ಮೈಸೂರು, ಫೆಬ್ರುವರಿ 7: ಕಂಪನಿಯ ಕ್ಯಾಂಪಸ್ನಿಂದ ಆಯ್ಕೆಯಾಗಿ ಕೆಲ ತಿಂಗಳ ಹಿಂದಷ್ಟೇ ಇನ್ಫೋಸಿಸ್ಗೆ ನೇಮಕವಾಗಿದ್ದ 700 ಮಂದಿ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿರುವ ಶಾಕಿಂಗ್ ಸುದ್ದಿ ಕೇಳಿಬಂದಿದೆ. ಐಟಿ ಸೆಕ್ಟರ್ನ ಉದ್ಯೋಗಿಗಳ ಕ್ಷೇಮಕ್ಕೆಂದು ಸ್ಥಾಪಿತವಾಗಿರುವ ನೇಸೆಂಟ್ ಇನ್ಫಾರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸಿನೇಟ್ (ನೈಟ್ಸ್) ಎನ್ನುವ ಕಂಪನಿ ನೀಡಿರುವ ಮಾಹಿತಿ ಪ್ರಕಾರ 700 ಮಂದಿ ಕ್ಯಾಂಪಸ್ ನೇಮಕಾತಿಗಳನ್ನು ಬಲವಂತವಾಗಿ ಕೆಲಸದಿಂದ ತೆಗೆಯಲಾಗುತ್ತಿದೆ. ಇನ್ಫೋಸಿಸ್ ಸಂಸ್ಥೆಯ ಈ ನಡೆಗೆ ಆಕ್ರೋಶಗೊಂಡಿರುವ ನೈಟ್ಸ್, ಭಾರತೀಯ ಕಾರ್ಮಿಕ ಇಲಾಖೆಗೆ ಅಧಿಕೃತವಾಗಿ ದೂರು ದಾಖಲಿಸಲು ಯೋಜಿಸುತ್ತಿದೆ.
ಫ್ರೆಶರ್ಗಳನ್ನು ಕೆಲಸದಿಂದ ತೆಗೆಯುತ್ತಿರುವ ಸಂಗತಿಯನ್ನು ಇನ್ಫೋಸಿಸ್ ದೃಢಪಡಿಸಿರುವುದು ಮಾಧ್ಯಮ ವರದಿಗಳಿಂದ ತಿಳಿದುಬರುತ್ತದೆ. ನೈಟ್ಸ್ ಮಾಹಿತಿ ಪ್ರಕಾರ 700 ಮಂದಿ ಕ್ಯಾಂಪಸ್ ನೇಮಕಾತಿಗಳನ್ನು ಲೇ ಆಫ್ ಮಾಡಲಾಗುತ್ತಿದೆ. ಆದರೆ, ಇನ್ಫೋಸಿಸ್ ನೀಡಿರುವ ಮಾಹಿತಿ ಪ್ರಕಾರ ಲೇ ಆಫ್ ಮಾಡಲಾಗುತ್ತಿರುವವರ ಸಂಖ್ಯೆ ಸುಮಾರು 350 ಇದೆ.
ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ, ಕ್ಯಾಂಪಸ್ನಲ್ಲಿ ಆಯ್ಕೆಯಾದವರ ಪೈಕಿ 700 ಮಂದಿಯನ್ನು 2024ರ ಅಕ್ಟೋಬರ್ನಲ್ಲಿ ಟ್ರೈನಿಗಳಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇವರಲ್ಲಿ 400 ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿದೆ. ಸುಮಾರು 50 ಮಂದಿಯ ಬ್ಯಾಚ್ಗಳಾಗಿ ಮಾಡಿ ಅವರಿಂದ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲಾಗುತ್ತಿದೆ. ಈ ವೇಳೆ ಈ ಉದ್ಯೋಗಿಗಳು ಮೊಬೈಲ್ ಫೋನ್ ಕೊಂಡೊಯ್ಯದಂತೆ ನಿಯಂತ್ರಿಸಲು ಬೌನ್ಸರ್ಗಳನ್ನು ಬಳಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಯಾರೂ ಕೂಡ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಲಕ್ಷಾಂತರ ರೂ ಲೂಟಿ ಆರೋಪ: ದಾಖಲೆ ನೀಡಿದ ಕಾನೂನು ವಿದ್ಯಾರ್ಥಿ
ಇನ್ಫೋಸಿಸ್ ಸಂಸ್ಥೆ ಈ ಲೇ ಆಫ್ ಪ್ರಕ್ರಿಯೆಯಲ್ಲಿ ಬೌನ್ಸರ್ಗಳ ಬಳಕೆ ಮಾಡಿಲ್ಲ ಎಂದು ಹೇಳಿರುವುದೂ ವರದಿಯಾಗಿದೆ.
2022ರಲ್ಲಿ ಕಾಲೇಜು ಕ್ಯಾಂಪಸ್ಗಳಲ್ಲಿ ಹಲವರನ್ನು ಇನ್ಫೋಸಿಸ್ ಆಯ್ಕೆ ಮಾಡಿಕೊಂಡಿತು. ಅವರಿಗೆ ಆಫರ್ ಲೆಟರ್ಗಳನ್ನೂ ಕೊಡಲಾಗಿತ್ತು. ಆದರೆ, ಐಟಿ ಸೆಕ್ಟರ್ನಲ್ಲಿ ಹಿನ್ನಡೆ ಇದ್ದರಿಂದ ಅವರನ್ನು ಕೆಲಸಕ್ಕೆ ಕರೆಸಿಕೊಳ್ಳುವುದು ತಡವಾಗಿತ್ತು. 2022ರಲ್ಲಿ ಒಂದು ಸಾವಿರ ಮಂದಿಗೆ ಕೆಲಸಕ್ಕೆ ಬರಲು ಪತ್ರ ನೀಡಲಾಗಿತ್ತು.
ಇವರನ್ನು ಸಿಸ್ಟಂ ಎಂಜಿನಿಯರ್ಸ್ ಮತ್ತು ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನಿಯರ್ಸ್ ಹುದ್ದೆಗಳಿಗೆ ಟ್ರೈನಿಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇವರೆಲ್ಲರಿಗೂ ಮೈಸೂರಿನ ಕ್ಯಾಂಪಸ್ನಲ್ಲಿ ತರಬೇತಿ ನೀಡಲಾಗಿದೆ. ಬಳಿಕ ಆಂತರಿಕ ಪರೀಕ್ಷೆಗಳನ್ನು ಇವರಿಗೆ ನೀಡಲಾಗುತ್ತದೆ. ಇದರಲ್ಲಿ ತೇರ್ಗಡೆಯಾದವರಿಗೆ ಕೆಲಸದಲ್ಲಿ ಮುಂದುವರಿಯಲು ಅವಕಾಶ ಸಿಗುತ್ತದೆ. ಪ್ರತಿಯೊಬ್ಬ ಟ್ರೈನಿಗೂ ಈ ರೀತಿ ಮೂರು ಅಸೆಸ್ಮೆಂಟ್ ಅವಕಾಶ ಸಿಗುತ್ತದೆ. ಇನ್ಫೋಸಿಸ್ ಸಂಸ್ಥೆ ಪ್ರಕಾರ ಈ ರೀತಿಯ ತರಬೇತಿ ಮತ್ತು ನೇಮಕಾತಿ ವ್ಯವಸ್ಥೆ ಹಲವು ವರ್ಷಗಳಿಂದ ಇದೆ.
ಇದನ್ನೂ ಓದಿ: ರತನ್ ಟಾಟಾ ಉಯಿಲಿನಲ್ಲಿ ‘ನಿಗೂಢ’ ವ್ಯಕ್ತಿ ಮೋಹಿನಿ; ಟಾಟಾ ಫ್ಯಾಮಿಲಿ ಸದಸ್ಯರಿಗೇ ಅಚ್ಚರಿ
ಲೇ ಆಫ್ ಆಗುತ್ತಿರುವ ಟ್ರೈನಿಗಳ ಪ್ರಕಾರ ಇಂಟರ್ನಲ್ ಅಸೆಸ್ಮೆಂಟ್ ಟೆಸ್ಟ್ಗಳು ಬಹಳ ಕಠಿಣವಾಗಿದ್ದವು. ತೇರ್ಗಡೆ ಆಗಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಕ್ಲಿಷ್ಟಕರ ಪರೀಕ್ಷೆಗಳನ್ನು ನೀಡಲಾಗಿತ್ತು ಎಂದು ಇವರು ಆರೋಪಿಸಿದ್ದು, ತಮ್ಮ ಭವಿಷ್ಯ ಈಗ ಮಸುಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ