‘ಹಮಾಲಿ ಆಡಿದ ಆ ಒಂದು ಮಾತು ಜೀವನದ ದಿಕ್ಕನ್ನೇ ಬದಲಿಸಿತು..!’- ಎನ್ವಿಡಿಯಾ ಸಿಇಒ ಜೆನ್ಸನ್ ಬಿಚ್ಚಿಟ್ಟ ಅಚ್ಚರಿಯ ಕಥೆ
Gardener's words change the career trajectory of Nvidia founder: ಅತಿ ಶಕ್ತಿಶಾಲಿ ಚಿಪ್ಗಳನ್ನು ತಯಾರಿಸುವ ಕಂಪನಿಯಾದ ಎನ್ವಿಡಿಯಾ ಇದೀಗ ವಿಶ್ವದಲ್ಲೇ ಅತಿಹೆಚ್ಚು ಮಾರುಕಟ್ಟೆ ಸಂಪತ್ತಿರುವ ಸಂಸ್ಥೆ ಎನಿಸಿದೆ. ಇದರ ಸಿಇಒ ಮತ್ತು ಅಧ್ಯಕ್ಷ ಜೆನ್ಸೆನ್ ಹುವಾಂಗ್ ಕೆಲಸದಲ್ಲಿ ಹೊಂದಿರುವ ಶ್ರದ್ಧೆ ಕಾರ್ಪೊರೇಟ್ ವಲಯದಲ್ಲಿ ಜನಜನಿತವಾಗಿದೆ. ಅವರು ಈ ಗುಣ ಮೈಗೂಡಿಸಿಕೊಳ್ಳಲು ಜಪಾನ್ನಲ್ಲಿ ಹಮಾಲಿಯೊಬ್ಬನ ಭೇಟಿ ಕಾರಣವಾಗಿತ್ತು.
ಕ್ಯಾಲಿಫೋರ್ನಿಯಾ, ಜೂನ್ 20: ಎನ್ವಿಡಿಯಾ ಕಂಪನಿ ಹೆಸರು ಈಗ ನೀವು ಹೆಚ್ಚೆಚ್ಚು ಕೇಳುತ್ತಿರಬಹುದು. ಇದು ಮುಂದಿನ ಕೆಲ ದಶಕಗಳ ಕಾಲ ವಿಶ್ವದ ಸೂಪರ್ ಸ್ಟಾರ್ ಕಂಪನಿ ಎನಿಸಲಿದೆ. ಕಳೆದ ಎರಡು ವರ್ಷದಿಂದ ಇದು ಮಿಂಚಿನ ವೇಗದಲ್ಲಿ ಬೆಳೆದಿದೆ. ಹಳೆಯ ದಿಗ್ಗಜರಾದ ಆ್ಯಪಲ್, ಮೈಕ್ರೋಸಾಫ್ಟ್ ಕಂಪನಿಗಳನ್ನೇ ಮಾರುಕಟ್ಟೆ ಸಂಪತ್ತಿನಲ್ಲಿ ಎನ್ವಿಡಿಯಾ ಹಿಂದಿಕ್ಕಿ ವಿಶ್ವದ ನಂಬರ್ ಒನ್ ಕಂಪನಿ ಎನಿಸಿರುವುದು ನಿಮಗೆ ಗೊತ್ತಿರಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಭಿವೃದ್ಧಿಗೆ ಬೇಕಾದ ಮೂಲಕ ಸರಕೆಂದರೆ ಚಿಪ್ಗಳು. ಈ ವಿಚಾರದಲ್ಲಿ ಎನ್ವಿಡಿಯಾ ಮುಂಚೂಣಿಯಲ್ಲಿದೆ. ಇದರ ಸಿಇಒ ಜೆನ್ಸೆನ್ ಹುವಾಂಗ್. ತೈವಾನ್ ಮೂಲದ ಅಮೆರಿಕನ್ ಉದ್ಯಮಿಯಾಗಿರುವ ಜೆನ್ಸನ್ (Jensen Huang) ಈಗ ಬಹು ಜನಪ್ರಿಯತೆಯಲ್ಲಿರುವ ಸಿಇಒ ಆಗಿದ್ದಾರೆ. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ಮಾತನಾಡುತ್ತಾ ಜೆನ್ಸನ್ ಹುವಾಂಗ್ ಅವರು ತಮ್ಮ ವೃತ್ತಿಜೀವನದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ತೋಟದ ಹಮಾಲಿ ಆಡಿದ ಆ ಒಂದು ಮಾತು…
ಜೆನ್ಸನ್ ಹುವಾಂಗ್ ಅವರು ಅಂತಾರಾಷ್ಟ್ರೀಯ ಟ್ರಿಪ್ ಭಾಗವಾಗಿ ಜಪಾನ್ನ ಕ್ಯೋಟೋಗೆ ಹೋಗಿರುತ್ತಾರೆ. ಅಲ್ಲಿ ಸಿಲ್ವರ್ ಟೆಂಪಲ್ಗೆ ಹೋಗಿದ್ದಾಗ ಗಾರ್ಡನಿಂಗ್ ಕೆಲಸ ಮಾಡುತ್ತಿದ್ದ ಹಮಾಲಿಯೊಬ್ಬರನ್ನು ನೋಡುತ್ತಾರೆ. ಸುಡುಸುಡುವ ಬಿಸಿಲಿನಲ್ಲೂ ಆ ವ್ಯಕ್ತಿ ತೋಟದ ಪಾಚಿಯನ್ನು (moss) ಕತ್ತರಿಸುತ್ತಾ ಇರುವುದನ್ನು ಕಂಡು ಹುವಾಂಗ್ ಅವರಿಗೆ ಕುತೂಹಲ ಹುಟ್ಟುತ್ತದೆ.
ಇದನ್ನೂ ಓದಿ: ಚೀನಾ ಬೆಳವಣಿಗೆಗೆ ಸಹಾಯವಾಗಿದ್ದ ಮೂರಂಶಗಳು ಭಾರತಕ್ಕೆ ತೊಡಕಾಗಿವೆ: ಸಿಇಎ ಅನಂತನಾಗೇಶ್ವರನ್
ಆ ಹಮಾಲಿ ಬಳಿ ಹೋಗಿ, ‘ಏನು ಮಾಡುತ್ತಿದ್ದೀರಿ?’ ಎಂದು ಕೇಳುತ್ತಾರೆ. ಅದಕ್ಕೆ ಆ ಕೆಲಸಗಾರ, ‘ನಾನು ಕಳೆ ಕೀಳುತ್ತಿದ್ದೇನೆ. ಈ ಉದ್ಯಾನವನ್ನು ಜೋಪಾನ ಮಾಡುತ್ತಿದ್ದೇನೆ,’ ಎನ್ನುತ್ತಾರೆ. ಈ ಉದ್ಯಾನ ಇಷ್ಟು ದೊಡ್ಡದಿದೆಯಲ್ಲ, ಈ ಸುಡು ಬಿಸಿಲಿನಲ್ಲಿ ಇಷ್ಟೆಲ್ಲ ಕೆಲಸವನ್ನು ಹೇಗೆ ಮಾಡುತ್ತೀರಿ ಎಂದು ಹುವಾಂಗ್ ಅಚ್ಚರಿ ವ್ಯಕ್ತಪಡಿಸುತ್ತಾರೆ.
ನೋಡಿ, ಈಗ ಆ ಹಮಾಲಿ ಕೊಟ್ಟ ಉತ್ತರ ಹೀಗಿತ್ತು: ‘ನನ್ನ ಉದ್ಯಾನವನ್ನು 25 ವರ್ಷದಿಂದ ಪೋಷಿಸಿಕೊಂಡು ಬಂದಿದ್ದೇನೆ. ನನಗೆ ಸಾಕಷ್ಟು ಸಮಯ ಇದೆ,’.
ಸಾಕಷ್ಟು ಸಮಯ ಇದೆ ಎಂದು ಆ ಹಮಾಲಿ ಕೊಟ್ಟ ಉತ್ತರ ಜೆನ್ಸೆನ್ ಹುವಾಂಗ್ ಅವರ ಮನಸಿಗೆ ನಾಟುತ್ತದೆ. ಅದು ಅವರ ವೃತ್ತಿಜೀವನಕ್ಕೆ ಹೊಸ ತಿರುವು ಕೊಡುತ್ತದೆ. ಕೆಲಸದ ಬಗ್ಗೆ ಇದ್ದ ಅವರ ಧೋರಣೆಯೇ ಬದಲಾಗಿ ಹೋಗುತ್ತದೆ.
ಇದನ್ನೂ ಓದಿ: ಮಹಾಸಾಗರ ತಳದಲ್ಲಿ ಕೋಬಾಲ್ಟ್ ನಿಕ್ಷೇಪ; ಮೈನಿಂಗ್ಗೆ ಅನುಮತಿ ಕೋರಿದ ಭಾರತ; ಅತ್ತ ಶ್ರೀಲಂಕಾದಿಂದಲೂ ಪೈಪೋಟಿ
ಹಮಾಲಿಯ ಆ ಮಾತುಗಳಿಂದ ಅರ್ಥವಾಗುವುದೇನು?
ಜಪಾನ್ನ ಆ ಹಮಾಲಿ ತಾನು ಮಾಡುವ ಕೆಲಸದ ಬಗ್ಗೆ ಹೊಂದಿರುವ ಶ್ರದ್ಧೆ ಆತನ ಮಾತುಗಳಲ್ಲಿ ತೋರುತ್ತದೆ. ಹುವಾಂಗ್ಗೆ ಸಿಕ್ಕ ಪಾಠವೇ ಅದು… ಹಾಗಾದರೆ, ಬಹಳ ಸಮಯ ಇದೆ ಎಂದು ಹೇಳಿದ ಆ ವ್ಯಕ್ತಿಯ ಮಾತಿನ ಮರ್ಮ ಇನ್ನೂ ಆಸಕ್ತಿ ಕೆರಳಿಸುತ್ತದೆ.
‘ಅವರ ಮಾತು ನನಗೆ ಒಂದು ಪಾಠ ಕಲಿಸಿತು. ಹಮಾಲಿ ತನಗೆ ಗೊತ್ತಿರುವ ಕೆಲಸದ ಬಗ್ಗೆ ಸಂಪೂರ್ಣ ತೊಡಗಿಸಿಕೊಂಡಿದ್ದರು. ಹೀಗೆ ಮಾಡಿದಾಗ ನಿಮಗೆ ಬಹಳಷ್ಟು ಸಮಯ ಇರುತ್ತದೆ,’ ಎಂದು ಎನ್ವಿಡಿಯಾದ ಸಂಸ್ಥಾಪಕರು ಹೇಳುತ್ತಾರೆ.
‘ಆ ದಿನದ ಅತಿ ಮುಖ್ಯ ಕೆಲಸಗಳನ್ನು ಪಟ್ಟಿ ಮಾಡುತ್ತೇನೆ. ಬೆಳಗ್ಗೆ ನಾನು ಮೊದಲು ಆ ಕೆಲಸಗಳನ್ನು ಪೂರ್ತಿಗೊಳಿಸುತ್ತೇನೆ. ಕೆಲಸಕ್ಕೆ ಬರುವ ಹೊತ್ತಿಗೆ ನನಗೆ ಯಶಸ್ಸು ಸಿಕ್ಕಾಗಿರುತ್ತದೆ. ಇದರಿಂದ ಬೇರೆಯವರಿಗೆ ಸಹಾಯ ಮಾಡಲು ನನಗೆ ಕಾಲಾವಕಾಶ ಸಿಗುತ್ತದೆ. ನನ್ನನ್ನು ಭೇಟಿಯಾಗಬಯಸುವ ಜನರು ಅದಕ್ಕಾಗಿ ಕ್ಷಮೆ ಕೋರಿದರೆ, ನನಗೆ ಸಾಕಷ್ಟು ಸಮಯ ಇದೆ ಬನ್ನಿ ಎಂಬುದು ಸದಾ ನನ್ನ ಬಳಿ ಇರುವ ಉತ್ತರ,’ ಎಂದು ಜೆನ್ಸನ್ ಹುವಾಂಗ್ ತಿಳಿಸುತ್ತಾರೆ.
ಇದನ್ನೂ ಓದಿ: ‘996’ ವಿರುದ್ಧ ತಿರುಗಿಬಿದ್ಧ ಚೀನೀ ಯುವಕರು, ಯುವತಿಯರು; ಕಾರ್ಪೊರೇಟ್ ವ್ಯವಸ್ಥೆ ವಿರುದ್ಧ ‘ಹಕ್ಕಿ’ಗಳ ಟ್ರೆಂಡ್
61 ವರ್ಷದ ಜೆನ್ಸನ್ ಹುವಾಂಗ್ 1993ರಲ್ಲಿ ಕ್ರಿಸ್ ಮಲಚೋವ್ಸ್ಕಿ ಮತ್ತು ಕರ್ಟಿಸ್ ಪ್ರೀಮ್ ಜೊತೆ ಸೇರಿ ಎನ್ವಿಡಿಯಾ ಕಂಪನಿಯನ್ನು ಸ್ಥಾಪಿಸುತ್ತಾರೆ. ಆಗಿನಿಂದಲೂ ಜೆನ್ಸನ್ ಅವರು ಎನ್ವಿಡಿಯಾದ ಸಿಇಒ ಮತ್ತು ಪ್ರೆಸಿಡೆಂಟ್ ಆಗಿ ಚುಕ್ಕಾಣಿ ಹಿಡಿದು ಬೆಳೆಸಿದ್ದಾರೆ. ಇವತ್ತು ಅವರ ಕಂಪನಿಯ ಮಾರುಕಟ್ಟೆ ಸಂಪತ್ತು 3.31 ಟ್ರಿಲಿಯನ್ ಡಾಲರ್ನಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ