
ಬೆಂಗಳೂರು, ಜೂನ್ 3: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮೊಮ್ಮಗು ಏಕಾಗ್ರನಿಗೆ (Ekagrah Rohan Murthy) 6.5 ಕೋಟಿ ರೂ ಆದಾಯ ಪ್ರಾಪ್ತವಾಗಿದೆ. ಈ ಹುಡುಗನ ವಯಸ್ಸು ಇನ್ನೂ 2 ವರ್ಷವೂ ದಾಟಿಲ್ಲ. 18 ತಿಂಗಳು ಅಥವಾ ಒಂದೂವರೆ ವರ್ಷದ ಈ ಕೂಸಿಗೆ ಡಿವಿಡೆಂಡ್ಗಳಿಂದ (share dividend) ಈ ಹಣ ಸಿಕ್ಕಿದೆ. ನಾರಾಯಣಮೂರ್ತಿಯವರ ಮಗ ರೋಹನ್ ಮೂರ್ತಿಯ ಮಗ ಈ ಏಕಾಗ್ರ.
ನಾರಾಯಣಮೂರ್ತಿ ಅವರು ಇನ್ಫೋಸಿಸ್ನಲ್ಲಿರುವ ತಮ್ಮ ಪಾಲಿನ ಷೇರುಗಳಲ್ಲಿ 15 ಲಕ್ಷ ಷೇರುಗಳನ್ನು ಏಕಾಗ್ರನಿಗೆ ಉಡುಗೊರೆಯಾಗಿ ವರ್ಗಾವಣೆ ಮಾಡಿದ್ದರು. ಆಗ ಆ ಶಿಶುವಿನ ವಯಸ್ಸು ಇನ್ನೂ 4 ತಿಂಗಳು. ಇನ್ಫೋಸಿಸ್ನ ಶೇ. 0.04ರಷ್ಟು ಷೇರುಪಾಲು ಇದಾಗಿದ್ದು, ಆಗ ಇದರ ಒಟ್ಟು ಷೇರುಮೌಲ್ಯ 240 ಕೋಟಿ ರೂ ದಾಟಿತ್ತು.
ಈಗ ಇನ್ಫೋಸಿಸ್ ಷೇರುಬೆಲೆ ಕಳೆದ ಒಂದು ವರ್ಷದಲ್ಲಿ ಸ್ವಲ್ಪ ಕುಸಿದಿದೆ. ಪ್ರತೀ ಷೇರಿನ ಬೆಲೆ ಈಗ 1,543 ರೂ ಇದೆ. ಏಕಾಗ್ರ ರೋಹನ್ ಮೂರ್ತಿ ಹೆಸರಿಗೆ ಇರುವ ಷೇರುಸಂಪತ್ತಿನ ಮೌಲ್ಯ 231 ಕೋಟಿ ರೂ ಆಗುತ್ತದೆ.
ಇನ್ಫೋಸಿಸ್ ಸಂಸ್ಥೆ ಪ್ರತೀ ವರ್ಷ ಸಾಕಷ್ಟು ಡಿವಿಡೆಂಡ್ಗಳನ್ನು ನೀಡುತ್ತದೆ. ಈ ಬಾರಿ ಪ್ರತೀ ಷೇರಿಗೆ 43 ರೂ ಡಿವಿಡೆಂಡ್ ಘೋಷಿಸಿದೆ. ಒಟ್ಟು 54.2 ಕೋಟಿ ಷೇರುಗಳಿದ್ದು, ಷೇರುದಾರರಿಗೆ ಒಟ್ಟು 2,330 ಕೋಟಿ ರೂ ಅನ್ನು ಲಾಭಾಂಶವಾಗಿ ನೀಡಿದೆ. ಇದರಲ್ಲಿ ಏಕಾಗ್ರನಿಗೆ 6.5 ಕೋಟಿ ರೂ ಸಿಕ್ಕಿದೆ. ಇನ್ಫೋಸಿಸ್ನ ಪ್ರೊಮೋಟರ್ಗಳ ಸಾಲಿನಲ್ಲಿ ಅತಿ ಕಡಿಮೆ ಷೇರುಗಳಿರುವುದು ಏಕಾಗ್ರನಿಗೆ.
ಇದನ್ನೂ ಓದಿ: ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ