
ನವದೆಹಲಿ, ಸೆಪ್ಟೆಂಬರ್ 12: ಭಾರತದ ರೀಟೇಲ್ ಹಣದುಬ್ಬರ ದರವು (Retail inflation) ಆಗಸ್ಟ್ ತಿಂಗಳಲ್ಲಿ ಶೇ. 2.07ಕ್ಕೆ ಏರಿದೆ. ಜುಲೈ ತಿಂಗಳಲ್ಲಿ ಅದು ಶೇ. 1.55ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಆಗಸ್ಟ್ನಲ್ಲಿ ಬೆಲೆ ಏರಿಕೆ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಹೆಚ್ಚಿನ ಆರ್ಥಿಕ ತಜ್ಞರು ಆಗಸ್ಟ್ನಲ್ಲಿ ಹಣದುಬ್ಬರ ದರ ಶೇ. 2.10ರಷ್ಟಿರಬಹುದು ಎಂದು ಅಂದಾಜು ಮಾಡಿದ್ದರು. ಆ ಅಂದಾಜಿಗೆ ಸಮೀಪವೇ ಹಣದುಬ್ಬರ ಇದೆ.
ಈಗ್ಗೆ ಕೆಲ ತಿಂಗಳ ಹಿಂದೆ ಹಣದುಬ್ಬರ ದರ ಲೆಕ್ಕಕ್ಕೆ ಹೊಸ ಬೇಸ್ ನಿಯೋಜಿಸಲಾಗಿತ್ತು. ಅದರ ಪರಿಣಾಮವಾಗಿ ಕೆಲ ತಿಂಗಳಿಂದ ಹಣದುಬ್ಬರ ಬಹಳ ಕಡಿಮೆಗೊಂಡಿದೆ. ಈಗ ಆಗಸ್ಟ್ ತಿಂಗಳಿಂದ ಈ ಬೇಸ್ ಎಫೆಕ್ಟ್ ಗೌಣಗೊಳ್ಳುತ್ತಿದೆ. ಇದರ ಜೊತೆಗೆ, ಆಹಾರ ಬೆಲೆಗಳಲ್ಲಿ ಏರಿಕೆಯೂ ಆಗತೊಡಗಿದೆ. ಈ ಕಾರಣಕ್ಕೆ ಆಗಸ್ಟ್ ತಿಂಗಳ ರೀಟೇಲ್ ಇನ್ಫ್ಲೇಶನ್ ಶೇ. 2ರ ಗಡಿ ದಾಟಿ ಮೇಲೆ ಏರಿದೆ.
ಹಣದುಬ್ಬರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಆಹಾರ ಹಣದುಬ್ಬರವು ಜುಲೈನಲ್ಲಿ ಶೇ. 1.76ರಷ್ಟು ಕುಸಿದಿತ್ತು. ಆಗಸ್ಟ್ ತಿಂಗಳಲ್ಲಿ ಇದು ಇಳಿದಿರುವುದು ಶೇ. 0.69 ಮಾತ್ರವೇ. ಇಂಧನ, ವಿದ್ಯುತ್ ದರಗಳು ಶೇ. 2.43ರಷ್ಟು ಏರಿವೆ. ತರಕಾರಿ ಬೆಲೆಗಳು ಶೇ. 15.92ರಷ್ಟು ಕಡಿಮೆಗೊಂಡಿವೆ.
ಇದನ್ನೂ ಓದಿ: ಟ್ರೇಡಿಂಗ್ ತುಂಬಾ ಗೋಜಲು ಅನಿಸುತ್ತಾ? ನಿತಿನ್ ಕಾಮತ್ ಅವರ ಈ ಟ್ರಿಕ್ ಉಪಯೋಗಿಸಿ
ಹಣದುಬ್ಬರವನ್ನು ಶೇ. 4ರಷ್ಟು ಕಾಪಾಡಿಕೊಂಡು ಹೋಗಬೇಕೆಂದು ಆರ್ಬಿಐಗೆ ಸರ್ಕಾರ ಗುರಿ ಕೊಟ್ಟಿದೆ. ಈ ನಿಟ್ಟಿನಲ್ಲಿ ತಾಳಿಕೆ ಮಿತಿಯಾಗಿ ಶೇ. 2-6 ಅನ್ನು ನಿಗದಿ ಮಾಡಿದೆ. ಯಾವುದೇ ಮೂರು ತ್ರೈಮಾಸಿಕ ಅವಧಿಗಳಲ್ಲಿ ಸತತವಾಗಿ ಹಣದುಬ್ಬರು ಈ ತಾಳಿಕೆ ಮಿತಿಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕೆಂದೂ ಆರ್ಬಿಐಗೆ ಸರ್ಕಾರ ಸೂಚನೆ ನೀಡಿದೆ. ಈಗ್ಗೆ ಸತತ ಎಂಟು ತಿಂಗಳಿಂದಲೂ ಹಣದುಬ್ಬರವು ಈ ತಾಳಿಕೆ ಮಿತಿಯೊಳಗೇ ಇರುವುದು ವಿಶೇಷ.
ಆಗಸ್ಟ್ ತಿಂಗಳಲ್ಲಿ ಸಹಜಕ್ಕಿಂತ ಹೆಚ್ಚಿನ ಮಳೆಯಾಗಿದೆ. ಸೆಪ್ಟೆಂಬರ್ನಲ್ಲೂ ಕೂಡ ನಿರೀಕ್ಷೆಮೀರಿದಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ರೈತರ ಬೆಳೆಗಳ ಇಳುವರಿ ಕಡಿಮೆಗೊಳ್ಳಬಹುದು. ಆಹಾರ ಬೆಲೆಗಳ ಏರಿಕೆಗೆ ಕಾರಣವಾಗಬಹುದು.
ಇದನ್ನೂ ಓದಿ: Janaushadhi centres: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನೌಷಧಿ ಕೇಂದ್ರಗಳಿಗೆ ನಿಯಮ ಸಡಿಲ
ಇದೇ ವೇಳೆ, ಜಿಎಸ್ಟಿ ಕಡಿತದ ಪರಿಣಾಮವೂ ಕೆಲಸ ಮಾಡಲಿದ್ದು, ಹಣದುಬ್ಬರ ಏರಿಕೆಗೆ ತಡೆಯಾಗಿ ಇದು ನಿಲ್ಲಬಹುದು. ಹೀಗಾಗಿ, ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 3ಕ್ಕಿಂತ ಒಳಗೇ ಇರಬಹುದಾದ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ