New Rules From December 1: ಡಿಸೆಂಬರ್ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ
ಎಲ್ಪಿಜಿ ದರ, ಜೀವನ ಪ್ರಮಾಣಪತ್ರ ಸಲ್ಲಿಕೆ ನಿಯಮ ಸೇರಿದಂತೆ ಡಿಸೆಂಬರ್ 1ರಿಂದ ಬದಲಾವಣೆಯಾಗಲಿರುವ ನಿಯಮಗಳ ವಿವರ ಇಲ್ಲಿದೆ.
ಪ್ರತಿ ತಿಂಗಳ ಆರಂಭದಲ್ಲಿ ಕೆಲವು ಹೊಸ ನಿಯಮಗಳು (New rules), ಬದಲಾವಣೆಗಳು ಆಗುತ್ತಿರುತ್ತವೆ. ಈ ಪೈಕಿ ಕೆಲವು ಜನಜೀವನದ ಮೇಲೆ ನೇರ ಪರಿಣಾಮ ಬೀರಿದರೆ ಇನ್ನು ಕೆಲವು ಪರೋಕ್ಷವಾಗಿ ಪರಿಣಾಮ ಬೀರುತ್ತವೆ. ಆರ್ಬಿಐ (RBI) ರಿಟೇಲ್ ಇ-ರೂಪಾಯಿ (e-Rupee) ಬಿಡುಗಡೆ, ಎಲ್ಪಿಜಿ ದರ, ಜೀವನ ಪ್ರಮಾಣಪತ್ರ ಸಲ್ಲಿಕೆ ನಿಯಮ ಸೇರಿದಂತೆ ಹಲವು ನಿಯಮಗಳಲ್ಲಿ ಡಿಸೆಂಬರ್ 1ರಿಂದ (December 1) ಬದಲಾವಣೆಯಾಗಲಿದೆ. ಬದಲಾಗಲಿರುವ ನಿಯಮಗಳ ವಿವರ ಇಲ್ಲಿದೆ;
ಪಿಎನ್ಬಿ ಎಟಿಎಂ ಕಾರ್ಡ್
ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವುದಕ್ಕಾಗಿ ಎಟಿಎಂನಿಂದ ಹಣ ವಿತ್ಡ್ರಾ ಮಾಡುವ ನಿಯಮದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬದಲಾವಣೆ ಮಾಡಿದೆ. ಎಟಿಎಂ ಕಾರ್ಡ್ ಅನ್ನು ಮಷಿನ್ನಲ್ಲಿ ಇನ್ಸರ್ಟ್ ಮಾಡಿದ ಬಳಿಕ ಗ್ರಾಹಕರ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಅದನ್ನು ನಮೂದಿಸಿದ ಬಳಿಕ ಹಣ ವಿತ್ಡ್ರಾ ಪ್ರಕ್ರಿಯೆ ಮುಂದುವರಿಸಬೇಕು. ಎಟಿಎಂ ಪಿನ್ ನಮೂದಿಸುವುದು ಮುಂದುವರಿಯಲಿದೆ. ಈ ನಿಯಮ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
ಜೀವನ್ ಪ್ರಮಾಣ (ಜೀವನ ಪ್ರಮಾಣಪತ್ರ ಸಲ್ಲಿಕೆ)
ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ. ಈ ಗಡುವಿನ ಒಳಗೆ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ. ಆದರೆ, ಈ ನಿಯಮ ‘ಉದ್ಯೋಗಿಗಳ ಪಿಂಚಣಿ ಯೋಜನೆ (EPS) 1995’ರ ಅಡಿಯಲ್ಲಿ ಬರುವವರಿಗೆ ಅನ್ವಯವಾಗುವುದಿಲ್ಲ. ಇಪಿಎಫ್ಒದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ, ಇಪಿಎಸ್ ವ್ಯಾಪ್ತಿಯಲ್ಲಿ ಬರುವ ಪಿಂಚಣಿದಾರು ಯಾವಾಗ ಬೇಕಿದ್ದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಇದು ಸಲ್ಲಿಸಿದ ನಂತರ ಒಂದು ವರ್ಷದ ಅವಧಿಗೆ ಮಾನ್ಯವಾಗಿರಲಿದೆ. ಹೀಗಾಗಿ ಈ ವರ್ಷ ಡಿಸೆಂಬರ್ 31ರ ಒಳಗೆ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ನೀವು ಇಪಿಎಸ್ ಪಿಂಚಣಿದಾರರೇ? ಇನ್ನು ಯಾವಾಗ ಬೇಕಾದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು
ಎಲ್ಪಿಜಿ ದರ ಬದಲಾವಣೆ ಸಾಧ್ಯತೆ
ನವೆಂಬರ್ 1ರಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಡಂರ್ ದರ 115 ರೂ. ಹೆಚ್ಚಳವಾಗಿತ್ತು. ಗೃಹ ಬಳಕೆಯ ಎಲ್ಪಿಜಿ ಸಿಲಿಡಂರ್ ದರ ಜುಲೈ ನಂತರ ಈವರೆಗೆ ಬದಕಾಗಿಲ್ಲ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ದರ ಪರಿಷ್ಕರಿಸಲಾಗುತ್ತದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಡಂರ್ ದರ ಡಿಸೆಂಬರ್ 1ರಂದು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ರೈಲು ವೇಳಾ ಪಟ್ಟಿ ಬದಲಾವಣೆ
ಚಳಿಗಾಲದ ಅವಧಿಯಲ್ಲಿ ಸಾಮಾನ್ಯವಾಗಿ ರೈಲುಗಳ ವೇಳಾಪಟ್ಟಿಯಲ್ಲಿ ರೈಲ್ವೆ ಇಲಾಖೆ ಬದಲಾವಣೆ ಮಾಡುತ್ತದೆ. ರೈಲುಗಳ ಪರಿಷ್ಕೃತ ವೇಳಾಪಟ್ಟಿ ಡಿಸೆಂಬರ್ 1ರಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: Bank Holidays In December: ಡಿಸೆಂಬರ್ನಲ್ಲಿ 14 ದಿನ ಬ್ಯಾಂಕ್ ರಜೆ! ಕರ್ನಾಟಕದ ರಜೆ ವಿವರ ಇಲ್ಲಿದೆ
ಡಿಸೆಂಬರ್ನಲ್ಲಿ ಬ್ಯಾಂಕ್ ರಜೆ ಪಟ್ಟಿ
ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕ್ಗಳ ರಜೆಗೆ ಸಂಬಂಧಿಸಿದ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಬಿಡುಗಡೆ ಮಾಡಿತ್ತು. ದೇಶದ ಎಲ್ಲ ವಲಯಗಳ ಲೆಕ್ಕಾಚಾರದ ಪ್ರಕಾರ, ಡಿಸೆಂಬರ್ನಲ್ಲಿ ಬ್ಯಾಂಕ್ಗಳು 14 ದಿನ ರಜೆ ಇರಲಿವೆ. ಆದರೆ, ಆಯಾ ಪ್ರದೇಶಗಳಿಗೆ ಅನುಗುಣವಾಗಿ ರಜೆ ನೀಡಲಾಗುವುದರಿಂದ ದೇಶದಾದ್ಯಂತ ಎಲ್ಲ ಕಡೆಗಳಲ್ಲಿಯೂ ಬ್ಯಾಂಕ್ಗಳು 14 ದಿನವೂ ರಜೆ ಇರುವುದಿಲ್ಲ. ಕರ್ನಾಟಕ ವಲಯದಲ್ಲಿ ಡಿಸೆಂಬರ್ ತಿಂಗಳಲ್ಲಿ 6 ದಿನ ಮಾತ್ರ ಬ್ಯಾಂಕ್ ರಜೆ ಇರಲಿದೆ. ಡಿಸೆಂಬರ್ 4ರಂದು ಭಾನುವಾರ, 10ರಂದು ಎರಡನೇ ಶನಿವಾರ, 11ರಂದು ಭಾನುವಾರ, 18ರಂದು ಭಾನುವಾರ, 24ರಂದು ನಾಲ್ಕನೇ ಶನಿವಾರ ಹಾಗೂ 25ರಂದು ಭಾನುವಾರ ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Wed, 30 November 22