AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಜಪಾನ್ ಉದ್ಯಮಿಗಳಿಗೆ ಸಚಿವ ಮುರುಗೇಶ್ ನಿರಾಣಿ ಆಹ್ವಾನ

ಸಚಿವ ಡಾ. ಮುರುಗೇಶ ಆರ್ ನಿರಾಣಿ ನೇತೃತ್ವದ ನಿಯೋಗ ಜಪಾನ್‌ನಲ್ಲಿ ಕೈಗೊಂಡಿರುವ ಮೂರು ದಿನಗಳ ರೋಡ್‌ಶೋ ವೇಳೆ ಹಲವು ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ, ಹೂಡಿಕೆದಾರರ ಸಮಾವೇಶಕ್ಕೆ ಔಪಚಾರಿಕ ಆಹ್ವಾನ ನೀಡಿದರು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಜಪಾನ್ ಉದ್ಯಮಿಗಳಿಗೆ ಸಚಿವ ಮುರುಗೇಶ್ ನಿರಾಣಿ ಆಹ್ವಾನ
ಜಪಾನ್‌ ಕಂಪನಿಗಳಿಗೆ ನಿರಾಣಿ ಆಹ್ವಾನ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 10, 2022 | 10:56 AM

Share

ಟೋಕಿಯೋ: ನವೆಂಬರ್‌ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ (Investors)  ಸಮಾವೇಶದ ಅಂತಾರಾಷ್ಟ್ರೀಯ ರೋಡ್‌ಶೋನ ಭಾಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ನೇತೃತ್ವದ ನಿಯೋಗ ಜಪಾನ್‌ (Japanese) ನಲ್ಲಿ ಕೈಗೊಂಡಿರುವ ಮೂರು ದಿನಗಳ ರೋಡ್‌ಶೋ ವೇಳೆ ಹಲವು ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ, ಹೂಡಿಕೆದಾರರ ಸಮಾವೇಶಕ್ಕೆ ಔಪಚಾರಿಕ ಆಹ್ವಾನ ನೀಡಿದ್ದಾರೆ. ಟೋಕಿಯೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಟೊಯೊಟಾ, ಸುಜುಕಿ ಮೋಟಾರ್ ಕಾರ್ಪೊರೇಷನ್, ಮಿಟ್ಸುಯಿ, ಮೆರ್ಕರಿ, ಜೆಟ್ರೊ, ಹಿಟಾಚಿ, ಎನ್‌ಇಸಿ ಕಾರ್ಪ್‌ನ ಪ್ರತಿನಿಧಿಗಳನ್ನು ಸಚಿವ ನಿರಾಣಿ ಹಾಗೂ ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ ಅವರು ಸೋಮವಾರ ಹಾಗೂ ಮಂಗಳವಾರ ಭೇಟಿಯಾದರು.

ಕಳೆದ ಮೂರು ದಿನಗಳಿಂದ ಜಪಾನ್ ರಾಜಧಾನಿ ಟೋಕಿಯೋ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿರುವ ನಿರಾಣಿಯವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ಮನವರಿಕೆ ಮಾಡಿ ಕೊಟ್ಟಿದ್ದಾರೆ. ವಿವಿಧ ಕಂಪನಿಗಳು ಹಾಗೂ ಅದರ ಮುಖ್ಯಸ್ಥರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿರುವ ನಿರಾಣಿಯವರು ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಸಾಸಿರುವ ಪ್ರಗತಿಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: 19510 ಉದ್ಯೋಗ ಸೃಷ್ಟಿ! ಒಟ್ಟು 61 ಯೋಜನೆಗಳು, 3829 ಕೋಟಿ ರೂ ಬಂಡವಾಳ ಹೂಡಿಕೆಗೆ ಅನುಮೋದನೆ- ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಕಟ

ಕರ್ನಾಟಕ ಸರ್ಕಾರ ಕೈಗಾರಿಕೆಗಳ ಬೆಳವಣಿಗೆ ಮತ್ತು ಉತ್ತೇಜನಕ್ಕೆ ಜಾರಿ ಮಾಡಿರುವ 2020-25ರ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿಯಾಗಿದ್ದು, ವಿಶ್ವದ ಮುಂಚೂಣಿಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ ಎಂದು ಮನವರಿಕೆ ಮಾಡಿಕೊಟ್ಟರು. ರಕ್ಷಣೆ, ಆಹಾರ ಸಂಸ್ಕರಣೆ, ಬಾಹ್ಯಾಕಾಶ, ಐಟಿಬಿಟಿ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಬಂಡವಾಳ ಹೂಡುವ ಉದ್ಯಮಿಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲಿದೆ ಎಂದು ಉದ್ದಿಮೆದಾರರಿಗೆ ನಿರಾಣಿಯವರು ಅಭಯ ನೀಡಿದರು.

ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ಜಪಾನ್‍ಗೆ ಸಂಬಂಸಿದಂತೆ, ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್‍ಶಿಪ್ ಸ್ಥಾಪಿಸಲಾಗಿದೆ. ಅದಕ್ಕಾಗಿ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು ಎಂದು ನಿರಾಣಿಯವರು ಭರವಸೆ ನೀಡಿದರು.

ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.42 ಎಂದು ಅವರು ವಿವರಿಸಿದರು. ಬೆಂಗಳೂರು ಮಾತ್ರವಲ್ಲದೆ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿಘಿ, ಧಾರವಾಡ, ಕಲಬುರಗಿ ಅದೇ ರೀತಿ 3ನೇ ಹಂತದ ನಗರಗಳಾದ ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಬಾಗಲಕೋಟೆ ಸೇರಿದಂತೆ ಎಲ್ಲಾ ಕಡೆ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಉದ್ಯಮಿಗಳಿಗೆ ನಮ್ಮ ಸರ್ಕಾರ ಸದಾ ಬೆಂಗಾವಲಿಗೆ ಇರುತ್ತದೆ ಎಂದು ಉದ್ಯಮಿಗಳಿಗೆ ರಾಜ್ಯ ನಿಯೋಗ ಆಶ್ವಾಸನೆ ನೀಡಿದೆ. ಈ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ವಾಣಿಜ್ಯ) ಮನೋಜ್ ನೇಗಿ ಉಪಸ್ಥಿತರಿದ್ದರು.

‌ಭೇಟಿ ಮಾಡಿದ ಕಂಪನಿಗಳ ವಿವರ

ಟೊಯೊಟೊ:

ಟೊಯೊಟಾ ಗ್ರೂಪ್‌ನ ಗ್ಲೋಬಲ್ ಎಕ್ಸ್‌ಟರ್ನಲ್ ಅಫೇರ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಸೌರಿ ತ್ಸುಚಿಯಾ ಹಾಗೂ ಗ್ರೂಪ್‌ ಮ್ಯಾನೇಜರ್‌ ತಕಾಕಾ ಕುಬೋ ಅವರನ್ನು ನಿರಾಣಿ ನೇತೃತ್ವದ ನಿಯೋಗ ಭೇಟಿ ಮಾಡಿತು. ಜಪಾನಿನ ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆ ಟೊಯೊಟಾ ಮೋಟಾರ್ ಕಾರ್ಪೊರೇಷನ್, ವರ್ಷಕ್ಕೆ ಸುಮಾರು 10 ಮಿಲಿಯನ್ ವಾಹನಗಳನ್ನು ಉತ್ಪಾದಿಸುತ್ತದೆ. ಟೊಯೋಟಾ ಇಂಡಸ್ಟ್ರೀಸ್, ಟೊಯೋಟಾ ಮೋಟಾರ್, ಮತ್ತು ಐಚಿ ಸ್ಟೀಲ್, ಟೊಯೊಟಾ ಆಟೋ ಬಾಡಿ, ಟೊಯೊಟಾ ಬೊಶೋಕು, ಟೊಯೊಟಾ ಸೆಂಟ್ರಲ್ ಆರ್​ ಮತ್ತು ಡಿ, ಮತ್ತು ಟೊಯೊಟಾ ಹೌಸಿಂಗ್ ಕಾರ್ಪೊರೇಷನ್‌- ಇವು ಟೊಯೋಟಾ ಗ್ರೂಪ್‌ನ 17 ಪ್ರಮುಖ ಕಂಪನಿಗಳನ್ನು ಹೊಂದಿದೆ.

ಮೆರ್ಕರಿ:

ಮೆರ್ಕರಿಯ ಸಿಟಿಓ ಕೆನ್ ವಕಾಸಾ, ಮೆರ್ಕರಿ ಮಂಡಳಿ ನಿರ್ದೇಶಕರಾದ ಜುನಿಚಿ ವೋಜಾಕಿ ಅವರು ಸಚಿವ ನಿರಾಣಿ ಅವರನ್ನು ಭೇಟಿಯಾದರು. ಮೆರ್ಕರಿ ಜಪಾನಿನ ಪ್ರಮುಖ ಇ-ಕಾಮರ್ಸ್ ಕಂಪನಿಯಾಗಿದ್ದು, ಅದರ ಮುಖ್ಯ ಉತ್ಪನ್ನ ಮೆರ್ಕರಿಯ ಮಾರ್ಕೆಟ್‌ ಅಪ್ಲಿಕೇಶನ್. ಇದರ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ತ್ವರಿತವಾಗಿ ವಸ್ತುಗಳ ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ. ಇದಲ್ಲದೇ, ಕ್ರಿಪ್ಟೋ-ಅಸ್ಸೆಟ್‌ ಮತ್ತು ಬ್ಲಾಕ್‌ಚೈನ್ ವ್ಯವಹಾರ ಮತ್ತು ಲಾಜಿಸ್ಟಿಕ್ಸ್ ಸೇವೆಯನ್ನೂ ಒದಗಿಸುತ್ತದೆ.

ಸುಜುಕಿ ಮೋಟಾರ್ ಕಾರ್ಪೊರೇಶನ್‌:

ಸುಜುಕಿ ಮೋಟಾರ್ ಕಾರ್ಪೊರೇಶನ್ ಜಪಾನಿನ ಪ್ರಮುಖ ಮೋಟಾರ್‌ ವಾಹನ ತಯಾರಿಕಾ ಕಂಪನಿಯಾಗಿದ್ದು ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಇಂಡಿಯಾ ಆಟೋಮೊಬೈಲ್ ಡಿಪಾರ್ಟ್ಮೆಂಟ್‌ನ ಪ್ರಧಾನ ವ್ಯವಸ್ಥಾಪಕ ಹಿಡಕಿ ತಗುಚಿ, ನಿರ್ದೇಶಕ ಮತ್ತು ಹಿರಿಯ ವ್ಯವಸ್ಥಾಪಕ ಕೆಂಜಿ ಸೈಟೊ, ಕಂಪನಿಯ ಪಬ್ಲಿಕ್‌ ಆಫೇರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಕಝುಹಿರೋ ಹಟ್ಟೋರಿ ಅವರನ್ನು ಸಚಿವರ ನೇತೃತ್ವದ ನಿಯೋಗ ಭೇಟಿ ಮಾಡಿತು.

ಮಿಟ್ಸುಯಿ:

ಮಿಟ್ಸುಯಿ ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಯೂ, ವ್ಯವಸ್ಥಾಪಕ ನಿರ್ದೇಶಕ ಸೈಯದ್ ಫೈಸಲ್ ಅಶ್ರಫ್ ಅವರನ್ನು ಸಚಿವರು ಭೇಟಿ ಮಾಡಿದರು. ಜಪಾನಿನ ಅತಿ ದೊಡ್ಡ ಜನರಲ್‌ ಟ್ರೇಡಿಂಗ್‌ ಕಂಪನಿ ಮಿಟ್ಸುಯಿ 63 ದೇಶಗಳಲ್ಲಿ 129 ಕಚೇರಿಗಳನ್ನು ಹೊಂದಿದೆ. ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಇಂಧನ, ಆಹಾರ ಮತ್ತು ಕೃಷಿ, ಐಟಿ ಮತ್ತು ಸಂವಹನ ಸೇರಿದಂತೆ 16 ಉದ್ಯಮಗಳನ್ನೊಳಗೊಂಡಿದೆ.

ಜೆಟ್ರೊ:

ಜೆಟ್ರೊದ ಗ್ಲೋಬಲ್ ಸ್ಟ್ರಾಟಜಿ, ನೈಋತ್ಯ ಏಷ್ಯಾದ ಹಿರಿಯ ನಿರ್ದೇಶಕರಾದ ಕಝುಹಿಕೊ ಒಬಾಮಾ ಮತ್ತು ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಕಝುಯಾ ನಕಾಜೊ ಅವರನ್ನು ಸಚಿವರು ಭೇಟಿ ಆದರು. ಜಪಾನ್‌ ಹಾಗೂ ವಿವಿಧ ದೇಶಗಳ ನಡುವೆ ಪರಸ್ಪರ ವ್ಯಾಪಾರ ಮತ್ತು ಹೂಡಿಕೆಯನ್ನು ಜೆಟ್ರೊ ಉತ್ತೇಜಿಸುವ ಸಂಸ್ಥೆಯಾಗಿದೆ.

ಹಿಟಾಚಿ:

ಹಿಟಾಚಿ ಉಪಾಧ್ಯಕ್ಷ, ಪ್ರಾದೇಶಿಕ ಕಾರ್ಯತಂತ್ರಗಳ ಕಾರ್ಯನಿರ್ವಾಹಕ ಅಧಿಕಾರಿ ಕೊಜಿನ್ ನಕಾಕಿತಾ, ಉಪಾಧ್ಯಕ್ಷ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ನೊರಿಹಿರೊ ಸುಜುಕಿ ಹಾಗೂ ಕಾರ್ಪೊರೇಟ್ ಅಧಿಕಾರಿ, ಪ್ರಧಾನ ವ್ಯವಸ್ಥಾಪಕ ಅಯುಮು ಮೊರಿಟಾ ಅವರನ್ನು ರಾಜ್ಯ ನಿಯೋಗ ಭೇಟಿ ಮಾಡಿತು.

ಫುಜಿತ್ಸು ಲಿಮಿಟೆಡ್:

ಫುಜಿತ್ಸು ಲಿಮಿಟೆಡ್‌ ಕಾರ್ಪೊರೇಟ್ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಮಹಾಜನ್, ಕಾರ್ಪೊರೇಟ್ ಕಾರ್ಯನಿರ್ವಾಹಕ ಅಧಿಕಾರಿ (ಸಂಶೋಧನಾ ನಿರ್ವಹಣಾ ಕೇಂದ್ರ) ಕೆನ್ ಟೊಯೋಡಾ, ಮತ್ತು ಸಿಬ್ಬಂದಿ ಮುಖ್ಯಸ್ಥ ಜಂಗೊ ಒಕೈ ಉಪಸ್ಥಿತರಿದ್ದರು.

ಎನ್‌ಇಸಿ ಕಾರ್ಪ್‌:

ಎನ್‌ಇಸಿ ಕಾರ್ಪ್‌ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿತೋಶಿಯಾ ಮಾಟ್ಸುಕಿ, ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿ ಪ್ರಯೋಗಾಲಯಗಳ ಪ್ರಧಾನ ವ್ಯವಸ್ಥಾಪಕ ಡಾ. ಅಕಿಹಿಕೊ ಇಕೆಟಾನಿ, ಜಾಗತಿಕ ಸಾರ್ವಜನಿಕ ನೀತಿ ಅಧಿಕಾರಿ ಕಿಚಿ ತಮಿಡಾ ಅವರನ್ನು ರಾಜ್ಯದ ನಿಯೋಗ ಭೇಟಿ ಮಾಡಿತು.

ಮತ್ತಷ್ಟು ಉದ್ಯಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.