
ಈ ದುನಿಯಾದಲ್ಲಿ ಯಾರು, ಏನು ಬೇಕಾದರೂ ಆಗಬಹುದು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಎಲ್ಲರಿಗೂ ಎಲ್ಲಾ ಅವಕಾಶಗಳ ಬಾಗಿಲು ತೆರೆದೇ ಇರುತ್ತವೆ. ಛಲ, ನಿರೀಕ್ಷೆ, ಭರವಸೆ ಬಿಡಬಾರದು ಅಷ್ಟೇ. ಜೀವನ ಇನ್ನು ಬರೀ ಶೂನ್ಯ ಎಂದು ಹತಾಶೆಗೊಳಗಾಗದೆ ಎಂಥೆಂಥ ಸಂಕಷ್ಟ ಸ್ಥಿತಿಯಿಂದ ಜನರು ಕೆಸರಲ್ಲಿ ಕಮಲ ಅರಳುವಂತೆ (Inspiring story) ಬೆಳಗಿದ್ದಾರೆ. ಅಂಥವರಲ್ಲಿ ಮುಂಬೈನ ಪ್ರತೀಕ್ಷಾ ತೊಂಡವಾಳ್ಕರ್ (Pratiksha Tondwalkar) ಒಬ್ಬರು. ಎಸ್ಬಿಐ ಬ್ಯಾಂಕ್ನಲ್ಲಿ ನೆಲ ಒರೆಸುತ್ತಿದ್ದ ಈ ಮಹಿಳೆ ಈಗ ಹಿರಿಯ ಅಧಿಕಾರಿಯಾಗಿ ನಿವೃತ್ತಿ ಪಡೆಯಲು ದಿನಗಣನೆ ಎಣಿಸುತ್ತಿದ್ದಾರೆ.
ಪ್ರತೀಕ್ಷಾ ಅವರ ಕಥೆ ನಿಜಕ್ಕೂ ಯಾರಿಗಾದರೂ ಸ್ಪೂರ್ತಿಯಾಗುವಂತಹದ್ದು. ಸಣ್ಣ ವಯಸ್ಸಲ್ಲೇ ಮದುವೆ… ಸಣ್ಣ ವಯಸ್ಸಲ್ಲೇ ವೈದವ್ಯ. ಕಂಕುಳಲ್ಲಿ ಒಂದು ಮಗು. ಎಸ್ಸೆಸ್ಸೆಲ್ಸಿಯೂ ಆಗದ ಓದು. ಕಸ ಗುಡಿಸೋದು ಬಿಟ್ಟರೆ ಗೊತ್ತಿರದ ಬೇರೆ ಕಾಯಕ. ಇದು ಪ್ರತೀಕ್ಷಾ ಅವರು 20ರ ವಯಸ್ಸಿನಲ್ಲಿ ಇದ್ದ ಸ್ಥಿತಿ.
ಪ್ರತೀಕ್ಷಾ ಅವರು 17ರ ವಯಸ್ಸಿನಲ್ಲಿ ಸದಾಶಿವ್ ಕಡು ಎಂಬುವರನ್ನು ಮದುವೆಯಾದರು. 10ನೇ ಇಯತ್ತೆ ಕೂಡ ಓದಲು ಆಗಿರಲಿಲ್ಲ. ಇವರ ಪತಿ ಮುಂಬೈನ ಎಸ್ಬಿಐ ಬ್ಯಾಂಕಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಒಂದೆರಡು ವರ್ಷದಲ್ಲಿ ಕಡು ಅವರು ಅಪಘಾತದಲ್ಲಿ ದುರ್ಮರಣಗೊಂಡರು. ವಿಧವೆಯಾದ ಪ್ರತೀಕ್ಷಾಗೆ ಒಂದು ಮಗುವಿನ ಪಾಲನೆ ಮತ್ತು ಬದುಕಿನ ಹೋರಾಟದ ಸವಾಲು ಇತ್ತು.
ಇದನ್ನೂ ಓದಿ: ಪಾಕ್ ದಾಳಿಯನ್ನು ವಿಫಲಗೊಳಿಸಿದ ಭಾರತದ ಸುದರ್ಶನ ಚಕ್ರ S-400: ಇದರ ತಾಕತ್ತಿನ ಬಗ್ಗೆ ತಿಳಿದುಕೊಳ್ಳಲೇಬೇಕು
ಸರಿಯಾಗಿ ಓದಿಲ್ಲದ ಕಾರಣ ಪ್ರತೀಕ್ಷಾಗೆ ಎಸ್ಬಿಐನಲ್ಲಿ ಸ್ವೀಪರ್ ಆಗುವ ಕೆಲಸ ಮಾತ್ರವೇ ಸಿಕ್ಕಿದ್ದು. ತಿಂಗಳಿಗೆ 60ರಿಂದ 65 ರೂ ಮಾತ್ರವೇ ಆಕೆಗೆ ಇದ್ದ ಗಳಿಕೆ. ಬ್ಯಾಂಕಲ್ಲಿ ಈ ಕೆಲಸ, ಮನೆಗೆ ಹೋಗಿ ಮಗುವಿನ ಆರೈಕೆ, ಜೊತೆ ಜೊತೆಗೆ ಇತರ ಮನಗೆಲಸಗಳು… ಹೀಗೆ ಪ್ರತೀಕ್ಷಾ ಬದುಕು ಸಾಗಿತ್ತು.
ಪ್ರತೀಕ್ಷಾ ತನ್ನ ಬದುಕು ಇಷ್ಟೇ ಎಂದು ಕೈಕಟ್ಟಿ ಕೂರಲಿಲ್ಲ. ಹೊಸ ಆಶಯದಲ್ಲಿ ಹೊಸ ದಾರಿ ಅನ್ವೇಷಿಸಿದರು. ಹಗಲಿನಲ್ಲಿ ಕೆಲಸ ಮಾಡುತ್ತಾ, ನೈಟ್ ಕಾಲೇಜಿನಲ್ಲಿ ಓದು ಮುಂದುವರಿಸಿದರು. 12ನೇ ತರಗತಿ ಪಾಸು ಮಾಡಿದರು. ಅದರ ಫಲವಾಗಿ, ಎಸ್ಬಿಐ ಬ್ಯಾಂಕ್ನಲ್ಲಿ ಅವರಿಗೆ ಕ್ಲರ್ಕ್ ಆಗಿ ಬಡ್ತಿ ಸಿಕ್ಕಿತು.
ಇದನ್ನೂ ಓದಿ: ಆಪರೇಷನ್ ಸಿಂದೂರ್: ಹ್ಯಾಮರ್, ಲಾಯ್ಟರಿಂಗ್ ಮ್ಯುನಿಶನ್ಗಳ ತಯಾರಿಸಿದ್ದು ಬೆಂಗಳೂರಿನ ಕಂಪನಿಗಳು
1993ರಲ್ಲಿ ಪ್ರತೀಕ್ಷಾ ಅವರು ಮರುವಿವಾಹವಾದರು. ಪ್ರಮೋದ್ ತೊಂಡವಾಳ್ಕರ್ ಅವರ ಕೈಹಿಡಿದರು. ಹೊಸ ಪತಿಯು ಪ್ರತೀಕ್ಷಾಗೆ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಉತ್ತೇಜಿಸಿದರು. ಶ್ರಮದ ಫಲವಾಗಿ ಪ್ರತೀಕ್ಷಾ ಅವರು ಟ್ರೈನಿ ಆಫೀಸರ್ ಆಗಿ ಬಡ್ತಿ ಪಡೆದರು. ಅಲ್ಲಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದ ಅವರು ಈಗ ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದಾರೆ. ಇನ್ನೊಂದು ವರ್ಷದಲ್ಲಿ ಅವರು ನಿವೃತ್ತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ