 ರೂ ಪ್ರೀಮಿಯಮ್; 2 ಲಕ್ಷ ರೂ ಕವರೇಜ್
ಹಣದುಬ್ಬರವನ್ನು ಶೇ. 4ಕ್ಕೆ ತರುವುದು ಆರ್ಬಿಐನ ಗುರಿಯಾಗಿದೆ. ಹಾಗೆಯೇ, ಶೇ. 2ರ ಆಸುಪಾಸು ಮಿತಿ ಹೆಚ್ಚಿಸಲಾಗಿದೆ. ಅಂದರೆ, ಹಣದುಬ್ಬರದ ತಾಳಿಕೆ ಮಿತಿಯನ್ನು ಶೇ. 2ರಿಂದ ಶೇ. 6 ಎಂದು ಆರ್ಬಿಐ ಗುರಿ ಇಟ್ಟಿದೆ. ಈ ಸಂಖ್ಯೆಯೊಳಗೆ ಹಣದುಬ್ಬರ ಇರಬೇಕು ಎಂಬುದು ಅದರ ಟಾರ್ಗೆಟ್. ಕಳೆದ ಕೆಲ ತಿಂಗಳುಗಳಿಂದ ಹಣದುಬ್ಬರ ಇದೇ ಮಿತಿಯೊಳಗೆ ಇದೆ.
2024-25ರ ಹಣಕಾಸು ವರ್ಷದ ನಾಲ್ಕು ಕ್ವಾರ್ಟರ್ಗಳಲ್ಲಿ ಹಣದುಬ್ಬರ ಕ್ರಮವಾಗಿ ಶೇ. 5, ಶೇ. 4, ಶೇ. 4.6 ಮತ್ತು ಶೇ. 4.7ರಷ್ಟು ಇರಬಹುದು ಎಂಬುದು ಆರ್ಬಿಐ ಮಾಡಿರುವ ಅಂದಾಜು. ಇದು ಸರಿಯಾಗಿ ಮಳೆಯಾದರೆ ಇರುವ ಪರಿಸ್ಥಿತಿ. ಒಂದು ವೇಳೆ ಅತಿವೃಷ್ಟಿಯೋ ಅಥವಾ ಅನಾವೃಷ್ಟಿಯೋ ಆಗಿಹೋದರೆ ಆಹಾರ ಬೆಲೆ ಹೆಚ್ಚಾಗಿ, ಅದರ ಪರಿಣಾಮವಾಗಿ ಹಣದುಬ್ಬರವೂ ತೀವ್ರವಾಗಿ ಏರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Mon, 12 February 24