ಲಿಂಕ್ಡ್ ಇನ್ನ ಭಾರತದ ಟಾಪ್ 20 ಸ್ಟಾರ್ಟ್ ಅಪ್ 2023 ಪಟ್ಟಿ ಪ್ರಕಟ: ಝೆಪ್ಟೊ, ಬ್ಲೂಸ್ಮಾರ್ಟ್ ಮತ್ತು ಡಿಟ್ಟೋ ಇನ್ಸೂರೆನ್ಸ್ಗೆ ಮೊದಲ ಮೂರು ಸ್ಥಾನ
LinkedIn India 2023 Top Startups list: ಫಿನ್ಟೆಕ್ ನವೋದ್ಯಮಿಗಳು ಹಣಕಾಸು ನೆರವಿನಿಂದ ಚೇತರಿಸಿಕೊಂಡು ಅಭಿವೃದ್ಧಿಯತ್ತ ಸಾಗಿದ್ದರೆ, ಎಜುಟೆಕ್ ಕಂಪನಿಗಳು ಭಾರತದ ಕಲಿಕೆಯ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿವೆ. ಪಟ್ಟಿಯಲ್ಲಿರುವ 20 ಸ್ಟಾರ್ಟಪ್ಗಳ ಪೈಕಿ 10 ಕಂಪನಿಗಳ ಕೇಂದ್ರ ಕಚೇರಿಗಳು ಬೆಂಗಳೂರಿನಲ್ಲಿವೆ, ಈ ಮೂಲಕ ಬೆಂಗಳೂರು ಭಾರತದ `ಸ್ಟಾರ್ಟಪ್ಗಳ ನಗರ’ ಎಂಬ ಖ್ಯಾತಿ ಉಳಿಸಿಕೊಂಡಿದೆ.
ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾಗಿರುವ ಲಿಂಕ್ಡ್ ಇನ್ ಇಂದು 2023 ನೇ ಸಾಲಿನ ಟಾಪ್ 20 ಭಾರತೀಯ ಸ್ಟಾರ್ಟ್ ಅಪ್ ಗಳ ಪಟ್ಟಿಯನ್ನು (LinkedIn India 2023 Top Startups list) ಬಿಡುಗಡೆ ಮಾಡಿದೆ. ಅನನ್ಯವಾದ ಲಿಂಕ್ಡ್ ಇನ್ ಡೇಟಾವನ್ನು ಆಧರಿಸಿ ಜಾಗತಿಕವಾಗಿ ವೃತ್ತಿಪರರು ಕೆಲಸ ಮಾಡಲು ಬಯಸುವ ಉದಯೋನ್ಮುಖ ಕಂಪನಿಗಳ ವಾರ್ಷಿಕ ಶ್ರೇಯಾಂಕ ಇದಾಗಿದೆ. ಈ ಟಾಪ್ ಸ್ಟಾರ್ಟಪ್ ಗಳ ಪಟ್ಟಿಯು ವೃತ್ತಿಪರರಿಗೆ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ಉದಯೋನ್ಮುಖ ಕಂಪನಿಗಳನ್ನು ಅನ್ವೇಷಣೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಅವರ ಮುಂದಿನ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವರು ತಿಳಿದುಕೊಳ್ಳಬೇಕಾದ ಮಾಹಿತಿಗಳೊಂದಿಗೆ ಅವರನ್ನು ಸಜ್ಜುಗೊಳಿಸುತ್ತದೆ.
ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಲಿಂಕ್ಡ್ ಇನ್ ನಲ್ಲಿ 950+ ಮಿಲಿಯನ್ ಸದಸ್ಯರು ತೆಗೆದುಕೊಂಡಿರುವ ಬಿಲಿಯನ್ ಕ್ರಮಗಳ ಆಧಾರದ ಮೇಲೆ ವಿಶಿಷ್ಟವಾದ ಲಿಂಕ್ಡ್ ಇನ್ ಡೇಟಾದಿಂದ ಈ ಟಾಪ್ ಸ್ಟಾರ್ಟಪ್ ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ: ಅಂದರೆ, ಉದ್ಯೋಗಿ ಬೆಳವಣಿಗೆ, ಉದ್ಯೋಗಾಕಾಂಕ್ಷಿ ಆಸಕ್ತಿ, ಕಂಪನಿ ಮತ್ತು ಅದರ ಉದ್ಯೋಗಿಗಳಲ್ಲಿನ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಗಮನಿಸಿ ಲಿಂಕ್ಡ್ ಇನ್ ಟಾಪ್ ಕಂಪನಿಗಳ ಪಟ್ಟಿಯಿಂದ ಪ್ರತಿಭಾನ್ವಿತ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಈ ವರ್ಷದ ಟಾಪ್ ಸ್ಟಾರ್ಟಪ್ ಪಟ್ಟಿಯಲ್ಲಿ ಝೆಪ್ಟೋ(Zepto) ಮೊದಲ ಸ್ಥಾನದಲ್ಲಿದೆ. 2021 ರಲ್ಲಿ ಆರಂಭವಾದ ಗ್ರಾಹಕರ ಮನೆ ಬಾಗಿಲಿಗೆ ದಿನಸಿಯನ್ನು ತಲುಪಿಸುವ ಇ-ಕಾಮರ್ಸ್ ಆ್ಯಪ್ ಆಗಿರುವ ಈ ಕಂಪನಿ 2022 ರಲ್ಲಿ 4 ನೇ ಸ್ಥಾನದಲ್ಲಿತ್ತು. ಝೆಪ್ಟೋದ ಮೆರಿಟೋಕ್ರಾಟಿಕ್ ಬೆಳವಣಿಗೆಯ ಹಾದಿಯು ಅಸಾಧಾರಣವಾದ ರೀತಿಯಲ್ಲಿತ್ತು. ಆಗಸ್ಟ್ ನಲ್ಲಷ್ಟೇ ಕಂಪನಿಯು ಯೂನಿಕಾರ್ನ್ ಸ್ಥಾನಮಾನವನ್ನು ಪಡೆದಿದ್ದು, 2023 ರಲ್ಲಿ 200 ಮಿಲಿಯನ್ ಡಾಲರ್ ಧನಸಹಾಯವನ್ನು ಪಡೆದ ಮೊದಲ ಭಾರತೀಯ ಕಂಪನಿ ಎನಿಸಿದೆ. ಈ ಮೂಲಕ ಈ ಸಾಧನೆ ದೇಶದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಅಸಾಧಾರಣವಾದ ಸಾಮರ್ಥ್ಯ ಮತ್ತು ನಾವೀನ್ಯತೆಯ ಸಂಕೇತವಾಗಿದೆ. ಇದರೊಂದಿಗೆ ಝೆಪ್ಟೋ 2023 ರಲ್ಲಿ ಲಿಂಕ್ಡ್ ಇನ್ ಟಾಪ್ ಕಂಪನಿ ಎನಿಸಿದೆ.
ಭಾರತದ ಮೊದಲ ಎಲೆಕ್ಟ್ರಿಕ್ ರೈಡ್-ಶೇರಿಂಗ್ ಕಂಪನಿಯಾಗಿರುವ ಬ್ಲೂಸ್ಮಾರ್ಟ್ (BluSmart) ಈ ಪ್ರತಿಷ್ಠಿತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಂಪನಿ ಆರಂಭವಾದ ಮೂರು ವರ್ಷಗಳಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದುಕೊಂಡಿದೆ. ಮತ್ತೊಂದು ಇವಿ ಸ್ಟಾರ್ಟಪ್ ಎಕ್ಸ್ ಪೋನೆಂಟ್ ಎನರ್ಜಿ 15 ನೇ ಸ್ಥಾನ ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಸರ್ಕಾರದ `ಮೇಕ್ ಇನ್ ಇಂಡಿಯಾ’ದ ಉಪಕ್ರಮದ ಹಿನ್ನೆಲೆಯಲ್ಲಿ ಭಾರತದಲ್ಲಿ ಇವಿ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಸರ್ಕಾರದ ಬೆಂಬಲವನ್ನು ಪಡೆಯುವ ಮೂಲಕ ಅನೇಕ ಇವಿ ಸ್ಟಾರ್ಟಪ್ ಗಳು ಹುಟ್ಟಿಕೊಳ್ಳುತ್ತಿವೆ.
ಫಿನ್ಟೆಕ್ ಭಾರತದ ಟಾಪ್ ಸ್ಟಾರ್ಟಪ್ ಪಟ್ಟಿ 2023 ರಲ್ಲಿ ಮೇಲುಗೈ ಮುಂದುವರಿಸಿದೆ. ನಾಲ್ಕು ಸ್ಟಾರ್ಟಪ್ ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಅವುಗಳೆಂದರೆ, ಡಿಟ್ಟೋ ಇನ್ಸೂರೆನ್ಸ್ 3 ನೇ ಸ್ಥಾನ, Fi – 7 ನೇ ಸ್ಥಾನ, ಜಾರ್- 11 ನೇ ಸ್ಥಾನ ಮತ್ತು ಸ್ಟಾಕ್ ಗ್ರೋ – 14 ನೇ ಸ್ಥಾನದಲ್ಲಿವೆ. ಇದು ಕ್ಷೇತ್ರದ ಸ್ಥಿತಿಸ್ಥಾಪಕತಯ್ವವನ್ನು ಪ್ರತಿಬಿಂಬಿಸುತ್ತದೆ ಮತ್ತು ಸವಾಲಿನ ಮಾರುಕಟ್ಟೆ ಇದ್ದಾಗ್ಯೂ ಹೂಡಿಕೆದಾರರ ಹೂಡಿಕೆಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಈ ವರ್ಷದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಪ್ರಮುಖ ಉದ್ಯಮವೆಂದರೆ ಎಜುಟೆಕ್. ಗ್ರೋಥ್ ಸ್ಕೂಲ್- 10 ನೇ ಸ್ಥಾನ, ಟೀಚ್ ನೂಕ್ -13 ನೇ ಸ್ಥಾನ ಮತ್ತು ಆಕ್ಸಿಯೋಜಾಬ್- 17 ನೇ ಸ್ಥಾನದಲ್ಲಿವೆ. ವೃತ್ತಿಪರರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಎಐ ಸೇರಿದಂತೆ ತಂತ್ರಜ್ಞಾನಗಳಲ್ಲಿ ಕ್ಷಿಪ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಂಬಂಧ ಉಂಟಾಗುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಎಜುಟೆಕ್ ಕಂಪನಿಗಳು ಸಕ್ರಿಯವಾಗಿವೆ.
ಈ ಪಟ್ಟಿಯ ಬಗ್ಗೆ ಮಾತನಾಡಿದ ಲಿಂಕ್ಡ್ ಇನ್ ಇಂಡಿಯಾದ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ನಿರಾಜಿತ ಬ್ಯಾನರ್ಜಿ ಅವರು, “ಈ ವರ್ಷದ 20 ಸ್ಟಾರ್ಟಪ್ ಗಳಲ್ಲಿ 14 ಹೊಸ ಸ್ಟಾರ್ಟಪ್ ಗಳು ಸೇರ್ಪಡೆಯಾಗಿರುವುದು ವಿಶೇಷವಾಗಿದೆ. ಭಾರತದ ಸ್ಟಾರ್ಟಪ್ ಕ್ಷೇತ್ರದಲ್ಲಿ ನಾವೀನ್ಯತೆಯ ಅಗಾಧವಾದ ಸಾಮರ್ಥ್ಯ ಮತ್ತು ಬೆರಗುಗೊಳಿಸುವ ವೇಗವನ್ನು ಇದು ಒತ್ತಿ ಹೇಳುತ್ತದೆ. ಈ ಪಟ್ಟಿಯು ಉದ್ಯಮವನ್ನು ಮತ್ತಷ್ಟು ಪ್ರಕಾಶಮಾನವಾಗಿ ಬೆಳವಣಿಗೆ ಹೊಂದುತ್ತಿರುವ ಹೊಸ ಕಂಪನಿಗಳಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ವೃತ್ತಿಪರರಿಗೆ ಅನನ್ಯವಾದ ಮತ್ತು ಕಾರ್ಯಸಾಧ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ, ಅಲ್ಲಿ ಅತ್ಯುತ್ಕೃಷ್ಠವಾದ ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಲು ಅವಕಾಶ ಲಭ್ಯವಾಗಲಿದೆ. ಈ ಸ್ಟಾರ್ಟಪ್ ಗಳು ಇದೀಗ ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲು ಮುಂದೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ನವೋಲ್ಲಾಸದ ನವೋದ್ಯಮ ಅಂದರೆ ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಬೆಳವಣಿಗೆಯ ಯಶೋಗಾಥೆಯ ಭಾಗವಾಗಲು ಇದೊಂದು ಉತ್ತಮ ಅವಕಾಶವಾಗಿದೆ’’ ಎಂದರು.
2023 ನೇ ಸಾಲಿನ ಲಿಂಕ್ಡ್ ಇನ್ ಟಾಪ್ ಸ್ಟಾರ್ಟಪ್ ಗಳ ಪಟ್ಟಿ:
- ಜೆಪ್ಟೋ
- ಬ್ಲಸ್ಮಾರ್ಟ್
- ಡಿಟ್ಟೊ ವಿಮೆ
- ಪಾಕೆಟ್ FM
- ಸ್ಕೈರೂಟ್ ಏರೋಸ್ಪೇಸ್
- GoKwik
- Fi
- ಸ್ಪ್ರಿಂಟೋ
- ಸೂಪರ್ಸೋರ್ಸಿಂಗ್
- ಗ್ರೋತ್‌ಸ್ಕೂಲ್
- ಜಾರ್
- ಶಿಫ್ಟ್
- ಟೀಚ್ನೂಕ್
- StockGro
- ಘಾತೀಯ ಶಕ್ತಿ
- ಗಂಟೆ
- ಆಕ್ಸಿಯೋಜಾಬ್
- ಟ್ರಾವ್‌ಕ್ಲಾನ್
- ಡಾಟ್‌ಪಿ
- ಫಸಲ್
ಈ ಟಾಪ್ ಸ್ಟಾರ್ಟಪ್ ಗಳು ವೃತ್ತಿಪರರು ತಮ್ಮ ವೃತ್ತಿಜೀವನದ ಬೆಳವಣಿಗೆಗೆ ಉತ್ತಮ ಅವಕಾಶವನ್ನು ನೀಡುತ್ತವೆ. ಲಿಂಕ್ಡ್ ಇನ್ ಟಾಪ್ ಸ್ಟಾರ್ಟಪ್ ನಲ್ಲಿ ಹೇಗೆ ಉದ್ಯೋಗವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ನಿರಾಜಿತ ಬ್ಯಾನರ್ಜಿ ಅವರು ನೀಡಿರುವ ಕೆಲವು ಟಿಪ್ಸ್ ಇಲ್ಲಿವೆ:
-
ಸಂಸ್ಥಾಪಕರಂತೆ ಯೋಚಿಸಿ:
ಈ ಪಟ್ಟಿಯಲ್ಲಿರುವ ಅನೇಕ ಟಾಪ್ ಸ್ಟಾರ್ಟಪ್ ಗಳು ಉದ್ಯಮಶೀಲತೆಯ ಮನೋಭಾವ ಇರುವ ಅಭ್ಯರ್ಥಿಗಳನ್ನು ನೋಡುತ್ತಿವೆ. ಈ ಅಭ್ಯರ್ಥಿಗಳು ವ್ಯಾಪಾರದ ಮೇಲೆ ಪ್ರಭಾವ ಬೀರಲು ಅವಕಾಶಗಳನ್ನು ಗುರುತಿಸಲು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವ ದೃಢತೆ ಮತ್ತು ನಿರ್ಣಯ ಹೊಂದಿದವರಾಗಿರಬೇಕು. ಈ ಹಿನ್ನೆಲೆಯಲ್ಲಿ ಉತ್ತಮವಾಗಿ ಏನನ್ನು ಮತ್ತು ಹೇಗೆ ಮಾಡಬಹುದೆಂಬುದನ್ನು ಅಭ್ಯರ್ಥಿಗಳಿಂದ ತಿಳಿದುಕೊಳ್ಳಲು ಸ್ಟಾರ್ಟಪ್ ಗಳು ಉತ್ಸುಕವಾಗಿವೆ. ಅಭ್ಯರ್ಥಿಗಳು ಹೇಗೆ ಕಾರ್ಯತತ್ಪರತೆ ಮತ್ತು ಕಾರ್ಯತಂತ್ರವಾಗಿ ಹೇಗೆ ಯೋಚಿಸುತ್ತಾರೆ, ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನವೀನ ಬಗೆಗೆ ಆಲೋಚನೆಗಳನ್ನು ಮಾಡುತ್ತಾರೆ ಎಂಬುದನ್ನು ಸಂದರ್ಶನದ ಸಂದರ್ಭದಲ್ಲಿ ಪ್ರದರ್ಶಿಸಬೇಕು.
-
ವೈವಿಧ್ಯಮಯ ತಂಡದ ಸದಸ್ಯರಾಗಿರಿ:
ಬಹಳಷ್ಟು ಸ್ಟಾರ್ಟಪ್ ಗಳು ಸಾಂಘಿಕ ಕೆಲಸ ಮತ್ತು ಸಹಯೋಗವನ್ನು ಬಯಸುತ್ತವೆ. ಅಂದರೆ, ನಿರ್ದಿಷ್ಟ ಕೆಲಸಕ್ಕೆ ಅಗತ್ಯವಿರುವ ನಿರ್ದಿಷ್ಟವಾದ ಕಠಿಣ ಕೌಶಲ್ಯಗಳ ಜೊತೆಗೆ ಪ್ರಸ್ತುತ ನೇಮಕ ಮಾಡಿಕೊಳ್ಳುತ್ತಿರುವ ಉನ್ನತ ಮಟ್ಟದ ಆದ್ಯತೆಯ ಸಾಫ್ಟ್ ಸ್ಕಿಲ್ ಗಳನ್ನು ಹೊಂದಿರಬೇಕೆಂಬುದಕ್ಕೆ ಆದ್ಯತೆ ನೀಡುತ್ತವೆ. ಅಭ್ಯರ್ಥಿಗಳು ತಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳುವ, ತಮ್ಮ ಸಹೋದ್ಯೋಗಿಗಳನ್ನು ಬೆಂಬಲಿಸುವ, ಸಕ್ರಿಯವಾಗಿ ಆಲಿಸುವ ಮತ್ತು ಗುಂಪು ಯೋಜನೆಗಳಿಗೆ ತಮ್ಮದೇ ಆದ ಕೊಡುಗೆ ನೀಡುವ ಮನೋಭಾವ ಹೊಂದಿದವರಾಗಿರಬೇಕು. ಈ ಮೂಲಕ ಎಲ್ಲಾ ಪ್ರಕ್ರಿಯೆಗಳಲ್ಲಿ ಉತ್ಸಾಹವನ್ನು ಪ್ರದರ್ಶಿಸುವ ಮತ್ತು ವೈವಿಧ್ಯಮಯ ತಂಡಗಳ ನಡುವೆ ಸಹಕಾರದಿಂದ ಕೆಲಸ ಮಾಡುವುದನ್ನು ಈ ಸ್ಟಾರ್ಟಪ್ ಗಳು ಬಯಸುತ್ತಿವೆ.
-
ಬೆಳವಣಿಗೆಯ ಮನಸ್ಥಿತಿ ಇರಲಿ:
ಸಾಮಾನ್ಯವಾಗಿ ಸ್ಟಾರ್ಟಪ್ ಗಳು ಬೌದ್ಧಿಕ ಕುತೂಹಲವನ್ನು ಪ್ರದರ್ಶಿಸುವ ಮತ್ತು ಕಲಿಯಲು ಹೆಚ್ಚು ಆಸಕ್ತಿ ಇರುವ ಅಭ್ಯರ್ಥಿಗಳನ್ನು ಬಯಸುತ್ತವೆ. ಈ ಮೂಲಕ ಅವರು ಕಂಪನಿಯೊಂದಿಗೆ ಬೆಳವಣಿಗೆ ಹೊಂದಬಹುದು. ಅಭ್ಯರ್ಥಿಗಳು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ, ಹಿನ್ನಡೆ ಉಂಟಾದರೆ ಅದರಿಂದ ಹೇಗೆ ಹೊರಬರುತ್ತಾರೆ ಮತ್ತು ತಮ್ಮ ತಪ್ಪುಗಳನ್ನು ಹೇಗೆ ತಿದ್ದಿಕೊಳ್ಳುತ್ತಾರೆ ಎಂಬುದನ್ನು ಕಂಪನಿಗಳು ತಿಳಿಯಬಯಸುತ್ತವೆ. ಕೆಲವೊಮ್ಮೆ ತಾವು ಮಾಡಿದ ಪ್ರಯತ್ನ ಕೈಗೂಡದಿದ್ದಾಗ ಅಂದರೆ ಯಶಸ್ಸು ಕಾಣದಿದ್ದಾಗ ಅಭ್ಯರ್ಥಿಗಳಿಂದ ಆ ಬಗ್ಗೆ ವಿವರಣೆ ಕೇಳಲು ಕಂಪನಿಗಳು ಬಯಸುತ್ತವೆ. ಯಾವುದೇ ಸಂದರ್ಭದಲ್ಲಿ ಏನಾದರೂ ತಪ್ಪು ಉಂಟಾದಾಗ ಅದನ್ನು ಸರಿಪಡಿಸಲು ಸಹಭಾಗಿತ್ವ ಮತ್ತು ತಂಡದ ಸಾಂಘಿಕ ಕೆಲಸದ ಕೌಶಲ್ಯಗಳನ್ನು ಬಳಸಿಕೊಳ್ಳಬೇಕು, ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು ಮತ್ತು ಶಿಸ್ತು ಮತ್ತು ಕ್ಷಮೆ ಯಾಚನೆ ಮಾಡುವ ಮನೋಭಾವ ಇರುವಂತಹ ಅಭ್ಯರ್ಥಿಗಳನ್ನು ಬಯಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Fri, 29 September 23