Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು

ಬೆಂಗಳೂರಿನಲ್ಲಿರುವ ವಿಸ್ಟ್ರಾನ್​​ ತಯಾರಿಕಾ ಘಟಕವನ್ನು ಸುಮಾರು 5,000 ಕೋಟಿ ರೂಪಾಯಿಗೆ ಖರೀದಿಸಲು ಟಾಟಾ ಆಸಕ್ತಿ ವಹಿಸಿದೆ ಎಂದು ವರದಿಯಾಗಿದೆ.

Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು
ಟಾಟಾ ಗ್ರೂಪ್
Image Credit source: Reuters
Updated By: Ganapathi Sharma

Updated on: Nov 30, 2022 | 10:12 AM

ನವದೆಹಲಿ: ಆ್ಯಪಲ್ ಇಂಕ್​ನ (Apple Inc) ಐಫೋನ್​ ಅನ್ನು (iPhone) ಅನ್ನು ಭಾರತದಲ್ಲಿ ತಯಾರಿಸುವ ಮತ್ತು ಮಾರಾಟ ಮಾಡುವ ತೈವಾನ್​ನ ತೈಪೆಯಿಯ (Taipei) ವಿಸ್ಟ್ರಾನ್​ (Wistron Corp) ಕಂಪನಿಯನ್ನು ಖರೀದಿಸುವ ಬಗ್ಗೆ ಟಾಟಾ ಸಮೂಹ (Tata Group) ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿರುವ (Bengaluru) ವಿಸ್ಟ್ರಾನ್​​ ತಯಾರಿಕಾ ಘಟಕವನ್ನು ಸುಮಾರು 5,000 ಕೋಟಿ ರೂಪಾಯಿಗೆ ಖರೀದಿಸಲು ಟಾಟಾ ಆಸಕ್ತಿ ವಹಿಸಿದೆ ಎಂದು ‘ದಿ ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ. ವಿಸ್ಟ್ರಾನ್ 2017ರಲ್ಲಿ ಭಾರತದಲ್ಲಿ ಐಫೋನ್ ತಯಾರಿ ಆರಂಭಿಸಿತ್ತು. ಕಂಪನಿಯ ಬೆಂಗಳೂರಿನಲ್ಲಿರುವ ಘಟಕದಲ್ಲಿ ಐಫೋನ್ ತಯಾರಿಸಲಾಗುತ್ತಿದೆ.

ಆ್ಯಪಲ್ ಇಂಕ್​ನ ತೈವಾನ್ ಮೂಲದ ಪೂರೈಕೆದಾರರೊಂದಿಗೆ ಟಾಟಾ ಸಮೂಹ ಮಾತುಕತೆಯಲ್ಲಿದೆ ಎಂದು ಸೆಪ್ಟೆಂಬರ್​ನಲ್ಲಿ ‘ಬ್ಲೂಮ್​ಬರ್ಗ್’ ತಾಣ ವರದಿ ಮಾಡಿತ್ತು. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಜಂಟಿ ಘಟಕ ಆರಂಭಿಸಿ ವಿಸ್ತರಿಸುವುದು ಟಾಟಾ ಉದ್ದೇಶವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಮೊದಲ ಭಾರತೀಯ ಐಫೋನ್ ತಯಾರಿಕಾ ಕಂಪನಿಯಾಗಲಿದೆ ಟಾಟಾ

ಒಂದು ವೇಳೆ ವ್ಯವಹಾರ ಅಂತಿಮಗೊಂಡರೆ ಐಫೋನ್ ತಯಾರಿಸುವ ಮೊದಲ ಭಾರತೀಯ ಕಂಪನಿಯಾಗಿ ಟಾಟಾ ಗುರುತಿಸಿಕೊಳ್ಳಲಿದೆ. ಸದ್ಯ ವಿಸ್ಟ್ರಾನ್, ಮತ್ತು ಫಾಕ್ಸ್​ಕಾನ್ ಟೆಕ್ನಾಲಜಿ ಗ್ರೂಪ್​ಗಳು ಭಾರತ ಮತ್ತು ಚೀನಾದಲ್ಲಿ ಐಫೋನ್ ತಯಾರಿಸುತ್ತಿವೆ. ಭಾರತೀಯ ಕಂಪನಿ ಐಫೋನ್ ತಯಾರಿ ಆರಂಭಿಸಿದರೆ ಚೀನಾಕ್ಕೆ ಸ್ಪರ್ಧೆಯೊಡ್ಡುವ ಭಾರತದ ಯತ್ನಕ್ಕೆ ಯಶಸ್ಸು ದೊರೆಯಲಿದೆ. ಚೀನಾದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಹಾಗೂ ಅನಿಶ್ಚಿತತೆಯ ಈ ಸಂದರ್ಭದಲ್ಲಿ ಜಾಗತಿಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳು ಭಾರತದ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳುವಂತೆ ಮನವೊಲಿಸುವಲ್ಲಿ ಈ ಒಪ್ಪಂದ ಪೂರಕವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Multibagger Stock: ಟಾಟಾ ಸಮೂಹದ ಈ ಸ್ಟಾಕ್​ನಿಂದ ವರ್ಷದಲ್ಲಿ ಶೇ 1000ದಷ್ಟು ರಿಟರ್ನ್ಸ್

ಎಲೆಕ್ಟ್ರಾನಿಕ್ಸ್, ಹೈಟೆಕ್ ಉತ್ಪಾದನೆ ಕ್ಷೇತ್ರಗಳಿಗೂ ಕಂಪನಿಯ ಕಾರ್ಯಕ್ಷೇತ್ರವನ್ನು ವಿಸ್ತರಿಸುವುದು ಪ್ರಮುಖ ಗುರಿಯಾಗಿದೆ ಎಂದು ಟಾಟಾ ಸಮೂಹದ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಇತ್ತೀಚೆಗೆ ಹೇಳಿದ್ದರು. ಸದ್ಯ ಸಾಫ್ಟ್​​ವೇರ್, ಉಕ್ಕು, ಕಾರು ಉತ್ಪಾದನೆ ಕ್ಷೇತ್ರಗಳಲ್ಲಿ ಟಾಟಾ ತೊಡಗಿಸಿಕೊಂಡಿದೆ.

ವಿಸ್ಟ್ರಾನ್​ನ ಭಾರತದ ಘಟಕ ಸದ್ಯ ನಷ್ಟ ಅನುಭವಿಸುತ್ತಿದ್ದು, ಟಾಟಾ ಸಮೂಹದ ಜತೆ ಸಹಭಾಗಿತ್ವ ಹೊಂದಿದರೆ ಚೇತರಿಕೆ ಕಾಣುವ ಸಾಧ್ಯತೆ ಇದೆ ಎಂದು ‘ಬ್ಲೂಮ್​ಬರ್ಗ್’ ವರದಿ ಹೇಳಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ