Inflation: ಬೆಲೆ ಏರಿಕೆಯಲ್ಲಿ ಭರ್ಜರಿ ಕುಸಿತ; ಅಕ್ಟೋಬರ್​ನಲ್ಲಿ ಹಣದುಬ್ಬರ ದರ ಕೇವಲ ಶೇ. 0.25

Inflation rate falls to 0.25% on October: 2025ರ ಅಕ್ಟೋಬರ್ ತಿಂಗಳಲ್ಲಿ ಶೇ. 0.25 ಹಣದುಬ್ಬರ ದಾಖಲಾಗಿದೆ. ಸಿಪಿಐ ಸರಣಿಯಲ್ಲೇ ಇದು ಕನಿಷ್ಠ ಹಣದುಬ್ಬರ ದರ ಎನಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 1.44 ಇತ್ತು. ಈ ತಿಂಗಳು ಹಣದುಬ್ಬರ ಕುಸಿತಕ್ಕೆ ಪ್ರಮುಖ ಕಾರಣ ಆಹಾರವಸ್ತುಗಳ ಬೆಲೆ ಇಳಿಕೆ. ಈರುಳ್ಳಿ ಹಾಗೂ ತರಕಾರಿಗಳ ಬೆಲೆ ಸಿಕ್ಕಾಪಟ್ಟೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಕಡಿಮೆಗೊಂಡಿದೆ.

Inflation: ಬೆಲೆ ಏರಿಕೆಯಲ್ಲಿ ಭರ್ಜರಿ ಕುಸಿತ; ಅಕ್ಟೋಬರ್​ನಲ್ಲಿ ಹಣದುಬ್ಬರ ದರ ಕೇವಲ ಶೇ. 0.25
ಹಣದುಬ್ಬರ

Updated on: Nov 12, 2025 | 5:24 PM

ನವದೆಹಲಿ, ನವೆಂಬರ್ 12: ಸಿಪಿಐ ಆಧಾರಿತ ಹಣದುಬ್ಬರ (Inflation) ಅಕ್ಟೋಬರ್ ತಿಂಗಳಲ್ಲಿ ಕೇವಲ ಶೇ. 0.25 ದಾಖಲಾಗಿದೆ. ಗ್ರಾಹಕ ಬೆಲೆ ಅನುಸೂಚಿಯ ಇತಿಹಾಸದಲ್ಲೇ ದಾಖಲಾಗಿರುವ ಅತ್ಯಂತ ಕನಿಷ್ಠ ಹಣದುಬ್ಬರ ಇದು. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಹಣದುಬ್ಬರ ಅಚ್ಚರಿ ಮೂಡಿಸಿದೆ. ಸಿಪಿಐ ಸರಣಿಯಲ್ಲಿ ಇದು ಅತ್ಯಂತ ಕಡಿಮೆ ಹಣದುಬ್ಬರ ಎನ್ನಲಾಗಿದೆ. ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಮೈನಸ್ ದಾಖಲಾಗಿರುವುದು ವಿಶೇಷ ಎನಿಸಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 1.44 ಎಂದು ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ತಿಂಗಳು 119 ಮೂಲಾಂಕಗಳಷ್ಟು ಹಣದುಬ್ಬರ ಕಡಿಮೆ ಆಗಿರುವುದು ಗಮನಾರ್ಹ. ಆಹಾರವಸ್ತುಗಳ ಬೆಲೆಗಳು ಭರ್ಜರಿ ಇಳಿಕೆಯಾಗಿರುವುದು ಹಣದುಬ್ಬರದ ಕುಸಿತಕ್ಕೆ ಕಾರಣವಾಗಿದೆ. ಆಹಾರ ಹಣದುಬ್ಬರ ಸೆಪ್ಟೆಂಬರ್​ನಲ್ಲಿ ಮೈನಸ್ ಶೇ. 2.33 ಇದ್ದದ್ದು ಈಗ ಮೈನಸ್ 5.02ಕ್ಕೆ ಕುಸಿದಿದೆ.

ಇದನ್ನೂ ಓದಿ: ಟ್ರೈನ್​ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ

ಆಹಾರವಸ್ತುಗಳ ಹಣದುಬ್ಬರವೂ ಕೂಡ ಸಿಪಿಐ ಸರಣಿಯಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ತರಕಾರಿ, ಹಣ್ಣು, ಬೇಳೆಕಾಳು, ಧಾನ್ಯ, ಮೊಟ್ಟೆ, ಎಣ್ಣೆ ಇತ್ಯಾದಿ ಆಹಾರವಸ್ತುಗಳ ಬೆಲೆ ಕಡಿಮೆಗೊಂಡಿರುವುದು ಆಹಾರ ಹಣದುಬ್ಬರ ಇಳಿಕೆಗೆ ಎಡೆ ಮಾಡಿಕೊಟ್ಟಿದೆ.

2025ರ ಅಕ್ಟೋಬರ್​ನಲ್ಲಿ ಹಣದುಬ್ಬರ ಟ್ರೆಂಡ್ ಹೀಗಿದೆ

ಒಟ್ಟಾರೆ ಹಣದುಬ್ಬರ ಶೇ. 1.44ರಿಂದ ಶೇ. 0.25ಕ್ಕೆ ಇಳಿಕೆ

  • ಗ್ರಾಮೀಣ ಭಾಗದಲ್ಲಿ ಶೇ. 1.07ರಿಂದ ಮೈನಸ್ ಶೇ. 0.25ಕ್ಕೆ ಇಳಿಕೆ. ಆಹಾರ ಹಣದುಬ್ಬರ ಮೈನಸ್ ಶೇ. 4.85
  • ನಗರ ಭಾಗದಲ್ಲಿ ಶೇ. 1.83ರಿಂದ ಶೇ. 0.88ಕ್ಕೆ ಇಳಿಕೆ. ಆಹಾರ ಹಣದುಬ್ಬರ ಮೈನಸ್ ಶೇ. 5.18
  • ಗೃಹ ಹಣದುಬ್ಬರ: ಶೇ. 2.96
  • ಶಿಕ್ಷಣ ಹಣದುಬ್ಬರ: ಶೇ. 3.49
  • ಆರೋಗ್ಯ ಹಣದುಬ್ಬರ: ಶೇ. 3.86
  • ಸಾರಿಗೆ ಮತ್ತು ಸಂವಹನ: ಶೇ. 0.94
  • ಇಂಧನ: ಶೇ. 1.98

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಕೇವಲ ಶೇ 1.54; ಎಂಟು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆ ಮಟ್ಟ

ತರಕಾರಿಗಳ ಬೆಲೆ ಅತೀ ಹೆಚ್ಚು ಕುಸಿತ

ಆಹಾರವಸ್ತುಗಳ ಹಣದುಬ್ಬರ ಭರ್ಜರಿ ಇಳಿಕೆ ಕಂಡಿದೆ. ಈ ಪೈಕಿ ತರಕಾರಿಗಳ ಬೆಲೆ ಮೈನಸ್ ಶೇ. 27.6ರಷ್ಟು ಕುಸಿದಿದೆ. ಈರುಳ್ಳಿಯಂತೂ ಮೈನಸ್ 54.3 ಪರ್ಸೆಂಟ್ ಕುಸಿತ ಕಂಡಿದೆ.

ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರ ದಾಖಲಾಗಿದೆ. ಈ ದಕ್ಷಿಣ ರಾಜ್ಯದಲ್ಲಿ ಹಣದುಬ್ಬರ ಬರೋಬ್ಬರಿ ಶೇ. 8.56 ಇದೆ. ಜಮ್ಮು ಕಾಶ್ಮೀರ ಮತ್ತು ಕರ್ನಾಟಕದಲ್ಲೂ ಶೇ. 2ಕ್ಕಿಂತಲೂ ಹೆಚ್ಚು ಹಣದುಬ್ಬರ ದಾಖಲಾಗಿದೆ. ಹಣದುಬ್ಬರ ಮೈನಸ್ ಹೊಂದಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ ಮೊದಲಾದವಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ