ಮದುವೆಯಾದವರಿಗೆ ಕೆಲಸವಿಲ್ಲ ಅನ್ನೋದು ಸುಳ್ಳು; ಇತ್ತೀಚೆಗೆ ನೇಮಕವಾದವರಲ್ಲಿ ಶೇ. 25ರಷ್ಟು ವಿವಾಹಿತೆಯರೇ: ಫಾಕ್ಸ್​ಕಾನ್

|

Updated on: Jun 27, 2024 | 2:06 PM

Foxconn controversy updates: ಐಫೋನ್ ತಯಾರಿಸುವ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್​ಕಾನ್​ನ ತಮಿಳುನಾಡು ಘಟಕದಲ್ಲಿ ವಿವಾಹಿತ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿಲ್ಲ ಎನ್ನುವ ಸುದ್ದಿಯನ್ನು ಫಾಕ್ಸ್​ಕಾನ್ ನಿರಾಕರಿಸಿದೆ. ಪಿಟಿಐ ಸುದ್ದಿಸಂಸ್ಥೆಗೆ ಅನೌಪಚಾರಿಕವಾಗಿ ಮಾಹಿತಿ ನೀಡಿದ ಫಾಕ್ಸ್​ಕಾನ್​ನ ಅಧಿಕಾರಿಗಳು, ತಮ್ಮ ಘಟಕದಲ್ಲಿ ಲಿಂಗಭೇದವಾಗಲೀ, ಧರ್ಮಭೇದವಾಗಲೀ ಮಾಡುತ್ತಿಲ್ಲ ಎಂದಿದ್ದಾರೆ.

ಮದುವೆಯಾದವರಿಗೆ ಕೆಲಸವಿಲ್ಲ ಅನ್ನೋದು ಸುಳ್ಳು; ಇತ್ತೀಚೆಗೆ ನೇಮಕವಾದವರಲ್ಲಿ ಶೇ. 25ರಷ್ಟು ವಿವಾಹಿತೆಯರೇ: ಫಾಕ್ಸ್​ಕಾನ್
ಫಾಕ್ಸ್​ಕಾನ್
Follow us on

ಚೆನ್ನೈ, ಜೂನ್ 27: ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿರುವ ಫಾಕ್ಸ್​ಕಾನ್ ಘಟಕದಲ್ಲಿ ವಿವಾಹಿತ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎನ್ನುವಂತಹ ಮಾಧ್ಯಮ ವರದಿಯನ್ನು ಸಂಸ್ಥೆ ತಳ್ಳಿಹಾಕಿದೆ. ಫ್ಯಾಕ್ಟರಿಯಲ್ಲಿ ಕೆಲಸ ಸಿಗದೇ ಹೋದವರು, ಅಥವಾ ಕೆಲಸ ಬಿಟ್ಟು ಹೋದವರು ನೀಡಿದ ಹೇಳಿಕೆ ಆಧರಿಸಿ ಬಂದಿರುವ ಮಾಧ್ಯಮ ವರದಿ ಆಧಾರರಹಿತವಾದುದು ಎಂದು ಫಾಕ್ಸ್​ಕಾನ್ ಹೇಳಿದೆ. ಹೊಸದಾಗಿ ನೇಮಕವಾದವರಲ್ಲಿ ಶೇ. 25ರಷ್ಟು ಜನರು ವಿವಾಹಿತ ಮಹಿಳೆಯರೇ ಆಗಿದ್ದಾರೆ. ಹಾಗೆಯೇ, ಮಹಿಳೆಯರು ಸರ ಇತ್ಯಾದಿ ಆಭರಣ ಧರಿಸಲು ಅವಕಾಶ ಕೊಡುತ್ತಿಲ್ಲ ಎನ್ನುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಫಾಕ್ಸ್​ಕಾನ್, ಘಟಕದಲ್ಲಿ ಕೆಲಸ ಮಾಡುವಾಗ ಯಾರೂ ಕೂಡ ಲೋಹದ ವಸ್ತುಗಳನ್ನು ಧರಿಸಬಾರದು ಎನ್ನುವ ನಿಯಮ ಎಲ್ಲಾ ಉದ್ಯಮಗಳಲ್ಲೂ ಇದೆ. ತನ್ನ ಸಿಬ್ಬಂದಿವರ್ಗದಲ್ಲಿ ಧರ್ಮ, ಲಿಂಗ ಆಧಾರದ ಭೇದಭಾವ ಮಾಡುತ್ತಿಲ್ಲ ಎಂದು ಹೇಳಿದೆ.

ಆದರೆ, ಫಾಕ್ಸ್​ಕಾನ್​ನಿಂದ ಈ ಮೇಲಿನ ಹೇಳಿಕೆ ಅಥವಾ ಸ್ಪಷ್ಟನೆ ಅಧಿಕೃತವಾಗಿ ಬಂದಿದ್ದಲ್ಲ. ಕಂಪನಿಯ ಪ್ರತಿನಿಧಿಗಳು ಅನೌಪಚಾರಿಕವಾಗಿ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.

ಆ್ಯಪಲ್ ಸಂಸ್ಥೆಗೆ ಐಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸಿಕೊಡುವ ಫಾಕ್ಸ್​ಕಾನ್ ತನ್ನ ಶ್ರೀಪೆರಂಬದೂರು ಘಟಕದಲ್ಲಿ ವಿವಾಹಿತ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಮದುವೆಯಾದರೆ ಮಕ್ಕಳು ಮರಿಗಳಾಗಿ ರಜೆ ಹಾಕುವುದು, ಕುಟುಂಬದ ನಿರ್ವಹಣೆಯ ಹೊರೆಯಿಂದ ಸರಿಯಾಗಿ ಕೆಲಸಕ್ಕೆ ಬರದೇ ಇರುವುದು ಇತ್ಯಾದಿ ಕಾರಣಗಳಿಗೆ ವಿವಾಹಿತ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳದಂತೆ ಅಘೋಷಿತ ನಿಯಮ ಇದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಕೇಂದ್ರ ಸರ್ಕಾರ ಈ ವರದಿಯ ಅಂಶಗಳ ಬಗ್ಗೆ ತಮಿಳುನಾಡು ಸರ್ಕಾರದಿಂದ ವಿವರವಾದ ಮಾಹಿತಿ ಕೋರಿದೆ.

ಇದನ್ನೂ ಓದಿ: ಈ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತ ಮಹಿಳೆಯರಿಗೆ ಇಲ್ಲವಾ ಕೆಲಸ? ತಮಿಳುನಾಡಿನ ಫಾಕ್ಸ್​​ಕಾನ್ ಘಟಕದಲ್ಲಿ ಕೆಲಸಕ್ಕಾಗಿ ಮಹಿಳೆಯರ ಪರದಾಟ

ಫಾಕ್ಸ್​ಕಾನ್ ಘಟಕದಲ್ಲಿ ಒಟ್ಟು 45,000 ಮಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಬರೋಬ್ಬರಿ ಶೇ. 70ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಪುರುಷ ಉದ್ಯೋಗಿಗಳ ಸಂಖ್ಯೆ ಶೇ. 30ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ