ಡಿವಿಡೆಂಡ್​ನಿಂದಲೇ 4 ಕೋಟಿ ರೂ ಗಳಿಸಿದ ನಾರಾಯಣಮೂರ್ತಿ ಅವರ 5 ತಿಂಗಳ ಮೊಮ್ಮಗ ಏಕಾಗ್ರ

|

Updated on: Apr 19, 2024 | 4:04 PM

World's Youngest Millionaire Ekagrah Rohan Murthy: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಐದು ತಿಂಗಳ ಮೊಮ್ಮಗು ಏಕಾಗ್ರ ರೋಹನ್ ಮೂರ್ತಿಗೆ ಬರೋಬ್ಬರಿ 4.2 ಕೋಟಿ ರೂ ಮೊತ್ತದಷ್ಟು ಷೇರು ಲಾಭಾಂಶ ಸಿಗುತ್ತಿದೆ. ಕಳೆದ ತಿಂಗಳಷ್ಟೇ ಏಕಾಗ್ರನಿಗೆ ನಾರಾಯಣಮೂರ್ತಿಗಳು 15 ಲಕ್ಷ ಇನ್ಫೋಸಿಸ್ ಷೇರುಗಳನ್ನು ಗಿಫ್ಟ್ ಆಗಿ ನೀಡಿದ್ದರು. ಈಗ ಇನ್ಫೋಸಿಸ್ ಒಟ್ಟು 28 ರೂ ಡಿವಿಡೆಂಡ್ ಘೋಷಿಸಿದೆ. ಇದರಿಂದ ಏಕಾಗ್ರಗೆ 4.2 ರೂನಷ್ಟು ಹಣ ಸಿಗಲಿದೆ.

ಡಿವಿಡೆಂಡ್​ನಿಂದಲೇ 4 ಕೋಟಿ ರೂ ಗಳಿಸಿದ ನಾರಾಯಣಮೂರ್ತಿ ಅವರ 5 ತಿಂಗಳ ಮೊಮ್ಮಗ ಏಕಾಗ್ರ
ಎನ್ ಆರ್ ನಾರಾಯಣಮೂರ್ತಿ
Follow us on

ನವದೆಹಲಿ, ಏಪ್ರಿಲ್ 19: ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆಯಾದ ಇನ್ಫೋಸಿಸ್​ನ ಸಂಸ್ಥಾಪಕರಾದ ಎನ್ ಆರ್ ನಾರಾಯಣಮೂರ್ತಿ (NR Narayana Murthy) ತಮ್ಮ ಐದು ತಿಂಗಳ ಮೊಮ್ಮಗನಿಗೆ (Ekagrah Rohan Murthy) ಇತ್ತೀಚೆಗೆ 15 ಲಕ್ಷ ಷೇರುಗಳನ್ನು ಗಿಫ್ಟ್ ಆಗಿ ನೀಡಿದ್ದು ನೆನಪಿರಬಹುದು. ಇದೀಗ ನಿನ್ನೆ ಗುರುವಾರ ಇನ್ಫೋಸಿಸ್​ನ ತ್ರೈಮಾಸಿಕ ವರದಿ (Infosys Quarterly results) ಪ್ರಕಟವಾಗಿದ್ದು ಪ್ರತಿ ಷೇರಿಗೆ 28 ರೂನಷ್ಟು ಲಾಭಾಂಶವನ್ನೂ (dividend) ಘೋಷಿಸಿದೆ. ಇದರಲ್ಲಿ 20 ರೂನಷ್ಟು ಅಂತಿಮ ಡಿವಿಡೆಂಡ್ ಮತ್ತು 8 ರೂನಷ್ಟು ವಿಶೇಷ ಡಿವಿಡೆಂಡ್ ಸೇರಿದೆ. ಮೇ 31ಕ್ಕೆ ಡಿವಿಡೆಂಡ್ ರೆಕಾರ್ಡ್ ಡೇಟ್ ಆಗಿ ನಿಗದಿ ಮಾಡಲಾಗಿದೆ. ಜುಲೈ 1ಕ್ಕೆ ಹಣವನ್ನು ಷೇರುದಾರರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ.

ನಾರಾಯಣಮೂರ್ತಿ ಅವರು ತಮ್ಮ ಪಾಲಿನ ಕೆಲ ಷೇರುಗಳನ್ನು ಮಗ ರೋಹನ್ ಮೂರ್ತಿಯ 5 ತಿಂಗಳ ಮಗು ಏಕಾಗ್ರಃ ಹೆಸರಿಗೆ ವರ್ಗಾವಣೆ ಮಾಡಿದ್ದರು. ಈ ಏಕಾಗ್ರನ ಹೆಸರಿನಲ್ಲಿ 15 ಲಕ್ಷ ಷೇರುಗಳಿವೆ. ಅಂದರೆ ಇನ್ಫೋಸಿಸ್​ನಲ್ಲಿ ಶೇ. 0.04ರಷ್ಟು ಷೇರುಪಾಲು ಹೊಂದಿದೆ ಈ ಪುಟ್ಟ ಮಗು. ಪ್ರತೀ ಷೇರಿಗೆ 28 ರೂ ಲಾಭಾಂಶ ಪರಿಗಣಿಸಿದಾಗ ಏಕಾಗ್ರಹ್​ಗೆ 4.2 ಕೋಟಿ ರೂ ಹಣ ಸಿಗುತ್ತದೆ. ಆಡಾಡುತ್ತಲೇ ಏಕಾಗ್ರ ಒಂದು ವರ್ಷದಲ್ಲಿ 4.2 ಕೋಟಿ ರೂ ಆದಾಯ ಮಾಡುತ್ತಿದೆ.

ಇದನ್ನೂ ಓದಿ: ಚುನಾವಣೆಯ ವರ್ಷವೂ ಭಾರತದ ಹಣಕಾಸು ಶಿಸ್ತು ಪಾಲನೆಯನ್ನು ಮೆಚ್ಚಿಕೊಂಡ ಐಎಂಎಫ್

ಏಕಾಗ್ರನ ಆಸ್ತಿಮೌಲ್ಯ ಈಗ ಎಷ್ಟಿದೆ?

ಇನ್ಫೋಸಿಸ್ ಮೂರ್ತಿ ಮೊಮ್ಮಗು ಏಕಾಗ್ರ ವಿಶ್ವದ ಅತ್ಯಂತ ಕಿರಿಯ ಮಿಲಿಯನೇರ್ ಎಂದು ಪರಿಗಣಿತನಾಗಿದ್ದಾನೆ. ನಾರಾಯಣಮೂರ್ತಿಗಳು ತಮ್ಮ ಷೇರುಗಳನ್ನು ಇವನಿಗೆ ವರ್ಗಾವಣೆ ಮಾಡಿದಾಗ ಅವುಗಳ ಮೊಟ್ಟು ಮೌಲ್ಯ 243 ಕೋಟಿ ರೂ ಇತ್ತು. ಇವತ್ತು ಒಂದು ಷೇರು ಬೆಲೆ (ಮಧ್ಯಾಹ್ನ 3:20ಕ್ಕೆ) 1,411 ರೂ ಇತ್ತು. ಇದರ ಆಧಾರದ ಮೇಲೆ ಈ 4 ತಿಂಗಳ ಮಗುವಿನ ಆಸ್ತಿಮೌಲ್ಯ 211 ಕೋಟಿ ರೂ ಆಗುತ್ತದೆ. ಗಿಫ್ಟ್ ಸಿಕ್ಕಾಗಿನಿಂದ ಇವರ ಆಸ್ತಿಮೌಲ್ಯ 30 ಕೋಟಿ ರೂನಷ್ಟು ಕುಸಿದಿದೆ. ಈ ಅವಧಿಯಲ್ಲಿ ಇನ್ಫೋಸಿಸ್ ಷೇರುಬೆಲೆ ಕುಸಿದಿರುವುದು ಈ ನಷ್ಟಕ್ಕೆ ಕಾರಣ.

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ಮನೆ ಸೀಜ್ ಮಾಡಲು ಕಾರಣವಾದ ಬಿಟ್​ಕಾಯಿನ್ ಹಗರಣ ಏನದು? ರಾಜ್ ಕುಂದ್ರಾ ಪಾತ್ರವೇನು, ಇಲ್ಲಿದೆ ಡೀಟೇಲ್ಸ್

ಇನ್ಪೋಸಿಸ್ ತ್ರೈಮಾಸಿಕ ವರದಿ

2023-24ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯ ತನ್ನ ಫಲಿತಾಂಶವನ್ನು ಇನ್ಫೋಸಿಸ್ ನಿನ್ನೆ ಗುರುವಾರ ಪ್ರಕಟಿಸಿದೆ. ಅದರಂತೆ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಆದಾಯ 7,969 ಕೋಟಿ ರೂ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ. 30ರಷ್ಟು ಹೆಚ್ಚಾಗಿದೆ. ಆದರೆ, ಆದಾಯದಲ್ಲಿ ಹೆಚ್ಚಳವಾಗಿರುವುದು ಶೇ. 1.3 ಮಾತ್ರವೇ. ಅಲ್ಲದೇ 2024-25ರ ಹಣಕಾಸು ವರ್ಷಕ್ಕೆ ಇನ್ಫೋಸಿಸ್ ಆದಾಯ ನಿರೀಕ್ಷೆಯನ್ನು ಶೇ. 1ರಿಂದ 3ಕ್ಕೆ ತಗ್ಗಿಸಿದೆ. ಕಳೆದ ವರ್ಷದಲ್ಲಿ ಇನ್ಫೋಸಿಸ್ ಆದಾಯ ನಿರೀಕ್ಷೆ ಶೇ. 4ರಿಂದ 7ರಷ್ಟು ಇತ್ತು. ಈಗ ನಿರೀಕ್ಷೆ ತಗ್ಗಿಸಿರುವುದು ಷೇರುದಾರರಿಗೆ ನಿರಾಶೆ ಮೂಡಿಸಿದೆ. ಇದರ ಪರಿಣಾಮವಾಗಿ ಷೇರುಬೆಲೆ ಕಡಿಮೆ ಆಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ