LIC: ರಿಲಯನ್ಸ್ ಕ್ಯಾಪಿಟಲ್ಗೆ ಸಾಲ ಕೊಟ್ಟು ಕೈಸುಟ್ಟುಕೊಂಡ ಎಲ್ಐಸಿ; 3,400 ಕೋಟಿ ರೂ. ನಷ್ಟ ಸಾಧ್ಯತೆ
ರಿಲಯನ್ಸ್ ಕ್ಯಾಪಿಟಲ್ ಸಾಲದ ಖಾತೆಗಳನ್ನೇ ಮಾರಾಟ ಮಾಡಲು ಎಲ್ಐಸಿ ನಿರ್ಧರಿಸಿದೆ. ಎಸಿಆರ್ಇ ಎಸ್ಎಸ್ಜಿ ಸಾಲದ ಖಾತೆಯನ್ನು ಖರೀದಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರ ರಿಲಯನ್ಸ್ ಕ್ಯಾಪಿಟಲ್ಗೆ (Reliance Capital) ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಜೀವ ವಿಮಾ ನಿಗಮ (LIC) 3,400 ಕೋಟಿ ರೂ. ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸಾಲ ವಸೂಲಿ ಕಷ್ಟಕರವಾಗಿ ಪರಿಣಮಿಸಿದ್ದು, ಕೇವಲ 782 ಕೋಟಿ ರೂ. ಮಾತ್ರ ಮರುಪಾವತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾಲದ ಖಾತೆಗಳನ್ನೇ ಮಾರಾಟ ಮಾಡಲು ಎಲ್ಐಸಿ ಮುಂದಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ರಿಲಯನ್ಸ್ ಕ್ಯಾಪಿಟಲ್ ಸಾಲದ ಖಾತೆಗಳನ್ನೇ ಮಾರಾಟ ಮಾಡಲು ಎಲ್ಐಸಿ ನಿರ್ಧರಿಸಿದೆ. ಎಸಿಆರ್ಇ ಎಸ್ಎಸ್ಜಿ ಸಾಲದ ಖಾತೆಯನ್ನು ಖರೀದಿಸುವ ಸಾಧ್ಯತೆ ಇದೆ. ಆದರೆ, ಎಲ್ಐಸಿ ಭಾರೀ ಬೆಲೆ ತೆರಬೇಕಾಗಿ ಬರಲಿದೆ. ಎಸಿಆರ್ಇ ಎಸ್ಎಸ್ಜಿಗೆ ಶೇಕಡಾ 73ರ ರಿಯಾಯಿತಿ ದರದಲ್ಲಿ ರಿಲಯನ್ಸ್ ಕ್ಯಾಪಿಟಲ್ ಸಾಲದ ಖಾತೆ ಮಾರಾಟ ಮಾಡಲು ಎಲ್ಐಸಿ ಮುಂದಾಗಿದೆ. ಆದರೆ, ದೊಡ್ಡ ಮೊತ್ತವನ್ನು ಎಲ್ಐಸಿ ಕಳೆದುಕೊಳ್ಳಬೇಕಾಗಬಹುದು ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: LIC Shares: ಎಲ್ಐಸಿ ಷೇರುಮೌಲ್ಯದಲ್ಲಿ ಜಿಗಿತ; ಈಗ ಖರೀದಿ ಸೂಕ್ತವೇ? ತಜ್ಞರ ಅಭಿಪ್ರಾಯ ಇಲ್ಲಿದೆ
ಸ್ವಿಸ್ ಚಾಲೆಂಜ್ ಬಿಡ್ಡಿಂಗ್ ವಿಧಾನದ ಮೂಲಕ ಸಾಲದ ಖಾತೆಗಳ ಮಾರಾಟ ಮಾಡಲಾಗುತ್ತದೆ. ಈ ವಿಧಾನದಲ್ಲಿ ಸಾಲದ ಖಾತೆಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾಗುತ್ತದೆ. ಯಾರು ಬೇಕಾದರೂ ಬಿಡ್ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ವಿಧಾನದಲ್ಲಿ, ಮೊತ್ತ ಮೊದಲು ಬಿಡ್ ಸಲ್ಲಿಸಿದ ವ್ಯಕ್ತಿಯಿಂದ ಹೆಚ್ಚು ಮೊತ್ತಕ್ಕೆ ಬೇರೆ ಯಾರಾದರೂ ಬಿಡ್ ಸಲ್ಲಿಸಿದಲ್ಲಿ ಇಷ್ಟೇ ಮೊತ್ತದ ಬಿಡ್ ಸಲ್ಲಿಸಲು ಮೊದಲ ಗುತ್ತಿಗೆದಾರನಿಗೆ ಅವಕಾಶ ಒದಗಿಸಲಾಗುತ್ತದೆ. ಆದರೆ, ರಿಲಯನ್ಸ್ ಕ್ಯಾಪಿಟಲ್ ವಿಚಾರಕ್ಕೆ ಬಂದಾಗ ಬಿಡ್ ಸಲ್ಲಿಕೆಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ.
ರಿಲಯನ್ಸ್ ಕ್ಯಾಪಿಟಲ್ ಬಳಿ 20 ಕಂಪನಿಗಳು
ರಿಲಯನ್ಸ್ ಕ್ಯಾಪಿಟಲ್ ಒಡೆತನದಲ್ಲಿ ಸುಮಾರು 20 ಹಣಕಾಸು ಸೇವಾ ಕಂಪನಿಗಳಿವೆ. ಇದರಲ್ಲಿ ಸೆಕ್ಯುರಿಟೀಸ್ ಬ್ರೋಕಿಂಗ್, ವಿಮಾ ಕಂಪನಿಗಳೂ ಸೇರಿವೆ. 2021ರ ನವೆಂಬರ್ 30ರಂದು ಆರ್ಬಿಐ ಭಾರೀ ಸಾಲದ ಸುಳಿಯಲ್ಲಿ ಸಿಲುಕಿರುವ ರಿಲಯನ್ಸ್ ಕ್ಯಾಪಿಟಲ್ ಆಡಳಿತ ಮಂಡಳಿಯನ್ನು ವಿಸರ್ಜಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ