ಇನ್ಷೂರೆನ್ಸ್ ಪಾಲಿಸಿಗೆ ಕಡ್ಡಾಯ ‘ಏಜೆಂಟ್ ಟ್ಯಾಗಿಂಗ್’; ಯಾರು ಯಾರಿಗೆ ವಿಮೆ ಮಾರಿದರು, ಮಾಹಿತಿ ಇರಬೇಕು: ಐಆರ್​ಡಿಎಐ ಮುಖ್ಯಸ್ಥರ ಪ್ರಸ್ತಾಪ

IRDAI chief Ajay Seth suggests agent tagging for every insurance policy: ವಿಮಾ ಕ್ಷೇತ್ರದಲ್ಲಿ ತಪ್ಪು ಮಾರಾಟಗಳನ್ನು ನಿಯಂತ್ರಿಸಲು ಐಆರ್​ಡಿಎಐ ಮುಖ್ಯಸ್ಥರು ಹೊಸ ಐಡಿಯಾ ಕಂಡುಕೊಂಡಿದ್ದಾರೆ. ಪ್ರತಿಯೊಂದು ಇನ್ಷೂರೆನ್ಸ್ ಪಾಲಿಸಿಗೂ ಏಜೆಂಟ್ ಟ್ಯಾಗ್ ಕಡ್ಡಾಯ ಇರಬೇಕೆಂದು ಅಜಯ್ ಸೇಠ್ ಪ್ರಸ್ತಾಪಿಸಿದ್ದಾರೆ. ಇನ್ಷೂರೆನ್ಸ್ ಪಾಲಿಸಿಗೆ ಪಾಯಿಂಟ್ ಆಫ್ ಸೇಲ್ಸ್ ವ್ಯಕ್ತಿಯ ಮಾಹಿತಿ ಜೋಡಿತವಾಗಿರಬೇಕು.

ಇನ್ಷೂರೆನ್ಸ್ ಪಾಲಿಸಿಗೆ ಕಡ್ಡಾಯ ‘ಏಜೆಂಟ್ ಟ್ಯಾಗಿಂಗ್’; ಯಾರು ಯಾರಿಗೆ ವಿಮೆ ಮಾರಿದರು, ಮಾಹಿತಿ ಇರಬೇಕು: ಐಆರ್​ಡಿಎಐ ಮುಖ್ಯಸ್ಥರ ಪ್ರಸ್ತಾಪ
ಲೈಫ್ ಇನ್ಶೂರೆನ್ಸ್
Image Credit source: Getty Images

Updated on: Jul 26, 2026 | 1:49 PM

ನವದೆಹಲಿ, ಜುಲೈ 26: ಇನ್ಷೂರೆನ್ಸ್ ಸೆಕ್ಟರ್​ನಲ್ಲಿ ಸಾಕಷ್ಟು ಮಿಸ್​ಸೆಲ್ಲಿಂಗ್ (Mis-selling) ನಡೆಯುತ್ತಿದೆ ಎನ್ನುವ ಆರೋಪ ಇದೆ. ಅಂದರೆ, ಒಬ್ಬ ವ್ಯಕ್ತಿಯ ಅಗತ್ಯಗಳನ್ನು ಪರಿಗಣಿಸದೆಯೇ ತಪ್ಪಾದ ವಿಮಾ ಪಾಲಿಸಿಗಳನ್ನು (Insurance Policies) ಮಾರಾಟ ಮಾಡಲಾಗುತ್ತಿರುವ ಪ್ರಕರಣಗಳು ಬಹಳ ಇವೆ. ಇದಕ್ಕೆ ಕಡಿವಾಣ ಹಾಕಲು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಐಆರ್​ಡಿಎಐ (IRDAI) ಮುಂದಾಗಿದೆ. ಪ್ರಾಧಿಕಾರ ಮುಖ್ಯಸ್ಥ ಅಜಯ್ ಸೇಠ್ ಅವರು ಪ್ರತಿಯೊಂದು ವಿಮಾ ಪಾಲಿಸಿಗೂ ಏಜೆಂಟ್ ಟ್ಯಾಗ್ ಕಡ್ಡಾಯಗೊಳಿಸುವ ಪ್ರಸ್ತಾಪ ಮಾಡಿದ್ದಾರೆ. ಅವರ ಪ್ರಕಾರ, ವಿಮಾ ಕಂಪನಿಗಳು ಪ್ರತಿಯೊಂದು ಇನ್ಶೂರೆನ್ಸ್ ಪಾಲಿಸಿಯನ್ನು ಅದನ್ನು ಮಾರಾಟ ಮಾಡಿದ ಏಜೆಂಟ್ ಅಥವಾ ಪಾಯಿಂಟ್ ಆಫ್ ಸೇಲ್ (POS) ವ್ಯಕ್ತಿಯೊಂದಿಗೆ ಕಡ್ಡಾಯವಾಗಿ ಲಿಂಕ್ (ಟ್ಯಾಗ್) ಮಾಡಬೇಕು.

ದೆಹಲಿಯಲ್ಲಿ ಇನ್ಷೂರೆನ್ಸ್ ಬ್ರೋಕರ್ಸ್ ಅಸೋಸಿಯೇಶನ್​ನ (ಐಬಿಎಐ) ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಜಯ್ ಸೇಠ್, “ಪ್ರತಿಯೊಂದು ಪಾಲಿಸಿಯನ್ನು ಮಾರಾಟ ಮಾಡಿದ ಮಧ್ಯವರ್ತಿ ಅಥವಾ ಏಜೆಂಟ್‌ನೊಂದಿಗೆ ನೇರವಾಗಿ ಗುರುತಿಸುವ (Agent Tagging) ವ್ಯವಸ್ಥೆ ಅಗತ್ಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ…

ಏನಿದು ‘ಏಜೆಂಟ್ ಟ್ಯಾಗಿಂಗ್’?

ಯಾವುದೇ ವಿಮಾ ಪಾಲಿಸಿಯನ್ನು (ಲೈಫ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್ ಅಥವಾ ಜನರಲ್ ಇನ್ಶೂರೆನ್ಸ್) ಮಾರಾಟ ಮಾಡಿದಾಗ, ಆ ಪಾಲಿಸಿಯ ದಾಖಲೆಯಲ್ಲಿ ಅದನ್ನು ಮಾರಾಟ ಮಾಡಿದ ಏಜೆಂಟ್ ಅಥವಾ POS ವ್ಯಕ್ತಿಯ ವಿವರಗಳು ಸ್ಪಷ್ಟವಾಗಿ ನಮೂದಾಗಿರಬೇಕು.

ಈ ನಿರ್ಧಾರದ ಮುಖ್ಯ ಉದ್ದೇಶಗಳೇನು?

  • ತಪ್ಪು ಮಾರಾಟ ತಡೆಗಟ್ಟುವುದು: ಗ್ರಾಹಕರಿಗೆ ತಪ್ಪಾದ ಅಥವಾ ಗೊಂದಲಕಾರಿ ಮಾಹಿತಿ ನೀಡಿ ಪಾಲಿಸಿ ಮಾರಾಟ ಮಾಡುವುದನ್ನು (Mis-selling) ತಡೆಯಲು ಇದು ನೆರವಾಗುತ್ತದೆ.
  • ಹೊಣೆಗಾರಿಕೆ: ಪಾಲಿಸಿ ಮಾರಾಟದ ನಂತರ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಏಜೆಂಟ್‌ನ ಜವಾಬ್ದಾರಿಯನ್ನು ಖಚಿತಪಡಿಸಲಾಗುತ್ತದೆ (Accountability).
  • ಪಾರದರ್ಶಕತೆ ಹೆಚ್ಚಿಸುವುದು: ವಿಮಾ ವಲಯದಲ್ಲಿ ಗ್ರಾಹಕರ ನಂಬಿಕೆಯನ್ನು ಬಲಪಡಿಸಲು ಮತ್ತು ಪಾಲಿಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.
  • ಕ್ಲೈಮ್ ಸಲ್ಲಿಕೆ ವೇಳೆ ನೆರವು: ಪಾಲಿಸಿದಾರರಿಗೆ ನವೀಕರಣ (Renewal) ಅಥವಾ ಕ್ಲೈಮ್ (Claim) ಸಲ್ಲಿಕೆಯ ಸಮಯದಲ್ಲಿ ಸೂಕ್ತ ಸಹಾಯ ಸಿಗುವಂತೆ ಮಾಡಲು ಇದು ಸಹಕಾರಿಯಾಗಿದೆ.

ಇದನ್ನೂ ಓದಿ: ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ

IRDAI ಮುಖ್ಯಸ್ಥ ಅಜಯ್ ಸೇಠ್ ಅವರ ಈ ಪ್ರಸ್ತಾಪವು ಜಾರಿಗೆ ಬಂದಲ್ಲಿ, ವಿಮಾ ರಂಗದಲ್ಲಿ ಗ್ರಾಹಕರ ಹಿತರಕ್ಷಣೆಯನ್ನು ಹೆಚ್ಚಿಸಲಿದ್ದು, ‘ತಪ್ಪು ಮಾರಾಟ’ಕ್ಕೆ ಕಡಿವಾಣ ಹಾಕಲು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇರತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us