ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ
Inspiring story of DRDO scientists indigenously developing GaN chip tech: 2023ರಲ್ಲಿ ಗ್ಯಾಲಿಯಂ ನೈಟ್ರೈಡ್ ಚಿಪ್ ಟೆಕ್ನಾಲಜಿಯನ್ನು ಭಾರತ ಸ್ವಂತವಾಗಿ ಅಭಿವೃದ್ಧಿಪಡಿಸಿದೆ. ಡಾ. ಮೀನಾ ಮಿಶ್ರಾ ನೇತೃತ್ವದಲ್ಲಿ ಡಿಆರ್ಡಿಒ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. 2016ರಲ್ಲಿ ರಫೇಲ್ ಜೆಟ್ ಡೀಲ್ ಜೊತೆ ಈ ಗ್ಯಾನ್ ಚಿಪ್ ಟೆಕ್ನಾಲಜಿ ವರ್ಗಾಯಿಸಲು ಭಾರತ ಮಾಡಿಕೊಂಡ ಮನವಿಯನ್ನು ಫ್ರಾನ್ಸ್ ತಿರಸ್ಕರಿಸಿತ್ತು. ಅಲ್ಲಿಂದ ಹುಟ್ಟಿದ ಕಿಚ್ಚು 2023ರಲ್ಲಿ ಸ್ವಂತವಾಗಿ ಗ್ಯಾನ್ ಟೆಕ್ನಾಲಜಿ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಿದೆ.
ದೃಢ ಸಂಕಲ್ಪ ಮತ್ತು ಅವಶ್ಯಕತೆ ಎರಡೂ ಸೇರಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಾರತ ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ (GaN semiconductor technology) ಸಿದ್ಧಿಸಿಕೊಂಡ ಕಥೆ ಸಾಕ್ಷಿಯಾಗಿದೆ. ಗ್ಯಾನ್ ಚಿಪ್ಗಳನ್ನು ತಯಾರಿಸಬಲ್ಲ ತಂತ್ರಜ್ಞಾನ ಹೊಂದಿದ ಐದಾರು ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ. 2023ರಲ್ಲಿ ಡಾ. ಮೀನಾ ಮಿಶ್ರಾ (Dr. Meena Mishra) ನೇತೃತ್ವದಲ್ಲಿ ಡಿಆರ್ಡಿಒ ವಿಜ್ಞಾನಿಗಳ ತಂಡವೊಂದು ಈ ಐತಿಹಾಸಿಕ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿತ್ತು. ಭಾರತದ ಸ್ವಾವಲಂಬನೆಯ ಹಾದಿಯಲ್ಲಿ ಅದು ನಿಜಕ್ಕೂ ಮಹತ್ವಪೂರ್ಣವೆನಿಸುವ ಒಂದು ಮೈಲಿಗಲ್ಲು ಎಂದು ಬಣ್ಣಿಲಾಗುತ್ತಿದೆ.
ಏನಿದು ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ?
ಗ್ಯಾನ್ ಎಂದರೆ ಗ್ಯಾಲಿಯಂ ನೈಟ್ರೈಡ್ (Gallium Nitride). ಸಿಲಿಕಾನ್ಗಿಂತ ಇದು ಹೆಚ್ಚು ಉಷ್ಣ ಮತ್ತು ವಿದ್ಯುತ್ ಗುಣಗಳನ್ನು ಹೊಂದಿರುವ ವಸ್ತು. ರಾಡಾರ್, ಸೆಟಿಲೈಟ್, ಮಿಸೈಲ್, ಸೆನ್ಸರ್ ಇತ್ಯಾದಿ ಡಿಫೆನ್ಸ್ ಟೆಕ್ನಾಲಜಿಗಳಲ್ಲಿ ಗ್ಯಾನ್ ಚಿಪ್ಗಳನ್ನು ಬಳಸಲಾಗುತ್ತದೆ. ಹೀಗಾಗಿ, ರಕ್ಷಣಾ ಕ್ಷೇತ್ರದಲ್ಲಿ ಗ್ಯಾನ್ ಚಿಪ್ಗಳಿಗೆ ಬೇಡಿಕೆ ಇದೆ. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಕೊರಿಯಾ ಮತ್ತು ಜರ್ಮನಿ ದೇಶಗಳು ಮಾತ್ರ ಇಂಥ ಚಿಪ್ ತಯಾರಿಸಬಲ್ಲ ತಂತ್ರಜ್ಞಾನ ಹೊಂದಿವೆ.
ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ
ಫ್ರಾನ್ಸ್ ಕೊಡಲ್ಲ ಎಂದಾಗ ಹುಟ್ಟಿಕೊಂಡ ಕಿಚ್ಚು…
2016ರಲ್ಲಿ 36 ರಫೇಲ್ ಫೈಟರ್ ಜೆಟ್ಗಳನ್ನು ಖರೀದಿಸಲು ಫ್ರಾನ್ಸ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತು. ಈ ವೇಳೆ, ಗ್ಯಾನ್ ಚಿಪ್ ಟೆಕ್ನಾಲಜಿಯನ್ನು ತನಗೆ ವರ್ಗಾಯಿಸಬೇಕೆಂದು (Technology transfer) ಭಾರತ ಮನವಿ ಮಾಡಿಕೊಂಡಿತು. ಫ್ರಾನ್ಸ್ ತಾನು ಬೇಕಾದರೆ ಚಿಪ್ಗಳನ್ನು ತಯಾರಿಸಿ ಕೊಡುತ್ತೇವೆ, ಟೆಕ್ನಾಲಜಿ ವರ್ಗಾವಣೆ ಸಾಧ್ಯ ಇಲ್ಲ ಎಂದು ಹೇಳಿತು.
ರಫೇಲ್ ಕಾರ್ಯಕ್ಷಮತೆಯಲ್ಲಿ ಈ ಗ್ಯಾನ್ ಚಿಪ್ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ, ಇಂಥ ವಿಚಾರದಲ್ಲಿ ಬೇರೆ ದೇಶದ ಮೇಲೆ ಅವಲಂಬನೆ ಆಗುವುದರ ಬದಲು ಸ್ವಂತವಾಗಿ ಚಿಪ್ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಉತ್ತಮ ಎಂದು ಆಲೋಚಿಸಿದ ಪರಿಣಾಮ, ಡಿಆರ್ಡಿಒ ವಿಜ್ಞಾನಿಗಳಿಂದ ಅವಿರತ ಪ್ರಯತ್ನ ಮೊದಲುಗೊಂಡಿತು.
ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ
ಡಿಆರ್ಡಿಒ ಡೈರೆಕ್ಟರ್ ಆದ ಡಾ. ಮೀನಾ ಮಿಶ್ರಾ ನೇತೃತ್ವದಲ್ಲಿ ಡಿಆರ್ಡಿಒ ವಿಜ್ಞಾನಿಗಳ ತಂಡವು 2023ರಲ್ಲಿ ಗ್ಯಾಲಿಯಂ ನೈಟ್ರೈಡ್ ಚಿಪ್ ತಯಾರಿಸುವ ತಂತ್ರಜ್ಞಾನದ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಯಿತು. ಡಿಆರ್ಡಿಒದ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬ್ನಲ್ಲಿ ನಿರಂತರ ಪ್ರಯೋಗಗಳ ಮೂಲಕ ಈ ಸಾಧನೆ ಮಾಡಲಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




